Asianet Suvarna News Asianet Suvarna News

[ನೇರಮಾತು] ಇತಿಹಾಸದುದ್ದಕ್ಕೂ ಸಾಬೀತಾದ ರಾಷ್ಟ್ರೀಯತಾವಾದದ ಕ್ರೌರ್ಯ, ದಬ್ಬಾಳಿಕೆ

Neramatu Column

ಭಾರತದಲ್ಲಿ ಕೂಡ ಇಂದು ಬಂದೂಕು, ಮೊಟ್ಟೆಮತ್ತು ದೇಶದ್ರೋಹದ ಕಾಯ್ದೆಯನ್ನು ಹಿಡಿದು ಕಣ್ಣಪಟ್ಟಿಕಟ್ಟಿದಂತಹ ಸೀಮಿತ ದೃಷ್ಟಿಕೋನದ ರಾಷ್ಟ್ರಪ್ರೇಮವನ್ನು ಹರಡುತ್ತಿರುವವರು ಅವರ ಪ್ರಕಾರ ಧಾರ್ಮಿಕ ಭಾವನೆಗಳಿಂದ ಪ್ರೇರಿತರಾಗಿಬಹುದು. ಆದರೆ, ಅದು ಧರ್ಮದ ತಪ್ಪು ಗ್ರಹಿಕೆ. ಚರಿತ್ರೆ ಅವರಿಗೆ ಒಂದು ಅಪೂರ್ವ ಅವಕಾಶ ನೀಡಿದೆ. ಆ ಅವಕಾಶವನ್ನು ವಿವೇಕದಿಂದ ಬಳಸದೇ ಹೋದರೆ, ಅದು ವ್ಯರ್ಥವಾಗಲಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದು ವೇದಗಳ ಕಾಲದಿಂದಲೂ ಭಾರತೀಯರು ಕಂಡುಕೊಂಡ ವಿವೇಕ. ರಾಷ್ಟ್ರೀಯತಾ​ವಾದ ಕೂಡ ಈ ಮಾತಿಗೆ ಹೊರತಲ್ಲ. ಅತಿಯಾದರೆ ಅದೂ ಕೂಡ ನಂಜಾಗುತ್ತದೆ ಎಂಬುದಕ್ಕೆ ಈಗಾಗಲೇ ನಮ್ಮ ಕಣ್ಣೆದುರು ಹಲವು ಉದಾಹರಣೆಗಳಿವೆ. ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಮತ್ತು ಎಂ ಎಂ ಕಲಬುರ್ಗಿ ಅವರು ನಿಜ ಅರ್ಥದಲ್ಲಿ ಮಹಾ ರಾಷ್ಟ್ರಪ್ರೇಮಿಗಳೇ. ತಮ್ಮ ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು, ಅದರ ಉನ್ನತಿಗಾಗಿ ಶ್ರಮಿಸಿದ್ದರು ಕೂಡ. ಆದರೆ, ಬಹುತೇಕ ಸುಶಿಕ್ಷಿತ ಭಾರತೀಯರಂತೆ ಅವರೂ ಸ್ವತಂತ್ರ ಚಿಂತಕರಾಗಿದ್ದರು ಮತ್ತು ಉಗ್ರ ರಾಷ್ಟ್ರೀಯತಾವಾದಿಗಳು ತಮ್ಮ ಮೂರ್ಖತನದ ಹುಚ್ಚಿನಿಂದ ಅವರನ್ನು ಕೊಲ್ಲಲು ಅವರ ಆ ಗುಣವೈಶಿಷ್ಟ್ಯವೇ ಸಾಕಾಯಿತು!

