ಭಾರತದ ಯುವ ಪೀಳಿಗೆಗಳಲ್ಲಿ ತಮ್ಮ ಜೀವನದಲ್ಲಿ ಉನ್ನತ ಹುದ್ದೆಗೆ ಹೋಗಬೇಕೆಂಬ ಕನಸನ್ನು ಹೊತ್ತುಕೊಂಡಿರುತ್ತಾರೆ. ಅದರಲ್ಲಿ ಐಎಎಸ್ ಕೂಡ ಒಂದು. ಐಎಎಸ್ ಆಗುವುದು ಸುಲಭದ ಮಾತಲ್ಲ. ಇದಕ್ಕೆ ಪ್ರತಿ ವರ್ಷ ಕರೆಯಲಾಗುವ ಪರೀಕ್ಷೆಯನ್ನೂ ಎದುರಿಸಬೇಕಾಗುತ್ತದೆ. ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಪರೀಕ್ಷೆಗೆಂದೇ ಕೋಚಿಂಗ್‌ಗಳಿಗೂ ಹೋಗುತ್ತಾರೆ. ಐಎಎಸ್‌ಗಾಗಿ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಅದರಲ್ಲಿ ತೇರ್ಗಡೆಯಾಗುವವರು ಕೇವಲ 1000 ಜನರಷ್ಟೆ.

ಸುರಭಿ ಗೌತಮ್ 2016ರ ಯುಪಿಎಸ್‌ಸಿ ಬ್ಯಾಚ್‌ನಲ್ಲಿ ದೇಶದಲ್ಲೇ ೫೦ನೇ ರ‌್ಯಾಂಕ್ ಪಡೆದು ತೇರ್ಗಡೆಯಾದವರು. ಇವರು ಪ್ರಸ್ತುತ ಗುಜರಾತ್‌ನ ವಡೋದರಾದಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿದ್ದಾರೆ. ಇಲ್ಲಿ ಐಎಎಸ್ ಪರೀಕ್ಷೆಗಾಗಿ ತಯಾರಾಗುತ್ತಿರುವವರಿಗೆ ಹಾಗೂ ಅದಕ್ಕೆ ಹೇಗೆ ಸಿದ್ಧತೆ ನಡೆಸಬೇಕೆಂದು ಕೆಲ ಸಲಹೆಗಳನ್ನು ನೀಡಿದ್ದಾರೆ.

ಆಯ್ಕೆ ವಿಷಯಗಳ ಬಗ್ಗೆ ಎಚ್ಚರ

ಪದವಿ ಹಾಗೂ ಸ್ನಾತಕೋತ್ತರ ಪದವಿ ನಂತರ ಐಎಎಸ್ ಪರೀಕ್ಷೆ ಕಟ್ಟುವವರಿಗೆ ಸಮಾಜಶಾಸ್ತ್ರ, ಇತಿಹಾಸ, ಭೌಗೋಳಶಾಸ್ತ್ರ ಹೀಗೆ ಆಯ್ಕೆ ಮಾಡುವ ವಿಷಯಗಳಲ್ಲಿ ಜಾಗೃತೆ ಇರಬೇಕು. ಆದಷ್ಟು ಸುಲಭ ಅಥವಾ ಓದಿದ ವಿಷಯವನ್ನೇ ಆಯ್ಕೆ ಮಾಡಿದರೆ ಉತ್ತಮ.

ಸಮಯ ಹೊಂದಾಣಿಕೆ

ದಿನವಿಡೀ ಓದಿದರೆ ತಲೆಗೆ ಹತ್ತುವುದು ಕಷ್ಟ. ಸಾಮಾನ್ಯ ವಿಭಾಗಕ್ಕೆ ಹೆಚ್ಚು ಸಮಯ ಕೊಡುವ ಬದಲು ಆಯ್ಕೆ ಮಾಡಿದ ವಿಷಯಕ್ಕೆ ಹೆಚ್ಚು ಸಮಯ ನಿಗದಿಸಬೇಕು. ಆಗ ಎರಡನ್ನೂ ಸಮಬಲವಾಗಿ ನಿಭಾಯಿಸಬಹುದು. ಓದಿದ್ದುನ್ನು ಮರೆತು ಹೋಗುವುದನ್ನು ತಪ್ಪಿಸಲು ಪಾಯಿಂಟ್ಸ್ ಮಾಡಿಕೊಂಡು ನಂತರ ಅದನ್ನು ಒಮ್ಮೆ ರಿವೈಸ್ ಮಾಡಿಕೊಳ್ಳಬೇಕು. ಎಷ್ಟು ಬರೆಯುತ್ತೀರೋ ಅಷ್ಟು ನೆನಪಿನಲ್ಲಿಡುವುದು ಸುಲಭ.

ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ನಿಖರತೆ

ಐಎಎಸ್‌ನಲ್ಲಿ ಪರೀಕ್ಷೆಗೆ ಹೆಚ್ಚು ಮಹತ್ವವಾಗುವುದು ಎಂದರೆ ಆಯ್ಕೆ ವಿಷಯ. ಆಯ್ಕೆ ಮಾಡಿಕೊಳ್ಳುವಾಗ ನಾವು ಆ ವಿಷಯದಲ್ಲಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದೇವೆ ಹಾಗೂ ಅದರ ಬಗ್ಗೆ ನಮ್ಮಲ್ಲಿನ ಆತ್ಮವಿಶ್ವಾಸವೂ ಎಷ್ಟಿದೆ ಎಂಬುದು ಇಲ್ಲಿ ಗಣನೆಗೆ ಬರುತ್ತದೆ.

