ಉದ್ಯೋಗಕ್ಕಾಗಿ ಕ್ಯೂಆರ್ ಕೋಡ್ ಬೋರ್ಡ್ ಹಾಕಿದ ಇಂಗ್ಲೆಂಡ್ನ ಈ ಹುಡುಗ!
*ಸಾಮಾನ್ಯವಾಗಿ ರೆಸ್ಯೂಮ್ ಹಿಡಿದುಕೊಂಡು ಯುವಕರ ಉದ್ಯೋಗವನ್ನು ಹುಡುಕುತ್ತಾರೆ
*ಇಂಗ್ಲೆಂಡ್‌ನ ಈ ಜಾರ್ಜ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇದಕ್ಕಾಗಿ ಟೆಕ್ನಾಲಜಿ ಬಳಸಿಕೊಂಡಿದ್ದಾನೆ
*ರೆಸ್ಯೂಮ್, ಸಿವಿಗಳನ್ನು ಒಳಗೊಂಡ ಕ್ಯೂಆರ್ ಕೋಡ್ ರಚಿಸಿ ಉದ್ಯೋಗ ಬೇಡೆ ಆರಂಭ
ವಿದ್ಯಾಭ್ಯಾಸ ಮುಗೀತಿದ್ದಂತೆ ಉದ್ಯೋಗ ಹುಡುಕಿಕೊಳ್ಳೋದೇ ಸವಾಲಿನ ಕೆಲಸ. ಏನೇ ಟ್ಯಾಲೆಂಟ್ ಇದ್ರೂ, ಉತ್ತಮ ಮಾರ್ಕ್ಸ್ ಹೊಂದಿದ್ರೂ ಕೆಲಸವನ್ನ ಅರಸಿ ಹೋಗ್ಲೇಬೇಕು.. ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಸಿರಬೇಕು. ಸಾಮಾನ್ಯವಾಗಿ ನೇರವಾಗಿ ಕಂಪನಿಗೆ ಹೋಗಿ ರೆಸ್ಯೂಮ್ (Resume) ಕೊಡುವುದು.. ಇ-ಮೇಲ್ (email), ಫ್ಯಾಕ್ಸ್ (Fax), ಪೋಸ್ಟ್ (Post) ಮೂಲಕ ರೆಸ್ಯೂಮ್ ರವಾನಿಸುವುದು.. ವಾಟ್ಸ್ ಆ್ಯಪ್ (WhatsApp), ಲಿಂಕ್ಡ್ ಇನ್ (LinkedIn), ಶೈನ್ (Shine) ಆ್ಯಪ್ ಮತ್ತಿತ್ತರ ಆ್ಯಪ್ಗಳಲ್ಲಿ ತಮ್ಮ ಸ್ವವಿವರ ನೀಡಿ ಜಾಬ್ಗೆ ಪ್ರಯತ್ನಿಸುತ್ತೇವೆ. ಆದ್ರೆ ಬ್ರಿಟನ್ನ ಯುವಕ ಕಂಡುಕೊಂಡಿರೋ ಹೊಸ ಐಡಿಯಾ ಬಗ್ಗೆ ಕೇಳಿದ್ರೆ, ನೀವು ಅಚ್ಚರಿಪಡೋದು ಗ್ಯಾರಂಟಿ. ಅದುವೇ ಕ್ಯುಆರ್ ಕೋಡ್ (QR Code) ಐಡಿಯಾ! ಅರೇ.. ಏನಿದು ಕ್ಯುಆರ್ ಕೋಡ್ ಐಡಿಯಾ.. ಇದ್ರಿಂದ ಹೇಗೆ ಕೆಲ್ಸ ಹುಡುಕೋಕೆ ಸಾಧ್ಯ ಅಂತೀರಾ. ಈ ಕಾಲದಲ್ಲಿ ಅಸಾಧ್ಯವಾದುದೇನಿಲ್ಲ ಬಿಡಿ. ಇದನ್ನೇ ಅರಿತೇ ಈ ಯುವಕ ಬಹಳ ಸುಲಭವಾಗಿ ಉದ್ಯೋಗ ಹುಡುಕುವ ಪ್ರಯತ್ನ ಮುಂದುವರಿಸಿದ್ದಾನೆ. ಇಂಗ್ಲೆಂಡ್ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ (Cambridge University) ದ ವಿದ್ಯಾರ್ಥಿ ಜಾರ್ಜ್ ಕೊರೆನಿಯುಕ್ (George Koreniuk) ಇಂಥದ್ದೊಂದು