ಗೋರಕ್ಷಕರ ಉಗ್ರಾವತಾರ:

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಈ ಬಗೆಯ ಹುಚ್ಚು ಅತಿಯಾಗಿದೆ. ಈ ಹುಚ್ಚು ರಾಷ್ಟ್ರೀಯತಾವಾದಿಗಳು ಎಷ್ಟರಮಟ್ಟಿಗೆ ಬೆಳೆದುನಿಂತಿದ್ದಾರೆಂದರೆ; ಅವರು ಪ್ರಧಾನಿಯವರಿಗೂ ಕೂಡ ಮಣಿಯುತ್ತಿಲ್ಲ. ಗೋರಕ್ಷಕರು ತಮ್ಮ ಅಟ್ಟಹಾಸ ಮೆರೆದಾಗ, ತಡವಾಗಿಯಾದರೂ ನರೇಂದ್ರ ಮೋದಿಯವರು ಅವರನ್ನು ಸಮಾಜದ್ರೋಹಿಗಳು ಎಂದು ಖಂಡಿಸಿದರು. ಆಗ ಕೆಲವು ಗೋರಕ್ಷಕರು ಪ್ರಧಾನಿಯವರ ವಿರುದ್ಧವೇ ಅಪಮಾನಕರ ಮಾತುಗಳನ್ನಾಡಿದರು. ಇದೀಗ ಬಿಜೆಪಿಯ ಇತ್ತೀಚಿನ ಚುನಾವಣಾ ವಿಜಯಗಳ ಬಳಿಕ ಮತ್ತೆ ಗೋರಕ್ಷಕರ ಉಗ್ರಾವತಾರಗಳು ಗರಿಬಿಚ್ಚಿವೆ. ಎಮ್ಮೆಗಳನ್ನು ಸಾಗಣೆ ಮಾಡುವವರ ಮೇಲೂ ದಾಳಿ ಮಾಡಲಾಗುತ್ತಿದೆ. ಹೈನುಗಾರರೊಬ್ಬರನ್ನು ಆ ಕಾರಣಕ್ಕಾಗಿ ಹೊಡೆದು ಸಾಯಿಸಲಾಯಿತು. ಉತ್ತರಪ್ರದೇಶದಲ್ಲಂತೂ ಮಾಂಸ ಉದ್ಯಮ ನೆಲಕಚ್ಚಿದ್ದು, ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆ ಉದ್ಯಮ ಆಧಾರಿತ ಅರ್ಥವ್ಯವಸ್ಥೆಗೆ ಭಾರೀ ಪೆಟ್ಟು ಬಿದ್ದಿದೆ.

ಇದೇ ಸಾಲಿಗೆ ಸೇರುವಂತಹ ಮತ್ತೊಂದು ವಿದ್ಯಮಾನ ರಾಷ್ಟ್ರದ್ರೋಹ ಕಾಯ್ದೆಯ ದುರ್ಬಳಕೆ. ಅದಕ್ಕೊಂದು ಅತ್ಯಂತ ಕ್ಷುಲ್ಲಕ ಉದಾಹರಣೆಯೆಂದರೆ; ಕನ್ನಡ ನಟಿ ರಮ್ಯಾ ವಿರುದ್ಧ ಹೂಡಲಾಗಿದ್ದ ರಾಷ್ಟ್ರದ್ರೋಹ ಪ್ರಕರಣ. ಅಷ್ಟಕ್ಕೂ ಅವರು ಮಾಡಿದ ಅಪರಾಧವಾದರೂ ಏನು ಗೊತ್ತೆ? ‘ಪಾಕಿಸ್ತಾನವೇನೂ ನರಕವಲ್ಲ; ಸಾಮಾನ್ಯ ಪಾಕಿಸ್ತಾನಿ ಜನರು, ಸಾಮಾನ್ಯ ಭಾರತೀಯರಂತೆಯೇ' ಎಂದು ಅವರು ಹೇಳಿದ್ದರು. ಸಾಮಾನ್ಯರು ಈ ಮಾತುಗಳಲ್ಲಿ ಯಾವ ತಪ್ಪನ್ನೂ ಕಾಣಲಾರರು. ಇದೊಂದು ಸಹಜ ಗ್ರಹಿಕೆಯ ಮಾತು ಎಂದುಕೊಳ್ಳುತ್ತಾರೆ. ಆದರೆ, ಪಿತ್ತ ನೆತ್ತಿಗೇರಿದ ಉಗ್ರ ರಾಷ್ಟ್ರಪ್ರೇಮಿಗಳು ಆಕೆ ರಾಷ್ಟ್ರದ್ರೋಹದ ಮಾತನ್ನಾಡಿದ್ದಾರೆ ಎಂದು ಆರೋಪಿಸಿದರು. ಅದಕ್ಕೆ ನಟಿ, ತನ್ನ ಅಭಿಪ್ರಾಯಕ್ಕೆ ತಾನು ಬದ್ಧ, ತನಗನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ತನಗಿದೆ ಎಂದರು. ಸ್ವಯಂಘೋಷಿತ ರಾಷ್ಟ್ರಪ್ರೇಮಿಗಳಿಗೆ ಅಷ್ಟುಸಾಕಿತ್ತು. ನಟಿಯ ಮೇಲೆ ಮೊಟ್ಟೆಎಸೆದರು. ಕೆಟ್ಟನಿಂದನೆಗಳ ಮಳೆ ಸುರಿಸಿದರು. ಇಂತಹ ರಾಷ್ಟ್ರೀಯತಾವಾದ ಅಥವಾ ರಾಷ್ಟ್ರಪ್ರೇಮ ಎಂಬುದು ಏಕಮುಖಿಯಾದದ್ದು ಮತ್ತು ಅಸಹಿಷ್ಣುತೆಯದ್ದು ಹಾಗೂ ವಾಸ್ತವವಾಗಿ ರಾಷ್ಟ್ರವಿರೋಧಿಯಾದದ್ದು.

