Asianet Suvarna News Asianet Suvarna News

ಕಾಶ್ಮೀರ ಮಾತ್ರವಲ್ಲ, ಕಾಶ್ಮೀರಿಗರೂ ನಮ್ಮವರು

ಕಾಶ್ಮೀರದಲ್ಲಿನ ಜನರಿಗೆ ಐತಿಹಾಸಿಕ ಕಾರಣಗಳಿಂದಾಗಿ ಸರ್ಕಾರ ಮತ್ತು ಆಡಳಿತಗಳ ಬಗ್ಗೆ ಇಂದಿಗೂ ಸಂಶಯ ಮತ್ತು ಭಯ ಹೋಗಿಲ್ಲ. ಇಂಥ ಸೂಕ್ಷ್ಮಗಳನ್ನೆಲ್ಲ ಅರ್ಥ ಮಾಡಿಕೊಳ್ಳದೆ ಸಮಸ್ಯೆ ಇತ್ಯರ್ಥ ಅಸಾಧ್ಯ. ಹಾಗಾಗಿ ಕಾಶ್ಮೀರ ಕುರಿತಂತೆ ಕೇವಲ ಭಾವನಾತ್ಮಕವಾಗಿ ಬೆಂದುಹೋಗುವುದರ ಬದಲು ಕೆಲವು ದೃಢ ನಿರ್ಧಾರ ತಳೆದು ಮಾನವೀಯತೆ ಮೆರೆಯುವುದು ಅನಿವಾರ್ಯ

Patisawalu Column By K V Dhananjay

ಅದು 1949ರ ಜನವರಿ ಒಂದು. ಭಾರತ- ಪಾಕಿಸ್ತಾನಗಳೆರಡೂ ಜಮ್ಮು-ಕಾಶ್ಮೀರದ ಗಡಿಯಲ್ಲಿ ‘ಯುದ್ಧ ವಿರಾಮ’ ಘೋಷಿಸಿದ್ದವು. ನಂತರ ಭಾರತವು ಜಮ್ಮು-ಕಾಶ್ಮೀರದ ಮೂಲ ಪ್ರಾಂತ್ಯವನ್ನು ತನ್ನ ರಾಜ್ಯಗಳಲ್ಲೊಂದು ಎಂದು ತನ್ನ ಸಂವಿಧಾನದಲ್ಲಿ ಅಧಿಕೃತವಾಗಿ ಘೋಷಿಸಿದೆ–ಯಾದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಾಂತ್ಯವನ್ನು ಕಾಶ್ಮೀರವೆಂದಷ್ಟೇ ಕರೆಯಲಾ–ಗು–ತ್ತದೆ, ‘ಜಮ್ಮು’ ಹೆಸರಿಲ್ಲದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದಿ ಕಾಶ್ಮೀರ’ವೆಂದು ಕರೆಯ–ಲಾಗುತ್ತದೆ. ಕೆಲವೊಮ್ಮೆ, ವಿದೇಶಗಳಲ್ಲಿ ತಯಾ–ರಾ–ಗುವ ಭಾರತದ ಭೂಪಟಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವೆಂದು ತೋರಿಸದಿರಲು ಈ 1949ರ ಯುದ್ಧ ವಿರಾ–ಮವೇ ಕಾರಣ. ಈವರೆಗಿನ ಸೇನಾ ಕಾರ್ಯಾಚ–ರಣೆಗೆ 50,000ಕ್ಕೂ ಹೆಚ್ಚು ಸಾವುಗಳು ಭಾರತ ಭಾಗದ ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿವೆ. ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ ಅಂದರೆ, ‘ಆಜಾದಿ ಕಾಶ್ಮೀರ’ದಲ್ಲಿ ಸೇನಾ ಕಾರ‌್ಯಾಚರಣೆ ಇಲ್ಲವೇ ಹಿಂಸೆ ವಿರಳವೆಂದರೆ ತಪ್ಪಾಗಲಾರದು.

