ಬೆಂಗಳೂರು[ಜ.30]: ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು 2020-21ನೇ ಸಾಲಿನಿಂದ ನೀಟ್‌ ಪರೀಕ್ಷೆ ಮಾದರಿಯಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ 27ನೇ ಆಡಳಿತ ಮಂಡಳಿ ಸಭೆಯಲ್ಲಿ, ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯ ಹಾಗೂ ದಂತವೈದ್ಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮಾದರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ನಡೆಸಲು ತೀರ್ಮಾನಿಸಲಾಯಿತು.

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು!

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಿಇಟಿ ಪರೀಕ್ಷೆಯನ್ನು ವಿದ್ಯಾರ್ಥಿಸ್ನೇಹಿಗೊಳಿಸುವ ಮತ್ತು ದುಬಾರಿ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಸ್ತುತ ಸಿಇಟಿಯಲ್ಲಿ ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಸೇರಿ ನಾಲ್ಕು ವಿಷಯಗಳ ಪರೀಕ್ಷೆಯನ್ನು ಎರಡು ದಿನಗಳ ಕಾಲಾವಧಿಯಲ್ಲಿ ನಡೆಸಲಾಗುತ್ತಿದೆ. ಪ್ರತಿ ಪರೀಕ್ಷೆಗೆ 60 ಅಂಕಗಳಂತೆ 240 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ಪತ್ರಿಕೆಗೆ ಒಂದು ಗಂಟೆ 20 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದೆ. ಆದರೆ, ನೀಟ್‌ನಲ್ಲಿ ನಾಲ್ಕು ವಿಷಯಗಳಿಗೆ ಸೇರಿದ 180 ಪ್ರಶ್ನೆಗಳನ್ನು (ಒಟ್ಟು ಅಂಕ 720 ಅಂಕಗಳಿಗೆ) ನೀಡಿ, ಮೂರು ಗಂಟೆಗಳ ಕಾಲಾವಧಿಯಲ್ಲಿ ಒಂದೇ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿಯೇ ಸಿಇಟಿ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಗಡಿನಾಡು ಪ್ರದೇಶ ವಿಸ್ತರಣೆ:

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಕಾಸರಗೋಡು ಹಾಗೂ ಮೆಹಬೂಬ್‌ ನಗರವನ್ನು ಸಿಇಟಿಯಲ್ಲಿ ಗಡಿನಾಡ ಪ್ರದೇಶವೆಂದು ಪರಿಗಣಿಸಲಾಗಿದೆ. ಶೇ.40ಕ್ಕಿಂತ ಹೆಚ್ಚಿನ ಕನ್ನಡಿಗರು ಇರುವ ಪಂಚಾಯತಿ, ಪಟ್ಟಣ, ಗ್ರಾಮಗಳಲ್ಲಿ ನೆಲೆಸಿರುವವರನ್ನು ಗಡಿನಾಡ ಕನ್ನಡಿಗರು ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುವ ಕಾಸರಗೋಡು ಹಾಗೂ ಮೆಹಬೂಬ್‌ನಗರ ಜಿಲ್ಲೆಯ ವಿದ್ಯಾರ್ಥಿಗಳನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳನ್ನಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ನೇಮಕಾತಿ ಪರೀಕ್ಷೆಗೆ ಕೆಇಎ ಪ್ರತ್ಯೇಕ ಕಚೇರಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರತ್ಯೇಕ ಕಚೇರಿ ಸ್ಥಾಪಿಸಬೇಕಾಗುತ್ತದೆ. ಸದ್ಯ ವೃತ್ತಿಪರ ಕೋರ್ಸ್‌ಗಳ ಪರೀಕ್ಷೆ ಹಾಗೂ ಇಲಾಖಾವಾರು ಪರೀಕ್ಷೆಗಳನ್ನು ನಡೆಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಭಾಗವನ್ನು ಪ್ರತ್ಯೇಕಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು.

ಭಾರತದ ನೀಟ್ ಎಕ್ಸಾಂ ಬಗ್ಗೆ ಆಸ್ಟ್ರೇಲಿಯಾದಿಂದ ಬಂದ ಸುದ್ದಿ

ಸದ್ಯ ಮಲ್ಲೇಶ್ವರದಲ್ಲಿರುವ ಕಚೇರಿಯಲ್ಲಿ ವೃತ್ತಿಪರ ಕೋರ್ಸ್‌ಗಳ ಪರೀಕ್ಷೆ ನಡೆಸಲಾಗುತ್ತದೆ. ಪ್ರಾಧಿಕಾರದಲ್ಲಿ 45 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒತ್ತಡ ಕಡಿಮೆ ಮಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಶೇ.30ರಷ್ಟುವೇತನ ಹೆಚ್ಚಳ ಮಾಡಲಾಗಿದೆ. ಇಲಾಖಾವಾರು ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಕಚೇರಿ ತೆರೆಯಲಾಗುತ್ತದೆ. ಹೊಸ ಕಚೇರಿಗೆ ಪ್ರತ್ಯೇಕ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದು ಹೇಳಿದರು.

ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಟ್ಟಡದಲ್ಲಿ ಮೂರನೇ ಅಂತಸ್ತನ್ನು ನಿರ್ಮಿಸಲು 4.50 ಕೋಟಿ ರು. ಅನುಮೋದನೆ ನೀಡಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಅರಂಭವಾಗಲಿದೆ ಎಂದರು.