Asianet Suvarna News Asianet Suvarna News

[ನೇರಮಾತು] ರಾಜಕೀಯ ನಕ್ಷೆಯಿಂದ ಕಾಣೆಯಾಗುತ್ತಿರುವ ಕಮ್ಯುನಿಸ್ಟರು

Neramatu Column
  • Facebook
  • Twitter
  • Whatsapp

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಇದೇ ತರಹದ ತಪ್ಪು ನಿರ್ಧಾರಗಳ ಹಾದಿಯಲ್ಲಿ ಸಾಗಿದರೆ, ಭಾರತೀಯ ರಾಜಕೀಯ ನಕ್ಷೆಯಿಂದ ಸಿಪಿಎಂ ಕಾಣೆಯಾಗುವ ದಿನ ದೂರವಿಲ್ಲ! ಜನ ಮೂರ್ಖರ ಮೂರ್ಖತನವನ್ನು ಸಹಿಸಿಕೊಳ್ಳಬಲ್ಲರು, ಸ್ವಪ್ರತಿಷ್ಠೆಯ ಪಿತ್ತ ನೆತ್ತಿಗೇರಿದವರ ಮೂರ್ಖತನವನ್ನಲ್ಲ! ಭಾರತದ ರಾಜಕಾರಣದಲ್ಲಿ ಕಮ್ಯುನಿಸಮ್‌ನ ಕೊನೆಯ ಅಧ್ಯಾಯಕ್ಕೆ ನಾವು ಸಾಕ್ಷಿ​ಯಾ​ಗು​ತ್ತಿ​ದ್ದೇವೆಯೇ? ಎಡಪಂಥೀಯರ ಅಭೇದ್ಯ ಕೋಟೆ​ಯಾಗಿದ್ದ ಪಶ್ಚಿಮಬಂಗಾಳದಲ್ಲಿ ಬರೋಬ್ಬರಿ 3 ದಶಕಗಳ ಕಾಲ ಅವರದೇ ಪಾರುಪತ್ಯ ನಡೆಯಿತು. ಆದರೆ, ಅಲುಗಾಡಿಸಲಾಗದ ಸಾಮ್ರಾಜ್ಯ ಎಂದೇ ಭಾವಿಸ​ಲಾಗಿದ್ದ ಅದು, ಇದ್ದಕ್ಕಿದ್ದಂತೆ ಕುಸಿಯಿತು. ಹಾಗೆ ಕುಸಿದ ಸಾಮ್ರಾಜ್ಯ ಕಟ್ಟುವ ಯತ್ನಗಳು ಮತ್ತೆ ಮತ್ತೆ ನಡೆದರೂ ಯಾವುವೂ ಫಲ ಕೊಡಲೇ ಇಲ್ಲ. ಹಾಗಾಗಿ ಭಾರತದ ಮಾರ್ಕ್ಸ್‌ವಾದಿ ರಾಜಕೀಯದ ಕೊನೆಯ ನೆಲೆಯಾಗಿ ಉಳಿದದ್ದು ಕೇರಳ ಮಾತ್ರ. ಕಳೆದ ವರ್ಷ ಅಲ್ಲಿನ ಚುನಾವಣೆಯಲ್ಲಿ ಎಡ​ಪಂಥೀಯರು ಪಡೆದ ಜಯ ನಿಜಕ್ಕೂ ಅದ್ಭುತ​ವಾದದ್ದೇ ಆಗಿತ್ತು. ಜೊತೆಗೆ ಮುಖ್ಯಮಂತ್ರಿಯಾಗಿ ಭಾರತೀಯ ಎಡಪಂಥೀಯ ನಾಯಕತ್ವದ ದಂತಕಥೆ ಎಂದೇ ಹೆಸರಾಗಿದ್ದ ಪ್ರಭಾವಿ ಮುಖಂಡ ಪಿಣರಾಯಿ ವಿಜಯನ್‌ ಅಧಿಕಾರ ವಹಿಸಿಕೊಂಡಿದ್ದರು.