ಈಗ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಉದ್ದೇಶವು ಭಾರತಕ್ಕಿದೆಯೇ ಎಂಬ ಪ್ರಶ್ನೆಗೆ, ವಿಶ್ವ ಸಮುದಾಯಕ್ಕೆ ಭಾರತ ನೀಡಿರುವ ಅಧಿಕೃತ ಉತ್ತರವು ನೇರವಾಗಿಯೇ ಇದೆ: ‘‘ಸಾಂವಿಧಾನಿಕವಾಗಿ, ಕಾಶ್ಮೀರ ರಾಜನ ಆಳ್ವಿಕೆಯ ಪ್ರದೇಶವೇ ‘ಜಮ್ಮು-ಕಾಶ್ಮೀರ’ವೆಂದು ಭಾರತದ ಅವಿಭಾಜ್ಯ ಅಂಗವಾಗಿ ಸೇರ್ಪಡೆ ಆಗಿರುವುದರಿಂದ, ಮುಂದೊಂದಿನ, ಅದರ ಎಲ್ಲ ನೆಲವನ್ನೂ ಭಾರತ ತನ್ನದಾಗಿಸಿಕೊಳ್ಳ–ಬೇಕಾ–ಗುತ್ತದೆ. ಆದರೆ ಸದ್ಯಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀ–ರ–ವನ್ನು ಭಾರತವೇ ಅಧಿಕೃತವಾಗಿ ಗುರುತಿ–ಸಿ–ರುವುದರಿಂದ, ಯುದ್ಧ ಮಾರ್ಗವಾಗಿ ಆ ಭಾಗ ಹಿಂಪಡೆಯುವ ಪ್ರಯತ್ನದಲ್ಲಿ ಭಾರತವು ತೊಡ–ಗು–ವುದಿಲ್ಲ.’’ ಈ ನಿಲುವು ಭಾರತದ ಅನೇಕ ರಾಜಕಾರಣಿಗಳಿಗೆ ತಿಳಿದಿಲ್ಲವೆಂದೇ ಹೇಳಬೇಕಿದೆ!
ಇನ್ನು, ಪಾಕಿಸ್ತಾನದ ಅಧಿಕೃತ ನಿಲುವಿಗೆ ಬರೋಣ. ಭಾರತದ ನಿಯಂತ್ರಣದಲ್ಲಿರುವ ಕಾಶ್ಮೀ–ರದ ಶೇ.63ರಷ್ಟು ಭಾಗದ ಬಗ್ಗೆ ಅದರ ನಿಲುವು ಖಚಿತ ಮತ್ತು ಕಠೋರವಾಗಿಯೇ ಇದೆ: ‘‘ಪಾಕಿಸ್ತಾನ ರಚನೆಯ ಮೂಲ ಉದ್ದೇಶವು ಸಫಲವಾಗುವುದು ಮುಸಲ್ಮಾನರೇ ಬಹು–ಸಂಖ್ಯೆ–ಯಲ್ಲಿದ್ದ ಸಂಪೂರ್ಣ ಕಾಶ್ಮೀರ ಪಾಕಿ–ಸ್ತಾ–ನದ ಪಾಲಾದಾಗ ಮಾತ್ರ. ಅದೆಲ್ಲ–ವನ್ನೂ ತನ್ನದಾ–ಗಿಸಿಕೊಳ್ಳಲು ಪಾಕಿಸ್ತಾನ ಸನ್ನದ್ಧ.’’ ಅಲ್ಲಿಗೆ, ಅದು ಸನ್ನದ್ಧವಾಗಿ–ರುವ ಬಗೆ ಹೇಗೆ ಎಂಬ ಪ್ರಶ್ನೆ ಸಹಜ. ನೇರ ಯುದ್ಧದ ಮೂಲಕವಂತೂ ಅಲ್ಲವೇ ಅಲ್ಲ! ಪಾಕಿಸ್ತಾನ ರಚನೆಯಾದ ಅಂದಿನಿಂದ ಈವರೆಗೆ ಭಾರತದ ಜೊತೆಗೆ ಅದು ಅಧಿಕೃತವಾಗಿ ಮೂರು ಯುದ್ಧಗಳಲ್ಲಿ ತೊಡಗಿತ್ತು; ಮೂರರಲ್ಲೂ ಸೋತಿದೆ. ಒಂದರಲ್ಲಿ ಹೀನಾಯವಾಗಿ ಸೋತರೆ, ಇನ್ನೆರಡರಲ್ಲಿ ಪಾಕಿಸ್ತಾನದ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿಹೋಯಿತು.

