Karnataka Reva University ಯಲ್ಲಿ ಭಾರತ ಆಶಿಯಾನ್ ಶೃಂಗಸಭೆ
ರೇವಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಭಾರತ ಆಸಿಯಾನ್ ಶೃಂಗಸಭೆಯಲ್ಲಿ ಮ್ಯಾನ್ಮಾರ್, ಲಾವೋಸ್, ಕಾಂಬೋಡಿಯಾ ಸೇರಿದಂತೆ ಆಸಿಯಾನ್‌ನ ವಿವಿಧ ರಾಷ್ಟ್ರಗಳ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು (ಜು.): ಕೋವಿಡ್ ನಂತರ ಜಗತ್ತಿನ ಅಧಿಕಾರದ ಕೇಂದ್ರಗಳು ಬದಲಾಗಿವೆ. ಹಾಗಾಗಿ ಭಾರತ ಮತ್ತು ಆಗ್ನೇಯ ಏಷ್ಯಾ ಒಕ್ಕೂಟ ರಾಷ್ಟ್ರಗಳ (ಆಸಿಯಾನ್) ನಡುವಿನ ರಾಜತಾಂತ್ರಿಕ ಬಾಂಧವ್ಯಗಳು ಇನ್ನಷ್ಟು ಬಲಗೊಳ್ಳಬೇಕು ಎಂದು ಆಸಿಯಾನ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಆಶಯ ವ್ಯಕ್ತಪಡಿಸಿದ್ದಾರೆ. ನಗರದ ಹೊರವಲಯದ ರೇವಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆದ ಭಾರತ ಆಸಿಯಾನ್ ಶೃಂಗಸಭೆ- 2022ರಲ್ಲಿ ಮ್ಯಾನ್ಮಾರ್, ಲಾವೋಸ್, ಕಾಂಬೋಡಿಯಾ ಸೇರಿದಂತೆ ಆಸಿಯಾನ್‌ನ ವಿವಿಧ ರಾಷ್ಟ್ರಗಳ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಭಾಗವಹಿಸಿ ಮಾತನಾಡಿದರು. ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ ಮೋಕ್ಯಾವ್‌ಆಂಗ್ ಮಾತನಾಡಿ, ಕೋವಿಡ್ ನಂತರ ಜಗತ್ತಿನ ಅಧಿಕಾರದ ಕೇಂದ್ರಗಳು ಬದಲಾಗಿವೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ ಬಾಂಧವ್ಯಗಳು ಇನ್ನಷ್ಟುಸದೃಢಗೊಳ್ಳಬೇಕಿದೆ. ಉಭಯ ದೇಶಗಳ ವ್ಯಾಪಾರ ವಹಿವಾಟು, ದ್ವಿಪಕ್ಷೀಯ ನೀತಿ ವೃದ್ಧಿ ಹಾಗೂ ಬಾಂಧವ್ಯ ಉತ್ತಮಗೊಳಿಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದರು. ಲಾವೋಸ್‌ನ ಭಾರತೀಯ ರಾಯಭಾರಿ ಬೌನ್ನೆಮೆಚೌಂಘೋಮ್, ಕಾಂಬೋಡಿಯಾ ರಾಯಭಾರಿ ಉಂಗ್ಸೀನ್, ಭಾರತೀಯ ಆರ್ಥಿಕ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಡಾ. ಆಸಿಫ್ ಇಕ್ಬಾಲ್, ಐಎಫ್‌ಎಸ್ ಅಧಿಕಾರಿ ಅನಿಲ್ ತ್ರಿಗುಣಾಯತ್, ಅಮಿಟಿ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥೆ ಪ್ರೊ.ಡಿ.ಆರ್.ನಾಗಲಕ್ಷ್ಮಿ ಎಂ.ರಾಮನ್, ಐಆರ್‌ಎಸ್ ಅಧಿಕಾರಿ ಹರ್ಷವರ್ಧನ್, ಮ್ಯಾನ್ಮಾರ್ ಗೌರವ ಕಾನ್ಸೂಲ್ ಪ್ರೊ.ಡಿ.ಆರ್.ರಂಗನಾಥನ್, ರೇವಾ ವಿವಿಯ ಕುಲಾಧಿಪತಿ ಪ್ರೊ.ಪಿ.ಶ್ಯಾಮರಾಜು, ಕುಲಪತಿ ಡಾ. ಎಂ.ಧನಂಜಯ ಮತ್ತಿತರರು ಭಾಗವಹಿಸಿದ್ದರು.