ಮೇಲಿನಿಂದ ಹೇರಿಕೆಯಾಗುವ ಕೃತಕ ಸೃಷ್ಟಿಯ ರಾಷ್ಟ್ರೀಯತಾವಾದ ಅಥವಾ ರಾಷ್ಟ್ರಪ್ರೇಮ ಎಂಬುದು ಅಂತಿಮವಾಗಿ ಕ್ರೌರ್ಯ ಮತ್ತು ದಬ್ಬಾಳಿಕೆಗೆ ಕಾರಣವಾಗುತ್ತದೆ. ಅದನ್ನು ಹಿಟ್ಲರ್‌ನ ಜರ್ಮನಿ ಸಾಬೀತು ಮಾಡಿ ತೋರಿದೆ. ಸ್ಟಾಲಿನ್‌ನ ಸೋವಿಯತ್‌ ಒಕ್ಕೂಟ, ಮಾವೋ ತ್ಸೆ ತುಂಗ್‌ನ ಚೀನಾ, ಫ್ರಾಂಕೋನ ಸ್ಪೇನ್‌, ಪಿನೋಷೆಟ್‌ನ ಚಿಲಿಗಳು ಕೂಡ ಅದನ್ನೇ ಮತ್ತೆ ಮತ್ತೆ ಚರಿತ್ರೆಯುದ್ದಕ್ಕೂ ಸಾಬೀತು ಮಾಡುತ್ತಲೇ ಬಂದಿವೆ. ಮತ್ತೊಂದು ಕಡೆಗೆ ಭಿನ್ನಮತ ಅಥವಾ ಭಿನ್ನಾಭಿಪ್ರಾಯಗಳು ಎಂದೂ ಯಾವ ರಾಷ್ಟ್ರವನ್ನೂ ನಾಶ ಮಾಡಿಲ್ಲ. ಅದಕ್ಕೆ ಅಮೆರಿಕದ ಉದಾಹರಣೆ ಕಣ್ಣ ಮುಂದಿದೆ.

ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಬರಹಗಾರರು, ಸಿನಿಮಾ ನಿರ್ದೇಶಕರು, ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದ ಕಟು ಟೀಕಾಕಾರರಾಗಿದ್ದರು. ವಿಯೆಟ್ನಾಂಗೆ ಸಂಬಂಧಿಸಿದಂತೆ ಆ ಅವಧಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಪುಸ್ತಕಗಳು ಬಂದವು. ಆ ಕೃತಿಗಳಲ್ಲಿ ಸರ್ಕಾರದ ತಪ್ಪು ನಡೆಯನ್ನು ಖಂಡಿಸುವುದರಲ್ಲಿ ಯಾವ ಹಿಂಜರಿಕೆಯೂ ಕಾಣಲಿಲ್ಲ. 2013ರಲ್ಲಿ ನಡೆದ, ‘ಕಿಲ್‌ ಎನಿಥಿಂಗ್‌ ದಟ್‌ ಮೂವ್‌್ಡ: ದ ರಿಯಲ್‌ ಅಮೆರಿಕನ್‌ ವಾರ್‌ ಇನ್‌ ವಿಯೆಟ್ನಾಂ' ಹೆಸರಿನ ಒಂದು ಅಧ್ಯಯನ ಕೃತಿಯಲ್ಲಿ ವಿಯೆಟ್ನಾಂ ಯುದ್ಧ ಎಂಬುದು ಹೇಗೆ ಅಮೆರಿಕ ಪ್ರಭುತ್ವದ ಭಯೋತ್ಪಾದನೆಯ ಮತ್ತೊಂದು ರೂಪವಾಗಿತ್ತು ಎಂಬುದನ್ನು ಸಾಬೀತುಮಾಡಲಾಗಿದೆ.
ಇಷ್ಟೆಲ್ಲಾ ಆದರೂ ಅಲ್ಲಿ ಯಾವೊಬ್ಬ ಬರಹಗಾರನನ್ನೂ ರಾಷ್ಟ್ರದ್ರೋಹದ ಪ್ರಕರಣ ಹೂಡಿ, ನ್ಯಾಯಾಲಯದ ಕಟಕಟೆಗೆ ಎಳೆಯಲಿಲ್ಲ. ಹಾಗೆ ನೋಡಿದರೆ, ಇಂತಹ ಜನಾಭಿಪ್ರಾಯವೇ ಅಂತಿಮವಾಗಿ ಅಮೆರಿಕವನ್ನು ಆ ಯುದ್ಧದಿಂದ ಹಿಂದೆ ಸರಿಯುವಂತೆ ಮಾಡಿತು.

ಅಮೆರಿಕದಲ್ಲಿ ಇಲ್ಲದ್ದು ನಮ್ಮಲ್ಲಿ ಏಕೆ?
ಇರಾಕ್‌ ಯುದ್ಧ ಅಂತ್ಯವಾಗುವ ಹೊತ್ತಿಗೆ ಅಧ್ಯಕ್ಷ ಜಾಜ್‌ರ್‍ ಬುಷ್‌ ಮತ್ತು ಅವರ ಕುಟುಂಬದ ನಿಕಟವರ್ತಿ ಉದ್ಯಮಿಗಳು ಪುನರ್‌ನಿರ್ಮಾಣದ ಹೆಸರಲ್ಲಿ ಇರಾಕಿನ ಉದ್ಯಮ ವಲಯವನ್ನು ಹೇಗೆ ತಮ್ಮ ಕಬ್ಜಕ್ಕೆ ತೆಗೆದು​ಕೊಂಡರು ಎಂಬುದನ್ನು ನ್ಯೂಯಾರ್ಕ್ ಟೈಮ್ಸ್‌​​ನ ಒಬ್ಬ ಅಂಕಣಕಾರರು ಕೆಲವು ಉಲ್ಲೇಖಗಳ ಮೂಲಕ ಹೇಳುತ್ತಾರೆ. ‘ಬುಷ್‌ ಆಡಳಿತದ ಕಾರ್ಪೋರೆಟ್‌ ಕುಳಗಳ ಪಾಲಿಗೆ ಇರಾಕ್‌ ದೊಡ್ಡ ಕೊಡುಗೆಗಳ ಭಾರೀ ಅವಕಾಶವನ್ನೇ ನೀಡಿತು. ಬುಷ್‌ ಎರಡನೇ ಅವಧಿಯ ಆಡಳಿತ ದರ್ಪ, ದುರುದ್ದೇಶ ಮತ್ತು ಕ್ಷುಲ್ಲಕತನದಿಂದ ಕೂಡಿತ್ತು ಹಾಗೂ ಕಾನೂನು ಮತ್ತು ಶಿಷ್ಟಾಚಾರಗಳನ್ನು ಸಂಪೂರ್ಣ ಧೂಳೀಪಟ ಮಾಡಿತ್ತು' ಎಂಬುದನ್ನು ಅಂಕಣಕಾರರು ಉಲ್ಲೇಖಿಸುತ್ತಾರೆ. ಆದಾಗ್ಯೂ, ಆ ಅಂಕಣಕಾರರ ವಿರುದ್ಧ ಯಾವುದೇ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿಲ್ಲ ಎಂಬುದು ಗಮನಾರ್ಹ.