1965ರಲ್ಲಿ ಭಾರತದ ಜಮ್ಮು-ಕಾಶ್ಮೀರಕ್ಕೆ ತನ್ನ ಸೇನೆ ಮೂಲಕ ಲಗ್ಗೆಯಿಟ್ಟರೆ, ಅಲ್ಲಿನ ಮುಸಲ್ಮಾನ–ರೆಲ್ಲರೂ ಭಾರತದ ವಿರುದ್ಧ ದಂಗೆ ಎದ್ದು ಪಾಕಿ–ಸ್ತಾನಿ ಸೇನೆಯ ಜೊತೆ ಕೈಜೋಡಿಸುತ್ತಾರೆಂದು ಪಾಕಿಸ್ತಾನ ಲೆಕ್ಕಾಚಾರ ಹಾಕಿತ್ತು. ಆದದ್ದೇ ಬೇರೆ; ಅಲ್ಲಿನ ಜನರು ಪಾಕಿಸ್ತಾನ ಸೇನೆಯೊಡನೆ ಕೈ ಜೋಡಿಸುವ ಬದಲು ಭಾರತೀಯ ಸೇನೆಯನ್ನು ಕೂಡಲೇ ಎಚ್ಚರಿಸಿದರು. ಪಾಕಿಸ್ತಾನ ಇಂತಹ ಲೆಕ್ಕಾಚಾರಕ್ಕಿಳಿದಿದ್ದು ಇದೇ ಮೊದಲಲ್ಲ.

ಪಾಕಿಸ್ತಾನ ರಚನೆ ನಿಮಿತ್ತ ಭಾರತದಲ್ಲಿದ್ದ ಸೇನೆ–ಯನ್ನೂ ಎರಡೂ ರಾಷ್ಟ್ರಗಳ ನಡುವೆ ವಿಭಜಿ–ಸಲಾ–ಗಿತ್ತು; ಭಾರತ-ಪಾಕಿಸ್ತಾನದ ನಡುವೆ 7:3ರ ಅನು–ಪಾತದಲ್ಲಿ. ಮುಸಲ್ಮಾರಿಗೆಂದೇ ಜನ್ಮತಳೆದಿದ್ದ ಪಾಕಿಸ್ತಾನ ಸೇನೆಯ ವಿರುದ್ಧ ಯುದ್ಧವೇನಾದರೂ ಸಂಭವಿಸಿದರೆ, ಭಾರತೀಯ ಸೇನೆಯಲ್ಲಿನ ಮುಸ–ಲ್ಮಾನ ಯೋಧರು ಭಾರತದ ಪರ ನಿಲ್ಲರಾರರು ಎಂಬ ಬಾಲಿಶ ಭಾವನೆಯಿಂದಲೇ 1947ರಲ್ಲಿ ಜಮ್ಮು-ಕಾಶ್ಮೀರ–ವನ್ನು ಆಕ್ರಮಿಸುವ ದುಸ್ಸಾಹಸಕ್ಕೆ ಪಾಕಿಸ್ತಾನ ಕೈಹಾಕಿತ್ತೆಂದು ತಜ್ಞರು ವಿಶ್ಲೇಷಿಸು–ತ್ತಾರೆ. ಮೇಲಾಗಿ, ಪಾಕಿಸ್ತಾನ ರಚನೆಯ ಸಮ–ಯ–ದಲ್ಲಿ ಚಾಲ್ತಿಯಲ್ಲಿದ್ದ 47 ಮದ್ದುಗುಂಡು ಹಾಗೂ ಶಸ್ತ್ರಾಸ್ತ ತಯಾರಿಕಾ ಫ್ಯಾಕ್ಟರಿಗಳು ಭಾರತ ಭಾಗ–ದಲ್ಲೇ ಇದ್ದವೆಂಬುದು ಗಮನಾರ್ಹ. ದಶಕಗಳ ಹಿಂದೆ ಪಾಕಿಸ್ತಾನ ರೂಢಿಸಿಕೊಂಡ ಈ ಬಾಲಿಶ ಕಲ್ಪನೆಯನ್ನು ಅದು ಇಂದಿಗೂ ಮುಂದು–ವರಿಸು–ತ್ತಿದೆ ಎಂದರೆ ತಪ್ಪಾಗಲಾರದು. ಕಾಶ್ಮೀರದ–ಲ್ಲಿನ ಮುಸಲ್ಮಾನರು ಪಾಕಿಸ್ತಾನವನ್ನು ಸೇರಲು ಇಂದಿಗೂ ಹಾತೊರೆಯುತ್ತಿದ್ದಾರೆಂಬುದು ಪಾಕಿ–ಸ್ತಾ–ನದ ಅಚಲ ನಂಬಿಕೆ. ಭಾರತದೊಡನೆ ನೇರ ಯುದ್ಧಕ್ಕಿಳಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಪ್ರತಿ ಬಾರಿ ಪಾಕಿಸ್ತಾನವು ಮನಗಂಡಿದ್ದರಿಂದಲೇ, ಅಣುಬಾಂಬ್ ಪಡೆಯುವ ನಿರ್ಧಾರಕ್ಕೆ ಅದು ಕೈಹಾಕಿದ್ದು. ಜೊತೆಯಲ್ಲೇ, ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಲು ಅನೇಕ ಸಂಘಟನೆಗಳನ್ನು ಹುಟ್ಟುಹಾಕಿದ್ದು. ಇವು–ಗ–ಳಲ್ಲಿನ ದೊಡ್ಡ ಗಾತ್ರದ ಗುಂಪುಗಳೆಲ್ಲವನ್ನೂ ವಿಶ್ವಸಮುದಾಯವು ‘ಭಯೋತ್ಪಾದಕ ಗುಂಪು’–ಗಳೆಂದು ಘೋಷಿಸಿದೆ.