ಪ್ರೊ.ಪಿ.ಶ್ಯಾಮರಾಜುಗೆ ಆಸಿಯಾನ್ ಬಿರುದು: ಶೃಂಗಸಭೆಯಲ್ಲಿ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಪಿ.ಶ್ಯಾಮರಾಜು ಅವರಿಗೆ ಭಾರತದ ಆಸಿಯಾನ್ ಟ್ರೇಡ್‌ಕೌನ್ಸಿಲ್‌ನ ‘ಕರ್ನಾಟಕದ ಟ್ರೇಟ್ ಕಮಿಷನರ್’ ಎಂಬ ಬಿರುದು ನೀಡಿ ಗೌರವಿಸಲಾಯಿತು. ಬಿರುದು ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನಗೆ ಸಿಕ್ಕ ವೈಶಿಷ್ಟ್ಯಪೂರ್ಣ ಗೌರವವಾಗಿದೆ. ಇದರಿಂದ ರೇವಾ ವಿವಿಯ ಧ್ಯೇಯ ಮತ್ತು ಉದ್ದೇಶವನ್ನು ವಿಸ್ತರಿಸುವ ಶಕ್ತಿ ನೀಡುತ್ತದೆ. ವಿವಿಯಲ್ಲಿ ಅಂತಾರಾಷ್ಟ್ರೀಯ ಬಾಂಧವ್ಯ ವೃದ್ಧಿಗೆ ಪೂರಕವಾದ ಸಮಗ್ರ ಶಿಕ್ಷಣಕ್ಕೆ ಇನ್ನಷ್ಟುಒತ್ತು ನೀಡುವುದಾಗಿ ನುಡಿದರು.
ರೇವಾ ವಿವಿಯಲ್ಲಿ ನಾಟ್ಯ, ಸಂಗೀತ, ಇಂಡೋಲಜಿ ಕೋರ್ಸ್ ಆರಂಭ: ರೇವಾ ವಿಶ್ವವಿದ್ಯಾಲಯದ ಪ್ರದರ್ಶಕ ಕಲೆ ಮತ್ತು ಭಾರತೀಯ ಅಧ್ಯಯನ ಶಾಸ್ತ್ರ ವಿಭಾಗವು ವಿವಿಧ ನಾಟ್ಯ ಮತ್ತು ಸಂಗೀತ ಪ್ರಕಾರಗಳು ಹಾಗೂ ಇಂಡೋಲಜಿ ಕುರಿತು ಕೋರ್ಸ್‌ಗಳನ್ನು ಆರಂಭಿಸಿದೆ.
ಪ್ರದರ್ಶಕ ಕಲೆ ವಿಭಾಗದಲ್ಲಿ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಮೋಹಿನಿಯಾಟ್ಟಂ ಹಾಗೂ ಕಥಕ್ ನೃತ್ಯಗಳು, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಹಾಗೂ ನಾಟಕ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಆನ್ಲೈನ್ ಡಿಪ್ಲೊಮಾ, ಆನ್‌ಲೈನ್ ಸರ್ಟಿಫಿಕೇಟ್ ಕೋಸ್‌ಗಳನ್ನು ಆರಂಭಿಸಿದೆ. ವಿಶ್ವ ವಿದ್ಯಾನಿಲಯದಲ್ಲಿ ಹಚ್ಚ ಹಸಿರಿನ ನಡುವೆ ನೃತ್ಯ ಸಂಗೀತ ಮತ್ತು ನಾಟಕ ಅಭ್ಯಾಸಕ್ಕೆ ಮಂಟಪ, ವೇದಿಕೆ ಹಾಗೂ ಅತ್ಯಾಧುನಿಕ ವ್ಯವಸ್ಥೆಯುಳ್ಳ ಆಡಿಟೋರಿಯಂಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಪರಿಣತ ಅಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವುದಾಗಿ ವಿಶ್ವವಿದ್ಯಾಲಯ ತಿಳಿಸಿದೆ.
ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಮತಿ: ಭರದಿಂದ ಸಾಗಿದ ಕಟ್ಟಡ
ಭಾರತೀಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಇಂಡೋಲಜಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಈ ಕೋರ್ಸ್‌ನಲ್ಲಿ ಭಾರತೀಯ ಶಾಸ್ತ್ರ ಮತ್ತು ಭಾರತೀಯ ಪಾರಂಪರಿಕ ಕಲೆಗಳು, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ನಾಟಕ, ಸೌಂದರ್ಯ ಮೀಮಾಂಸೆ, ನ್ಯಾಯಶಾಸ್ತ್ರ, ಸನಾತನ ಸಂಸ್ಥೆಗಳು, ಪ್ರಾಚೀನ ಸಾಮಾಜಿಕ, ರಾಜಕೀಯ ವಿಷಯಗಳ ಕುರಿತ ಅಧ್ಯಯನ, ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ವಿಜ್ಞಾನ, ಗಣಿತ, ಖಗೋಳಶಾಸ್ತ್ರ, ರಸಾಯನಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಲಾಗುವುದು.
KCET RESULTS 2022; ಸಿಇಟಿ ಫಲಿತಾಂಶ ಬಿಡುಗಡೆ, ಆಗಸ್ಟ್ 5ರಿಂದ ದಾಖಲಾತಿ ಪರಿಶೀಲನೆ
ಅಷ್ಟೇ ಅಲ್ಲದೆ ತಾಳೆ ಗ್ರಂಥಗಳು, ಪ್ರಾಚೀನ ಹಸ್ತಪ್ರತಿಗಳು ಮತ್ತು ಶಿಲಾಶಾಸನಗಳ ಕುರಿತ ಆಳವಾದ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9886062843 / 9886673452 ಸಂಪರ್ಕಿಸಬಹುದು.