ಇರಾಕ್‌ ಯುದ್ಧದ ವೇಳೆ ಅಮೆರಿಕದ ಕಿರುಕುಳ, ನಿಂದನೆ, ಕಾನೂನು ಉಲ್ಲಂಘನೆ, ಸುಳ್ಳು ಮಾಹಿತಿ ಮತ್ತು ವಾಸ್ತವ ಮರೆಮಾಚುವ ಎಲ್ಲಾ ಆಟಗಳನ್ನೂ ಆಡಿತು ಎಂದು ನ್ಯೂಯಾರ್ಕ್ನ ಮಾನವ ಹಕ್ಕು ಸಂಸ್ಥೆಯ ನಿರ್ದೇಶಕರೇ ಹೇಳಿದ್ದರು. ಅಲ್ಲದೆ, ಇರಾಕ್‌ ಮೇಲಿನ ಅಮೆರಿಕದ ಅಧಿಕಾರ ಚಲಾವಣೆಯನ್ನು ‘ಬಿಡುಗಡೆಯ ಹೆಸರಲ್ಲಿ ನಡೆಯುತ್ತಿರುವ ಒಂದು ಅಪರಾಧ ಉದ್ಯಮ' ಎಂದೂ ಅವರು ಅಮೆರಿಕ ನೀತಿಯನ್ನು ಬಹಿರಂಗವಾಗಿ ಖಂಡಿಸಿದ್ದರು. ಆದಾಗ್ಯೂ ಅವರನ್ನು ಯಾರೂ ರಾಷ್ಟ್ರದ್ರೋಹಿ ಎಂದಾಗಲೀ, ದೇಶ ವಿರೋಧಿ ಎಂದಾಗಲೀ ಕರೆಯಲಿಲ್ಲ.

2003ರಲ್ಲಿ ಅಮೆರಿಕದ ಕಾರ್ಪೋರೆಟ್‌ ಎಕ್ಸಿಕ್ಯೂಟಿವ್‌ ಒಬ್ಬರು, ಅಮೆರಿಕ ಒಂದು ಡಜನ್‌ಗೂ ಹೆಚ್ಚು ರಾಷ್ಟ್ರಗಳಲ್ಲಿ ನಿರಂಕುಶ ಪ್ರಭುತ್ವನ್ನು ಸ್ಥಾಪಿಸುವ ಮೂಲಕ, ತಾಲಿಬಾನಿಗಳಿಗೆ ಆಂತ್ರಾಕ್ಸ್‌, ಶಸ್ತ್ರಾಸ್ತ್ರ ಸರಬರಾಜು ಮಾಡುವ ಮೂಲಕ ಹೇಗೆ ಜಗತ್ತಿನಾದ್ಯಂತ ವಿಕೃತಿಯನ್ನು, ಕೆಡುಕನ್ನು ಹರಡಿತು ಎಂಬ ಬಗ್ಗೆ ಒಂದು ಕೃತಿಯನ್ನೇ ಬರೆದರು. ಆ ಕೃತಿಯ ಹೆಸರು ‘ರೋಗ್‌ ನೇಷನ್‌'! ಆದಾಗ್ಯೂ ಯಾವೊಬ್ಬ ಅನಾಮಿಕ ದೇಶಭಕ್ತನೂ ಅವರ ಮನೆಯ ಕದ ತಟ್ಟಲಿಲ್ಲ, ಅವರು ಬಾಗಿಲು ತೆಗೆಯುತ್ತಿದ್ದಂತೆ ಗುಂಡಿಕ್ಕಿ ಕೊಲ್ಲಲಿಲ್ಲ!