ಸದ್ಯಕ್ಕೆ, ಅಂತಾರಾಷ್ಟ್ರೀಯ ಕಾನೂನು ಮತ್ತು ಭಾರತೀಯ ಸಂವಿಧಾನದ ಮಿತಿಯೊಳಗೆ ಕಾಶ್ಮೀರ ಸಮಸ್ಯೆ ನಿವಾರಿಸಲು ಭಾರತಕ್ಕಿರುವ ಮಾರ್ಗದ ಕಡೆಗೆ ನೋಡೋಣ. ಭಾರತವೇ ಘೋಷಿಸಿರುವಂತೆ, ಪಾಕಿಸ್ತಾನ ಆಕ್ರ–ಮಿತ ಜಮ್ಮು -ಕಾಶ್ಮೀರ ಭಾಗ ಆಕ್ರಮಿಸಿ–ಕೊಂಡು, ಅಲ್ಲಿಂದ ಪಾಕಿಸ್ತಾನಿ ಸೇನೆಯನ್ನು ಬಡಿದೋಡಿಸುವ ಯೋಜನೆ ಭಾರತಕ್ಕಿಲ್ಲ. ಬದಲಿಗೆ, ಭಾರತ ಭಾಗದ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸು–ವಂತೆ ಮಾಡಬೇಕಾದ್ದಷ್ಟೇ ಭಾರ–ತದ ಮುಂದಿ–ರುವ ಮೊದಲ ಆದ್ಯತೆ. ಒಟ್ಟಿನಲ್ಲಿ, 125 ಕೋಟಿ ಜನಸಂಖ್ಯೆಯ ಭಾರತವು 1.5 ಕೋಟಿ ಜನರನ್ನೂ ದಾಟದ ಕಾಶ್ಮೀರ ಸಮಸ್ಯೆಗೆ ಭಾವನಾತ್ಮಕವಾಗಿ ಬೆಂದುಹೋಗುವುದರ ಬದಲು ಕೆಲವು ದೃಢ ನಿರ್ಧಾರ ತಳೆಯ–ಬೇಕಾದ್ದು ಅನಿವಾರ್ಯ.

ಮೊದಲನೇದಾಗಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಹೊರಟ ನಮ್ಮ ಸಂವಿಧಾ–ನದ ಪರಿಚ್ಛೇದ 370 ಮಾಡುತ್ತಿರುವುದೇ ಬೇರೆ; ಆ ನೆಲವು ಭಾರತದ ಅವಿಭಾಜ್ಯ ಅಂಗ–ವಾಗಿ–ರುವುದರ ಬಗ್ಗೆಯೇ ಅನಗತ್ಯ ಸಂಶಯ ಹುಟ್ಟು ಹಾಕಿದೆ. ಆ ಪರಿಚ್ಛೇದವನ್ನು ಮಾರ್ಪಾಡು ಮಾಡ–ಬೇಕಾದ ಅನಿವಾರ್ಯತೆಯು ನಮ್ಮೆದು–ರಿದೆ. ಪ್ರತ್ಯೇಕವಾಗಿ, ಭಾರತ ಸರ್ಕಾರವು ಕಾಶ್ಮೀರ ಜನರ ವಿಶ್ವಾಸವನ್ನು ಸಂಪಾದಿಸಬೇಕಾದ್ದು ಅನಿ–ವಾರ್ಯ. ಅಂದಿನ ಭಾರತದಲ್ಲೇ ಅತ್ಯಂತ ಶೋಚನೀಯ ಸ್ಥಿತಿ ಮತ್ತು ಬಡತನದಲ್ಲಿ ಕಾಶ್ಮೀ–ರದ ಜನರು ಬದುಕುತ್ತಿದ್ದರೆಂದು ಬ್ರಿಟನ್ ಸಿದ್ಧ–ಪಡಿಸಿದ್ದ ಅನೇಕ ವರದಿಗಳು ಸಾರುತ್ತವೆ. ಇಂದಿನ ಪರಿಸ್ಥಿತಿ ಅಂದಿಗಿಂತ ಹೆಚ್ಚು ಭಿನ್ನವಾಗಿದೆ ಎಂದು ಹೇಳಲಾಗುವುದಿಲ್ಲ. 1846ರಲ್ಲಿ ಬ್ರಿಟಿಷರು ‘ಅಮೃತ್‌ಸರ್ ಒಪ್ಪಂದ’ ಮೂಲಕ ಕಾಶ್ಮೀರವನ್ನು ಕೈಚೆಲ್ಲಿ ಹಿಂದೂ ರಾಜನಿಗೆ ಒಪ್ಪಿಸಿದ ತರುವಾಯ, ಆಡಳಿತದ ಬಹುತೇಕ ಅಂಗಗಳಿಂದ ಮುಸಲ್ಮಾನ–ರನ್ನು ದೂರವಿಡಲಾಗಿತ್ತು. 1850ರಲ್ಲೇ ಅಲ್ಲಿ ಬಹುಸಂಖ್ಯಾತರಾಗಿದ್ದ ಮುಸಲ್ಮಾನರೆಲ್ಲರನ್ನೂ ಒಮ್ಮೆಲೇ ಸಾರ್ವಜನಿಕ ಸಮಾರಂಭದಲ್ಲಿ ಕೂಡಿ ಹಾಕಿ, ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡುವ ಯೋಚನೆಯು ಅಂದಿನ ಹಿಂದೂ ಮಹಾರಾಜನಿಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಆ ಅವಾಂತರವನ್ನು ಅವನು ಕೈಬಿಟ್ಟಿದ್ದ. ಈ ಎಲ್ಲ ಐತಿಹಾಸಿಕ ಕಾರಣಗಳಿಗಾಗಿ, ಕಾಶ್ಮೀರದಲ್ಲಿನ ಜನರಿಗೆ ಸರ್ಕಾರ ಮತ್ತು ಆಡಳಿತಗಳ ಬಗ್ಗೆ ಇಂದಿಗೂ ಸಂಶಯ ಮತ್ತು ಭಯ ಹೋಗಿಲ್ಲ.