ಪುನರಾವರ್ತನೆ

ಪ್ರತಿಯೊಬ್ಬರೂ ಮಾಡಬೇಕಾದ ಮಹತ್ವದ ಕೆಲಸ ಎಂದರೆ ಪುನರಾವರ್ತನೆ. ಮೊದಲು ಪ್ರಾಥಮಿಕ ನಂತರ ಮೇನ್ ಎಕ್ಸಮ್ ಬರುತ್ತದೆ. ಒಂದು ಗಂಟೆ ಓದಿದರೂ ನಾವು ಓದಿದ್ದನ್ನು ಪುನರಾವರ್ತಿಸಬೇಕು. ಆಗಾಗ ಹೀಗೆ ಮಾಡುತ್ತಿದ್ದರೆ ಓದಿದ್ದು ನೆನಪಿನಲ್ಲಿ ಇರುತ್ತದೆ. ಅದನ್ನು ನೋಡದೆ ಪಟ್ಟಿ ಮಾಡಬೇಕು. ಪಟ್ಟಿ ಮಾಡಿದ್ದನ್ನು ಸರಿ ತಪ್ಪುಗಳನ್ನು ಪರೀಕ್ಷಿಸಬೇಕು. ಆಗ ನಾವು ತಪ್ಪಿದ್ದೆಲ್ಲಿ, ಅದನ್ನು ಹೇಗೆ ನೆನಪಿನಲ್ಲಿಡಬೇಕು ಎಂಬುದು ತಿಳಿಯುತ್ತದೆ.

ಪರೀಕ್ಷೆಗೂ ಮುನ್ನ

ಪರೀಕ್ಷೆ ಹತ್ತಿರವಾಗುತ್ತಿದೆ ಎಂದಾಗ ಓದುವುದು ನಿಲ್ಲಿಸಬೇಕು. ಭಯ, ಉದ್ವೇಗದಿಂದ ಓದಿದ್ದು ಮರೆಯುವ ಸಾಧ್ಯತೆಗಳು ಇರುತ್ತದೆ. ವಾರವಷ್ಟೇ ಇದೇ ಎಂದಾದಾಗ, ನೀವು ಓದಿದ್ದಲ್ಲಿ ಯಾವುದಾದರೊಂದು ವಿಷಯವನ್ನು ನೀವೆ ತೆಗೆದುಕೊಂಡು ಅದರ ಬಗ್ಗೆ ಬರೆಯಿರಿ. ಪ್ರತಿ ದಿನ ಹೀಗೆ ಮಾಡಿದಾಗ ಪರೀಕ್ಷೆ ಎದುರಿಸುವಾಗ ಆತ್ಮವಿಶ್ವಾಸ ಹೆಚ್ಚುತ್ತದೆ.

ಪರೀಕ್ಷೆ ಸಂದರ್ಭ

  • ಪ್ರಶ್ನೆ ಪತ್ರಿಕೆ ಕೊಟ್ಟ ತಕ್ಷಣ ಉತ್ತರ ಬರೆಯುವ ಬದಲು ಪ್ರಶ್ನೆಗಳನ್ನು ಒಮ್ಮೆ ಓದುವುದು.
  • ಪ್ರತಿ ಪ್ರಶ್ನೆಗೆ ಎಷ್ಟು ಅಂಕಗಳನ್ನು  ನಿಗದಿಸಲಾಗಿದೆ ಎಂದು ಗಮನಿಸಿ ಅದಕ್ಕೆ ಅನುಗುಣವಾಗಿ ಉತ್ತರ ಬರೆಯುವುದು.
  • ಪ್ರತಿ ಪ್ರಶ್ನೆಗೆ ಉತ್ತರಿಸುವಾಗ ಅವುಗಳಿಗೆ ಇರುವ ಸಮಯವನ್ನು ವಿಭಾಗಿಸಿ ಉತ್ತರಿಸುವುದು. ಯಾವುದೇ ಪ್ರಶ್ನೆಗೆ ಉತ್ತರ ಬರಿಯುವಾಗ ಸಮಯ ವ್ಯರ್ಥ ಮಾಡಬೇಡಿ. ಎಷ್ಟು  ಬೇಕೋ ಅಷ್ಟೇ ಉತ್ತರಿಸುವುದು.
  • ಪರೀಕ್ಷೆ ಮುಗಿದ ನಂತರ ಸಮಯವಿದಲ್ಲಿ ಪ್ರಶ್ನೆಗಳನ್ನು ಹಾಗೂ ಬರೆದ ಉತ್ತರಗಳನ್ನು ಒಮ್ಮೆ ಗಮನಿಸಿ. ಬರೆದ ಉತ್ತರಗಳು ಅದಕ್ಕೆ ಅನುಗುಣವಾಗಿದೆಯೇ ಎಂದು ಒಮ್ಮೆ ಗಮನಿಸಿ.
  • ಕಡ್ಡಾಯವಾಗಿರುವ ಪ್ರಶ್ನೆಗೆ ಉತ್ತರಿಸಿದೆಯೇ ಎಂದು ಗಮನಿಸುವುದು.