ಪಿಣರಾಯಿ ಬದಲಾಗಿದ್ದು ಏಕೆ?
ಆದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನ​​ದಿಂದ​ಲೇ ಮೂರ್ಖತನದ ಅಪರಾವತಾರದಂತೆ ಪಿಣರಾಯಿ ವರ್ತಿ​ಸತೊಡಗಿದ್ದು ಏಕೆ ಎಂಬುದು ಯಾರೊಬ್ಬರೂ ಊಹಿ​ಸ​ಲಾಗದ ರಹಸ್ಯ. ಒಂದಾದ ಮೇಲೆ ಒಂದ​ರಂತೆ ಅವರು ಇಟ್ಟತಪ್ಪು ಹೆಜ್ಜೆಗಳು ಮೇಲಿಂದ ಮೇಲೆ ಸ್ವತಃ ಅವರಿಗೂ ಅವರ ಸರ್ಕಾರಕ್ಕೂ ಮುಜುಗರ ತಂದ​ವು. ಕಳೆದ ವಾರದ ಹೊತ್ತಿಗಂತೂ ಸುಪ್ರೀಂ​ಕೋರ್ಟಿ​ನಿಂದ ಭಾರೀ ಛೀಮಾರಿಗೊಳಗಾದ ಪಿಣ​ರಾ​ಯಿ ಕೇವಲ ಹಾಸ್ಯಾಸ್ಪದ ವ್ಯಕ್ತಿಯಾಗಿಯಷ್ಟೇ ಅಲ್ಲ, ತಮ್ಮದೇ ಪಕ್ಷದ ನಾಯಕರನ್ನೂ ಸೇರಿ ಯಾರ ಅಂಕೆ​ಗೂ ಸಿಗದ ಅಪಾಯಕಾರಿ ಮನುಷ್ಯನಾಗಿ ಕಂಡರು.

ಹಾಗೆ ನೋಡಿದರೆ ಅವರ ನಡವಳಿಕೆಯಲ್ಲಿ ಒಂದು ನಿರ್ದಿಷ್ಟಮಾದರಿ ಇದೆ. ಅವರು ಸದಾ ಸಾರ್ವಜನಿಕ ಅಭಿಪ್ರಾಯದ ವಿರುದ್ಧದ ನಿಲುವನ್ನೇ ತೆಗೆದುಕೊಳ್ಳು​ತ್ತಾರೆ. ಅದು ಅವರ ಸ್ವಪ್ರತಿಷ್ಠೆಯೇ, ದುರಹಂಕಾರವೇ ಅಥವಾ ತನಗೆ ಅನಿಸಿದ್ದನ್ನು ಮಾಡುತ್ತೇನೆ ಎಂಬ ಪ್ರಭಾವಿ ನಾಯಕರ ವರಸೆಯೇ? ಒಂದು ಕುಟುಂಬದ ಆಸ್ತಿಯಾದ ಕಾನೂನು ಕಾಲೇಜಿನಲ್ಲಿ ಅನಾ​ಚಾರಗಳು ಮೇರೆ ಮೇರಿದ್ದರ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದು ಹೋರಾಟಕ್ಕಿಳಿದರೆ, ಒಬ್ಬ ಮುಖ್ಯಮಂತ್ರಿಯಾಗಿ ಪಿಣರಾಯಿ ಆ ದುಷ್ಟಕುಟುಂಬದ ಪರ ನಿಂತರು. ಆದರೆ, ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಭಾರೀ ಜನಬೆಂಬಲ ಸಿಕ್ಕಿತು. ಪರಿಣಾಮವಾಗಿ ಅವರ ಬೇಡಿಕೆಗಳು ಗೆದ್ದವು. ಆದರೆ, ಸಿಎಂ ಪಿಣರಾಯಿ ಮಾತ್ರ ಕೆಟ್ಟವರ ಪರ ನಿಲ್ಲುವುದನ್ನು ಮುಂದುವರಿಸಿದರು.

