ಬೆಂಗಳೂರು(ಜೂ.04): ಈಗಾಗಲೇ ಕೇಂದ್ರ ಸರ್ಕಾರವು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ ರಾಜ್ಯದಲ್ಲಿಯೂ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸುವುದೇ ಉತ್ತಮ.

ಒಂದು ವೇಳೆ ಪರೀಕ್ಷೆ ನಡೆಸಿದರೂ ಅದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅಂತಹ ದೊಡ್ಡ ಲಾಭವಾಗುವುದಿಲ್ಲ. ಬದಲಾಗಿ, ನಷ್ಟವಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಕೇಂದ್ರ ಸರ್ಕಾರವು ಪರೀಕ್ಷೆ ರದ್ದುಗೊಳಿಸಿರುವುದರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷೆಗಳು, ಮಧ್ಯ ವಾರ್ಷಿಕ ಪರೀಕ್ಷೆಗಳು ಸೇರಿದಂತೆ ಇನ್ನಿತರ ಮಾನದಂಡಗಳನ್ನು ಆಧರಿಸಿ ಫಲಿತಾಂಶ ಪ್ರಕಟಿಸಬಹುದು. ರಾಜ್ಯದಲ್ಲಿ ಬೋರ್ಡ್‌ ಪರೀಕ್ಷೆ ನಡೆಸಿದರೆ ಸರಿಯಾಗಿ ಪಾಠ ಪ್ರವಚನವೂ ನಡೆದಿಲ್ಲವಾದ್ದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕುತ್ತಾರೆ. ಒತ್ತಡದಲ್ಲಿ ಬರೆದ ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದರೂ ಅದರಿಂದ ಭವಿಷ್ಯದ ಪರೀಕ್ಷೆಗಳ ಮೇಲೆ ಅಂತಹ ಪರಿಣಾಮ ಏನೂ ಆಗುವುದಿಲ್ಲ. ಕೇವಲ ಪರೀಕ್ಷೆ ನಡೆಸಿದರು ಎಂಬ ಹೆಗ್ಗಳಿಕೆ ದೊರೆಯುತ್ತದೆಯೇ ಹೊರತು ವಿದ್ಯಾರ್ಥಿಗಳಿಗೆ ನೇರ ಲಾಭವಿರುವುದಿಲ್ಲ.

ಇದಲ್ಲದೆ, ಕೇಂದ್ರ ಸರ್ಕಾರವು ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಆಧರಿಸಿ ಅಂಕ ನೀಡುವಾಗ ತುಸು ಉದಾರ ಮೌಲ್ಯಮಾಪನ ನಡೆಯುತ್ತದೆ. ಆದರೆ, ಬೋರ್ಡ್‌ ಪರೀಕ್ಷೆಯಲ್ಲಿ ಮೌಲ್ಯಮಾಪನ ಕಠಿಣವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದರೆ ಅದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ನಷ್ಟವೇ ಹೆಚ್ಚು.

'ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆ ನಡೆಸಿ'

ರಾಜ್ಯದಲ್ಲಿ ಪರೀಕ್ಷೆ ನಡೆಸಿ ಹೆಚ್ಚಿನ ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗದಿದ್ದರೆ, ವೈದ್ಯ ಮತ್ತು ದಂತ ಪರೀಕ್ಷೆಗಳಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌), ಐಐಟಿ ಹಾಗೂ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ (ಜೆಇಇ) ರಾಜ್ಯದ ಸಿಇಟಿ ಸೇರಿದಂತೆ ಹಲವು ಪರೀಕ್ಷೆಗಳ ಮೇಲೆಯೂ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.

ಪರೀಕ್ಷೆ ಬೇಡವೇ ಬೇಡ

ಕೋವಿಡ್‌ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಸಮರ್ಪಕವಾಗಿ ಪಠ್ಯ ಬೋಧನೆ ನಡೆದಿಲ್ಲ. ಅದರಲ್ಲೂ ಇಂಟರ್ನೆಟ್‌, ಆನ್‌ಲೈನ್‌ ಶಿಕ್ಷಣ ಸೌಲಭ್ಯಗಳೂ ಇಲ್ಲದ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವುದು ಸಮಂಜಸವಲ್ಲ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ತಿಳಿಸಿದ್ದಾರೆ.