ರಾಷ್ಟ್ರೀಯವಾದಕ್ಕೆ ದೇವರ ಸ್ಥಾನ
1982ರಲ್ಲಿ ಇಂತಹದ್ದೇ ಉಗ್ರ ರಾಷ್ಟ್ರೀಯತಾವಾದ ಮಾರ್ಗರೇಟ್‌ ಥ್ಯಾಚರ್‌ ಅವರನ್ನು ಅರ್ಜೆಂಟೈನಾದ ವಿರುದ್ಧದ ಫಾಕ್‌ಲೆಂಡ್ಸ್‌ ಯುದ್ಧಕ್ಕೆ ಹಚ್ಚಿತ್ತು. ಯುದ್ಧದ ಬಳಿಕ ದೇವರು ಬ್ರಿಟನ್‌ ಪರ ಇದ್ದದ್ದಕ್ಕೆ ಲಂಡನ್‌ನಲ್ಲಿ ವಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಬ್ರಿಟನ್‌ ಧಾರ್ಮಿಕ ಮುಖಂಡ ಕ್ಯಾಂಟರ್‌ಬರಿ ಆಚ್‌ರ್‍ ಬಿಷಪ್‌ ರಾಬರ್ಟ್‌ ರನ್ಸಿ ವಿಭಿನ್ನ ನಿಲುವು ತಳೆದಿದ್ದರು. ಅವರು ಹೇಳಿದರು; ‘ದೇವರ ಇಚ್ಛೆಯನ್ನು ಅರ್ಥೈಸುವ ದುಸ್ಸಾಹಸ ಮಾಡುವವರು, ದೇವರು ಒಂದು ದೇಶಕ್ಕೆ ಮಾತ್ರ ಸೇರಿದವನು, ಮತ್ತೊಂದಕ್ಕೆ ಅಲ್ಲ ಎಂಬ ಹಕ್ಕು ಮಂಡಿಸಬಾರದು. ದೇವರಿಗೆ ಸಮರ್ಪಿಸಬೇಕಾದ ಪ್ರೀತಿ ಮತ್ತು ನಿಷ್ಠೆಯನ್ನು ದೇವರ ಬದಲಿಗೆ; ಆತನ ಸ್ಥಾನವನ್ನು ಆಕ್ರಮಿಸಿರುವ ಅತ್ಯಂತ ಅಪಾಯಕಾರಿಯಾದ ರಾಷ್ಟ್ರೀಯತಾವಾದಕ್ಕೆ ಕೊಟ್ಟಿರುವುದರಿಂದಲೇ ಯುದ್ಧ ಹುಟ್ಟುತ್ತದೆ'.

ಭಾರತದಲ್ಲಿ ಕೂಡ ಇಂದು ಬಂದೂಕು, ಮೊಟ್ಟೆಮತ್ತು ದೇಶದ್ರೋಹದ ಕಾಯ್ದೆಯನ್ನು ಹಿಡಿದು ಕಣ್ಣಪಟ್ಟಿಕಟ್ಟಿದಂತಹ ಸೀಮಿತ ದೃಷ್ಟಿಕೋನದ ರಾಷ್ಟ್ರೀಯತಾವಾದ ಅಥವಾ ರಾಷ್ಟ್ರಪ್ರೇಮವನ್ನು ಹರಡುತ್ತಿರುವವರು ಅವರ ಪ್ರಕಾರ ಧಾರ್ಮಿಕ ಭಾವನೆಗಳಿಂದ ಪ್ರೇರಿತರಾಗಿಬಹುದು. ಆದರೆ, ಅದು ಧರ್ಮದ ತಪ್ಪು ಗ್ರಹಿಕೆ. ಚರಿತ್ರೆ ಅವರಿಗೆ ಒಂದು ಅಪೂರ್ವ ಅವಕಾಶವನ್ನು ನೀಡಿದೆ. ಆ ಅವಕಾಶವನ್ನು ಅವರು ವಿವೇಕದಿಂದ ಬಳಸದೇ ಹೋದರೆ, ಅದು ವ್ಯರ್ಥವಾಗಲಿದೆ. ರಾಜಕೀಯ ಬಲ ತಂದುಕೊಡುವ ದರ್ಪದ ಮೂಲಕ ಮಾಡುವ ಕೃತ್ಯಗಳು ಅಂತಿಮವಾಗಿ ಮೂರ್ಖತನದಿಂದಲೇ ಕೂಡಿರುತ್ತವೆ.