ಇದೆಲ್ಲಕ್ಕಿಂತ; ಕೇರಳದ ಜನತೆಯನ್ನು ದಂಗು​ಬಡಿಸಿದ ಸಿಎಂ ವರಸೆ ಎಂದರೆ; ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಕಾರಣವಾದ ಖಾಸಗಿ ಕಾಲೇಜು ಆಡಳಿತ ಮಂಡಳಿಯ ಧೋರಣೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಭಾರೀ ಹೋರಾಟದ ಸಂದರ್ಭದಲ್ಲಿ ಅವರು ನಡೆದು​ಕೊಂಡ ರೀತಿ. ಯಾವಯಾವುದೋ ನೆಪ ಹೇಳಿ ವಿದ್ಯಾರ್ಥಿಗಳಿಂದ ಹಣ ಕೊಳ್ಳೆ ಹೊಡೆಯುತ್ತಿದ್ದ ಕಾಲೇಜು ಆಡಳಿತ ಮಂಡಳಿಯ ಧೋರಣೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕಿರು​ಕುಳ ನೀಡಿತ್ತು ಎನ್ನಲಾಗಿದೆ. ಆ ಕಿರುಕುಳದಿಂದಾ​ಗಿ​ಯೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವಿದ್ಯಾರ್ಥಿಗಳು ಹಾಗೂ ಆತನ ಕುಟುಂಬ ಪ್ರತಿಭಟನೆಗೆ ಇಳಿದಿತ್ತು. ಆ ಸಂದರ್ಭದಲ್ಲಿ ಪ್ರತಿ​ಭಟ​ನಾ​​​ನಿರತ ದುಃಖತಪ್ತ ತಾಯಿಯ ಮೇಲೆ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದರು. ಆ ಘಟನೆ ಇಡೀ ರಾಜ್ಯಾ​ದ್ಯಂತ ಸರ್ಕಾರದ ಅಸೂಕ್ಷ್ಮತೆ, ಸಂವೇದನಾ​​ಹೀನತೆ ವಿರುದ್ಧ ಜನತೆ ಬೀದಿ​ಗಿಳಿಯು​ವಂತೆ ಮಾಡಿತು. ಜನ​ಹೋರಾಟಕ್ಕೆ ಮಣಿದ ಸರ್ಕಾರ ನತದೃಷ್ಟಕುಟುಂಬದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತು. ಆದರೆ, ಆ ಭರವಸೆ ಕೇವಲ ಕಾಗದದ ಮೇಲೆ ಮಾತ್ರ ಉಳಿಯಿತು. ವಿದ್ಯಾರ್ಥಿಯ ತಾಯಿ ಹಾಗೂ ಸಂಬಂಧಿಕರ ಕುರಿತು ಸ್ವತಃ ಸಿಎಂ ಅಪಮಾನಕರ ಮಾತುಗಳನ್ನಾಡಿದರು. ಅದರಿಂದಾಗಿ ಸರ್ಕಾರದ ವರ್ಚಸ್ಸಿಗೆ ಆದ ಹಾನಿ ಲೆಕ್ಕಕ್ಕೆ ಸಿಗಲಾರದಷ್ಟು!

ಸಿಎಂ ಅವರ ಪ್ರದೇಶವಾದ ಕಣ್ಣೂರಿನಲ್ಲಿ ಬಿಜೆಪಿ- ಸಿಪಿಎಂ ಸಂಘರ್ಷಕ್ಕೆ ಕೇವಲ ಒಂದು ವರ್ಷದಲ್ಲಿ 18 ಹೆಣ​ಗಳು ಉರುಳಿದವು. ರಾಜಕೀಯ ಹತ್ಯೆಗಳಿಗೆ ಅಂತ್ಯ ಎಂಬುದೇ ಇಲ್ಲದಾಯಿತು. ಮನ್ನಾರ್‌ ವಲ​ಯ​ದಲ್ಲಿನ ಅರಣ್ಯ ಒತ್ತುವರಿ ವಿರುದ್ಧ ನಿಂತ ಸಿಎಂ, ಸರ್ಕಾರ ಮತ್ತು ನ್ಯಾಯಾಲಯದ ಆದೇಶ ಪಾಲಿಸಲು ಮುಂದಾದ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು!