ವಿಭಿನ್ನ ಪ್ರಯತ್ನ ನಡೆಸ್ತಿದ್ದಾರೆ. ಅರ್ಥಶಾಸ್ತ್ರ (Economics) ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡ್ತಿರೋ ಜಾರ್ಜ್, ಇನ್ನು ಮೊದಲ ವರ್ಷವನ್ನೇ ಪೂರೈಸಿಲ್ಲ. ಅದಾಗಲೇ ಹಣಕಾಸು ಕ್ಷೇತ್ರದಲ್ಲಿ ಉದ್ಯೋಗ ಹುಡುಕಲು ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಲಿಂಕ್ಡ್‌ಇನ್ (LinkedIn) ಹಾಗೂ ತನ್ನ ಸಿವಿಯ ಪ್ರೊಫೈಲ್‌ಗಳನ್ನು ಹೊಂದಿರುವ ಕ್ಯೂಆರ್ ಕೋರ್ಡ್ನ ಬೋರ್ಡ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಹುಡುಗನ ಪ್ರತಿಭೆಗೆ ಗೂಗಲ್, FB, Amazon ಫಿದಾ: ಕೋಟಿಗಿಂತಲೂ ಹೆಚ್ಚು ಸಂಬಳದ ಆಫರ್
ಇಮೇಲ್‌ಗಳನ್ನು ಓದುವುದಕ್ಕಿಂತ ಸಂಭಾವ್ಯ ಉದ್ಯೋಗದಾತರು, ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ನೋಡಲು ಬಯಸುತ್ತಾರೆ ಅನ್ನೋದು ವಿದ್ಯಾರ್ಥಿ ಜಾರ್ಜ್ ಮಾತು. ಇದು ತುಂಬಾ ಏಕತಾನತೆ ಮತ್ತು ಆತ್ಮರಹಿತವಾಗಿದೆ. ಆ ರೀತಿ ಮಾಡಲು ನನಗೆ ಇಷ್ಟವಿಲ್ಲ. ಹೀಗಾಗಿ ನನ್ನನ್ನು ತೋರಿಸಲು ಮತ್ತು ಜಗತ್ತಿಗೆ ತೆರೆದುಕೊಳ್ಳಲು ನಿರ್ಧರಿಸಿದೆ" ಅಂತಾರೆ ಜಾರ್ಜ್ ಕೋರೆನುಯಿಕ್.
ಕೆಲವು ವರ್ಷಗಳ ಹಿಂದೆ ಲಂಡನ್ (London)ನಲ್ಲಿ ಯುವಕನೊಬ್ಬ ಕ್ಯೂಆರ್ ಕೋಡ್ ಮೂಲಕ ಕೆಲಸ ಹುಡುತ್ತಿರುವ ಬಗ್ಗೆ ಒಂದು ಕಥೆಯನ್ನು ನೋಡಿದ್ದೆ. ಅದು ನನ್ನ ತಲೆಯಲ್ಲಿ ಹಾಗೇ ಉಳಿದಿತ್ತು. ಸಾಕಷ್ಟು ಉದ್ಯೋಗಗಳನ್ನು ಹುಡುಕಿದ ಬಳಿಕ ನಾನು ಸೃಜನಶೀಲತೆಯೊಂದಿಗೆ ಬರಬೇಕು ಎಂದು ತೀರ್ಮಾನಿಸಿದ್ದೇನೆ. ಏಕೆಂದರೆ ಜನರು ನಿಮ್ಮನ್ನು ನೋಡಲು ಅಥವಾ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗದಿದ್ದಾಗ ಅವರನ್ನು ತಲುಪುವುದು ನಿಜವಾಗಿಯೂ ಕಷ್ಟ ಎಂಬ ಜಾರ್ಜ್ ಹೇಳಿಕೆ ಉಲ್ಲೇಖಿಸಿ ಅನೇಕ ಇಂಗ್ಲಿಷ್ ಮಾಧ್ಯಮಗಳು ವರದಿ ಮಾಡಿವೆ.