ಈ ಹಿನ್ನೆಲೆಯಲ್ಲಿ, ಮುಂದೆ ಆಗಬೇಕಾದ ಕೆಲ–ಸಕ್ಕೆ ವಿನಮ್ರ ಸಲಹೆಯೊಂದಿದೆ. ಅದೇನೆಂ–ದರೆ, ಮುಸಲ್ಮಾನರಿಗೆಂದೇ ಪ್ರತ್ಯೇಕ ದೇಶ ಕಟ್ಟಬೇಕೆಂಬ ಕ್ಷುಲ್ಲಕ ಕಾರಣಕ್ಕಾಗಿ ಜನ್ಮತಳೆದ ಪಾಕಿಸ್ತಾನವು ಕಾಶ್ಮೀರವನ್ನು ಇನ್ನೂ ತನ್ನದಾಗಿಸಿಕೊಳ್ಳಲು ಪ್ರಯಾ–ಸಪಡುತ್ತಿರುವ ಒಂದೇ ಕಾರಣವೆಂದರೆ, ಆ ನೆಲದಲ್ಲಿರುವ ಬಹುಸಂಖ್ಯಾತ ಮುಸಲ್ಮಾ–ನರು. ಆದರೆ ದಶಕಗಳ ಕಾಲ ರಕ್ತ, ಹಿಂಸೆ ಮತ್ತು ಸಾವ–ನ್ನಷ್ಟೇ ಕಂಡಿರುವ ಅಲ್ಲಿನ ಜನರು ಮುಕ್ತ–ವಾಗಿ ಭಾರತದ ಇನ್ಯಾವುದೇ ಪ್ರದೇಶದಲ್ಲಿ ನೆಲೆ–ಸಲು ಕೇಂದ್ರ ಸರ್ಕಾರವೇ ಸಂಪೂರ್ಣ ನೆರವು, ಆರ್ಥಿಕ ಸಹಾಯ ನೀಡಲು ಮುಂದಾದರೆ, ಅಲ್ಲಿನ ಬಹುತೇಕ ಜನ ಭಾರತದ ವಿವಿಧೆಡೆ ನೆಲೆಸಲು ಒಪ್ಪುತ್ತಾರೆಂಬುದು ನನ್ನ ನಂಬಿಕೆ.

ಸ್ವಾತಂತ್ರ್ಯದ ಸಮಯದಲ್ಲಿದ್ದ ಭಾರತೀಯ ಹೋರಾಟಗಾರರೇನಾದರೂ ಇಂದಿಗೂ ನಮ್ಮ ಜೊತೆ ಇದ್ದಿದ್ದರೆ, ಕಾಶ್ಮೀರ ಸಮಸ್ಯೆಯನ್ನು ರಾಜ–ಕೀಯದಿಂದ ದೂರವಿಟ್ಟು ಬೇಗನೆ ಪರಿಹಾರ ಕಂಡುಕೊಳ್ಳುತ್ತಿದ್ದರೆಂದು ನನಗನಿಸುತ್ತದೆ. ದೇಶದ ವಿವಿಧೆಡೆ ಹತ್ತಾರು ಹೊಸ ನಗರಗಳನ್ನು ನಿರ್ಮಿಸಿ, ಜಮ್ಮು-ಕಾಶ್ಮೀರದ ಜನರಿಗೆ ಈ ಹೊಸ ನಗರಗಳಲ್ಲಿ ಭಾರತದ ಉಳಿದ ಜನರ ಜೊತೆಗೆ ಬೆರೆಯಲು ಸಂಪೂರ್ಣ ಆರ್ಥಿಕ ಸಹಾಯ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕೆಂ–ಬುದು ನನ್ನ ಅನಿಸಿಕೆ. ದೇಶಾದ್ಯಂತ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಎಲ್ಲ ತೆರಿಗೆಗಳ ಮೇಲೆ ವಿಧಿಸಿದ್ಧ ಅಲ್ಪ ಪ್ರಮಾಣದ ಸೆಸ್ ಮಾದರಿಯಲ್ಲೇ, ಕಾಶ್ಮೀರ ಜನರ ಸ್ಥಳಾಂತ–ರಕ್ಕೆ ಕೇಂದ್ರ ತೆರಿಗೆಗಳ ಮೇಲೆ ಅಲ್ಪ ಪ್ರಮಾಣದ ಸೆಸ್ ವಿಧಿಸಬಹುದಾಗಿದೆ.