ಇನ್ನು ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಪಿಣರಾಯಿ ಪೊಲೀಸ್‌ ಇಲಾಖೆಯನ್ನು ನಿರ್ವಹಿಸು​ತ್ತಿ​ರುವ ರೀತಿ, ಅವರೆಷ್ಟುಗೊಂದಲ, ಶಂಕೆ, ಆತ್ಮರತಿ​ಯಲ್ಲಿ ಮುಳುಗಿದ್ದಾರೆ, ಎಷ್ಟುಅಸಮರ್ಥರಿದ್ದಾರೆ ಎಂಬುದನ್ನು ಜಗಜ್ಜಾಹೀರು ಮಾಡುತ್ತಿದೆ. ಪೊಲೀಸ್‌ ಮುಖ್ಯಸ್ಥರಾಗಿದ್ದ ಸೇನ್‌ಕುಮಾರ್‌ ಅವರನ್ನು ಆ ಸ್ಥಾನದಿಂದ ಕಿತ್ತೊಗೆಯುವ ಮೂಲಕವೇ ತಮ್ಮ ಆಡಳಿತವನ್ನು ಆರಂಭಿಸಿದ ಪಿಣರಾಯಿಯ ಆ ಕೃತ್ಯದ ಹಿಂದೆ ಇದ್ದದ್ದು ಇಲಾಖೆಯನ್ನು ಸದೃಢಗೊಳಿಸುವ ಇರಾದೆಯಲ್ಲ ಎಂಬುದು ಗುಟ್ಟೇನೂ ಆಗಿಲ್ಲ. ಸಿನಿಮಾ ನಟಿಯೊಬ್ಬರನ್ನು ಅಪ​ಹರಣ ಮಾಡಿ, ಲೈಂಗಿಕ ದೌರ್ಜನ್ಯ ಎಸಗಲಾಯಿತು. ಘಟನೆ ಕುರಿತು ತನಿಖೆ ಆರಂಭಕ್ಕೆ ಮುನ್ನವೇ ಗೃಹ ಖಾತೆ ಹೊಣೆ ಹೊತ್ತ ಸಿಎಂ ಘಟನೆ ಅಪರಾಧ ಹುನ್ನಾರ ಕೃತ್ಯವೇನಲ್ಲ ಎಂದುಬಿಟ್ಟರು! ವಿಶ್ವ ಮಹಿಳಾ ದಿನದಂದೇ ಶಿವಸೇನಾ ಪುಂಡರು ದಂಪತಿಯ ಮೇಲೆ ಹಲ್ಲೆ ನಡೆಸಿದರು. ತಮ್ಮ ಕಣ್ಣೆದುರೇ ನೈತಿಕ ಪೊಲೀಸ್‌ಗಿರಿ ನಡೆಯುತ್ತಿರುವುದನ್ನು ಪೊಲೀಸರು ಸುಮ್ಮನೇ ನಿಂತು ನೋಡಿದರು. ಒಬ್ಬ ವಿದ್ಯಾರ್ಥಿನಿ ಅನು​ಮಾ​ನಾ​ಸ್ಪದ ರೀತಿಯಲ್ಲಿ ಸಾವು ಕಂಡರು ಮತ್ತು ಇಬ್ಬರು ಶಾಲಾ ಬಾಲಕಿಯರು ಕೇವಲ ಎರಡು ತಿಂಗಳ ಅಂತರ​ದ​ಲ್ಲಿ ಶಂಕಾಸ್ಪದ ಸಾವಿಗೀಡಾದರು. ಎಲ್ಲಾ ಪ್ರಕರಣ​ಗಳಲ್ಲೂ ಪೊಲೀಸ್‌ ತನಿಖೆ ಎಂಬುದು ಹಾಸ್ಯಾಸ್ಪದ ರೀತಿಯಲ್ಲಿ ನಡೆದು, ಮುಕ್ತಾಯ ಕಂಡಿತು!

