ಬೆಂಗಳೂರು(ಆ.12):  ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಬೇಕೆಂಬ ತವಕ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿದ್ದು, ಕೊರೋನಾ ಭೀತಿಯನ್ನು ಲೆಕ್ಕಿಸದೆ ಮಂಗಳವಾರ ನಗರದ ವಿವಿಧ ಪಿಯು ಕಾಲೇಜುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಪ್ರವೇಶಕ್ಕಾಗಿ ಅರ್ಜಿ ಪಡೆದರು.

ಮಲ್ಲೇಶ್ವರದ ಎಂಇಎಸ್‌, ಬಸವನಗುಡಿ ನ್ಯಾಷನಲ್‌ ಕಾಲೇಜು, ಹನುಮಂತನಗರ ಪಿಇಎಸ್‌ ಕಾಲೇಜು, ಮಹಾವೀರ್‌ ಜೈನ್‌, ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಕೋಟೆ ಕಾಲೇಜು ಸೇರಿದಂತೆ ನಗರದ ಪ್ರತಿಷ್ಠಿತ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಹಾಗೂ ಪೋಷಕರ ದೊಡ್ಡ ದೊಡ್ಡ ಸಾಲುಗಳು ಕಂಡುಬಂತು.

ಪಿಯುಸಿ ಪರೀಕ್ಷೆಯಲ್ಲಿ ಪಡೆದದ್ದು 98 ಅಂಕ, ಅಂಕ​ಪ​ಟ್ಟಿ​ಯಲ್ಲಿ ಬಂದಿದ್ದು 20 ಅಂಕ!

ಮಳೆಯನ್ನು ಲೆಕ್ಕಿಸದ ವಿದ್ಯಾರ್ಥಿಗಳು:

ಈಗಷ್ಟೇ ಶಾಲಾ ದಿನಗಳನ್ನು ಮುಗಿಸಿರುವ ವಿದ್ಯಾರ್ಥಿಗಳು, ಕಾಲೇಜಿನ ಮೆಟ್ಟಿಲು ಹತ್ತಬೇಕೆಂಬ ಉತ್ಸಾಹದಿಂದ ಮೊದಲ ದಿನವೇ ಅರ್ಜಿ ಪಡೆದರು. ಮಳೆ ಸುರಿಯುತ್ತಿದ್ದರೂ ಛತ್ರಿ ಹಿಡಿದು, ರೈನ್‌ಕೋಟ್‌ ಧರಿಸಿ ಕಾಲೇಜುಗಳಿಗೆ ಆಗಮಿಸಿದ್ದರು.

ಕೊರೋನಾ ಕಾರಣದಿಂದ ತಮ್ಮ ಸಹಪಾಠಿಗಳನ್ನು ಭೇಟಿಯಾಗಿ ತುಂಬಾ ತಿಂಗಳುಗಳು ಕಳೆದಿದ್ದವು. ಅರ್ಜಿ ಪಡೆಯುವ ನೆಪದಲ್ಲಿ ಭೇಟಿಯಾಗಿ ಫಲಿತಾಂಶದ ಬಗ್ಗೆ ಪರಸ್ಪರ ಸಂತೋಷವನ್ನು ಸಹ ಹಂಚಿಕೊಂಡರು. ತಾವು ಪಡೆಯಬೇಕಿರುವ ವಿಷಯಗಳನ್ನು ಚರ್ಚಿಸಿ ಕಾಲೇಜು ಸೇರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

2020-21ನೇ ಸಾಲಿನ ಪಿಯು ಕಾಲೇಜುಗಳು ಅಧಿಕೃತವಾಗಿ ಯಾವಾಗ ಆರಂಭವಾಗಲಿವೆ ಎಂಬ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೂ ಕಾಲೇಜುಗಳು ದಾಖಲಾತಿ ಪ್ರಕ್ರಿಯೆ ಆರಂಭಿಸುತ್ತಿರುವುದರಿಂದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಬೇಕು ಎಂಬ ಉದ್ದೇಶದಿಂದ ಅರ್ಜಿಗಳನ್ನು ಪಡೆದಿದ್ದಾರೆ.