ಭಾರತದ ಜನರೇ ತಮ್ಮ ನೆರವಿಗೆ ಮತ್ತು ಪುನರ್ವಸತಿಗೆ ಈ ರೀತಿ ಧಾವಿಸಿದ್ದನ್ನು ಮನಗಂಡ ಜಮ್ಮು-ಕಾಶ್ಮೀರದ ಜನತೆ, ಆ ರಕ್ತಸಿಕ್ತ ಭೂಮಿ ತೊರೆದು ಭಾರತದ ವಿವಿಧೆಡೆ ಸಾಗಿ ಹಂಚಿ ಹೋದರೆ, ಪಾಕಿಸ್ತಾನವು ಕಾಶ್ಮೀರ ಆಕ್ರಮಿ–ಸಲು ಅದಕ್ಕಿರುವ ಮೂಲ ಉದ್ದೇಶವೇ ಮಾಯವಾಗಿ–ಬಿಡುತ್ತದೆಯಲ್ಲವೇ? ಹಿಂದೊಮ್ಮೆ ಮುಸಲ್ಮಾ–ನರೇ ಬಹುಸಂಖ್ಯಾತರಾಗಿದ್ದ ಆ ನಾಡಿನಿಂದ ಜನರೇ ಹೊರನಡೆದರೆ, ಪಾಕಿಸ್ತಾನದ ರಚನಾ ಉದ್ದೇಶವನ್ನೇ ಕಾಶ್ಮೀರದ ಜನರು ತಿರಸ್ಕರಿಸಿದಂತಾ–ಗುತ್ತದೆ. ಜೊತೆಗೆ, ಜನರೇ ತೊರೆದ ನಾಡಿನಲ್ಲಿ ಸಿಗುವ ಗುಡ್ಡ, ಕಲ್ಲು, ಬಂಡೆ ಮತ್ತು ಬೆಟ್ಟಗಳು ಪಾಕಿಸ್ತಾನಕ್ಕೆ ಆಕರ್ಷಣೆಯೊಡ್ಡಲಾರವು.

1947ರಲ್ಲಿ ರಚನೆಯಾದಂದಿನಿಂದ ಆಂತರಿಕ ಗಲಭೆ, ಭಾಷಾ ಸಂಘರ್ಷ, ಮತೀಯ ಗಲಭೆ ಮರು–ಕಳಿಸುತ್ತಲೇ ಇರುವ ರಾಜಕೀಯ ಅತಂ–ತ್ರತೆ ಮತ್ತು ಅರಾಜಕತೆಯಿಂದ ತತ್ತರಿಸುತ್ತಲೇ ಇರುವ ಪಾಕಿಸ್ತಾನದ ಮೂಲ ರಚನಾ ಕಲ್ಪನೆಯು ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವ ಹಂಬಲ–ದೊಂ–ದಿಗೆ ಜನ್ಮತಳೆಯಿತು. ಆ ಜನರೇ ದೂರ ನಡೆದು ಕಾಶ್ಮೀರವೇ ಕರಗಿಹೋದರೆ, ಪಾಕಿಸ್ತಾನವೇ ನೆಲಕಚ್ಚಿ ಬೀಳಬಹುದು. ಒಟ್ಟಾರೆ, ಧರ್ಮವೊಂದೇ ದೇಶಕ್ಕೆ ಕಾರಣವಾಗುವುದು ಮಾರಕವೆಂದು ವಿಶ್ವವು ಇನ್ನೊಮ್ಮೆ ಮನಗಂಡರೆ ಮನುಕುಲಕ್ಕೆ ಒಳಿತು.