ಸೇನ್‌ಕುಮಾರ್‌ ಪ್ರಕರಣದಲ್ಲಂತೂ ಪಿಣರಾಯಿ ಅವರು ನಡೆದುಕೊಂಡ ರೀತಿ ಅವರ ಮೂರ್ಖತನದ ಪರಮಾವಧಿಗೆ ಸಾಕ್ಷಿಯಾಯಿತು. ತಮ್ಮನ್ನು ಪೊಲೀಸ್‌ ಮುಖ್ಯಸ್ಥ ಸ್ಥಾನದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಸೇನ್‌ಕುಮಾರ್‌ ಸುಪ್ರೀಂಕೋರ್ಟ್‌ ಮೆಟ್ಟಿ​ಲೇರಿ​​ದರು. ಅವರನ್ನು ಪೊಲೀಸ್‌ ಮುಖ್ಯಸ್ಥರನ್ನಾಗಿ ಮರು​ನೇಮಕ ಮಾಡುವಂತೆ ಕೋರ್ಟ್‌ ಹೇಳಿತು. ಸೂಕ್ಷ್ಮತೆ ಇದ್ದಿದ್ದರೆ ಸರ್ಕಾರ, ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಿ ಸೇನ್‌ ಅವರನ್ನು ಮರು​ನೇಮಕ ಮಾಡಿ ಮತ್ತಷ್ಟುಮರ್ಯಾದೆ ಹರಾಜಾ​ಗದಂತೆ ತಡೆಗಟ್ಟಬಹುದಿತ್ತು.

ಹಿಂದೆಂದೂ ಯಾವ ಸರ್ಕಾರ ಕಂಡಿರದಷ್ಟುಅವಮಾನ, ಮುಜುಗರಕ್ಕೀಡಾದರೂ ಪಿಣರಾಯಿ ಅವರ ಆಡಳಿತ ಯಂತ್ರಕ್ಕೆ ಇನ್ನೂ ಜ್ಞಾನೋದಯ​ವಾ​ಗಿಲ್ಲ. ಸೇನ್‌ ಕುಮಾರ್‌ ಮರುನೇಮಕಕ್ಕೆ ಮುನ್ನ ರಾಜ್ಯದ ನೂರಕ್ಕೂ ಹೆಚ್ಚು ಮಂದಿ ಪೊಲೀಸ್‌ ಅಧಿ​ಕಾರಿ​​ಗಳನ್ನು ಬದಲಾಯಿಸಲಾಗಿದೆ. ಅದರ ಉದ್ದೇಶ ಹೊಸ ಪೊಲೀಸ್‌ ಮುಖ್ಯಸ್ಥರ ಮೇಲೆ ಕಣ್ಣಿಡು​​ವುದೇ ಎಂಬುದು ಎಲ್ಲರೂ ಬಲ್ಲ ಗುಟ್ಟು. ಅಂದರೆ; ತಮ್ಮದೇ ಪೊಲೀಸ್‌ ಮುಖ್ಯಸ್ಥರ ಬಗ್ಗೆ ಸ್ವತಃ ಸಿಎಂಗೇ ಭಯವಿದೆ ಎಂದಾಯಿತು!
ಪಿಣರಾಯಿ ವಿಜಯನ್‌ ಅವರು ಇದೇ ಹಾದಿಯಲ್ಲಿ ಸಾಗಿದರೆ, ಭಾರತೀಯ ರಾಜಕೀಯ ನಕ್ಷೆಯಿಂದ ಸಿಪಿಎಂ ಕಾಣೆಯಾಗುವ ದಿನ ದೂರವಿಲ್ಲ! ಜನ ಮೂರ್ಖರ ಮೂರ್ಖತನವನ್ನು ಸಹಿಸಿಕೊಳ್ಳಬಲ್ಲರು, ಸ್ವಪ್ರತಿಷ್ಠೆಯ ಪಿತ್ತ ನೆತ್ತಿಗೇರಿದವರ ಮೂರ್ಖತನವನ್ನಲ್ಲ!

Follow Us:
Download App:
  • android
  • ios