ಕ್ಯುಆರ್ ಕೋಡ್ (QR -Quick Response code) ಇದೀಗ ಎಲ್ಲದ್ದಕ್ಕೂ ಟ್ರೇಡ್ ಮಾರ್ಕ್ ಆಗಿದೆ. ಬಾರ್ ಕೋಡ್ ಮೂಲಕ ಓದಬಹುದಾದಂತ ಒಂದು ಲೇಬಲ್ ಇದರಲ್ಲಿದ್ದು, ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕ್ಯುಆರ್ ಕೋಡ್ ನಾಲ್ಕು ಬಗೆಯ ಪ್ರಮಾಣೀಕೃತ ಸಂಕೇತೀಕರಣ (standardized encoding)ಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಸ್ಮಾರ್ಟ್ ಫೋನ್, ಕ್ಯಾಮೆರಾದಂತಹ ಉಪಕರಣಗಳ ಮೂಲಕ ಇದನ್ನು ಓದಬಹುದು.
ಇದನ್ನೂ ಓದಿ: ಉದ್ಯೋಗ, ವಾಸಕ್ಕಷ್ಟೇ ಅಲ್ಲ, ವ್ಯಾಸಂಗಕ್ಕೂ ಬೆಂಗಳೂರೇ ನಂಬರ್ 1: ಸಮೀಕ್ಷೆ
ಇನ್ನು ಜಾರ್ಜ್ ಕೋರೆನುಯಿಕ್ರ ಈ ಐಡಿಯಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ. "ನಾನು ನಿನ್ನೆ ಕ್ಯಾನರಿ ವಾರ್ಫ್‌ನಲ್ಲಿ ಈ ಅತ್ಯಂತ ಉದ್ಯಮಶೀಲ ಯುವಕನನ್ನು ಕಂಡೆ. ಜಾರ್ಜ್ ಅವರು ಅರ್ಥಶಾಸ್ತ್ರದಲ್ಲಿ ಕೆಲಸದ ಅನುಭವವನ್ನು ಹುಡುಕುತ್ತಿದ್ದಾರೆ. ಆದ್ದರಿಂದ ಯಾರಾದರೂ ಆಸಕ್ತಿ ಹೊಂದಿದ್ದರೆ ಅಥವಾ ಇಂಟರ್ನ್‌ಗಾಗಿ ಹುಡುಕುತ್ತಿದ್ದರೆ ದಯವಿಟ್ಟು ಅವರನ್ನು ಸಂಪರ್ಕಿಸಿ"ಎಂದು ಆಂಡ್ರ್ಯೂ ಆರ್ಚಿಬಾಲ್ಡ್ ಎಂಬ ಬಳಕೆದಾರ ಬರೆದುಕೊಂಡಿದ್ದಾರೆ. ಅಂದಹಾಗೇ ವಿದ್ಯಾರ್ಥಿ ಜಾರ್ಜ್ಗೆ ಇನ್ನೂ ಕೆಲಸ ಸಿಕ್ಕಿಲ್ಲ. ಆದ್ರೆ ಈತನ ಐಡಿಯಾ ಬಗ್ಗೆ ಸಖತ್ ಸದ್ದು ಮಾಡ್ತಿದೆ.