Asianet Suvarna News Asianet Suvarna News

[ನೇರಮಾತು] ಚೀನಾ ಪ್ರಾಬಲ್ಯದ ಎದುರು ವ್ಯವಸ್ಥಿತವಾಗಿ ಸೋತ ಭಾರತ

Neramathu Column by TJS George

ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ ಖಂಡಗಳನ್ನು ರೈಲ್ವೆ, ಬಂದರು ಹಾಗೂ ಪವರ್‌ ಗ್ರಿಡ್‌ ಮೂಲಕ ಬೆಸೆಯುವ ಭಾರಿ ಯೋಜನೆಗೆ ಚೀನಾ ಕೈಹಾಕಿದೆ. ಇನ್ನೊಂದೆಡೆ, ಇಷ್ಟುದಿನ ಭಾರತವನ್ನು ಪ್ರತಿಸ್ಪರ್ಧಿ ಎಂಬಂತೆ ಪರಿಗಣಿಸಿದ್ದ ಆ ದೇಶ, ಈಗ ಭಾರತ ತನಗೊಂದು ಪ್ರತಿಸ್ಪರ್ಧಿಯೇ ಅಲ್ಲ ಎಂಬ ನಿಲುವಿಗೂ ಬಂದಿದೆ. ಇನ್ನು ಒಂದು ವಾರದಲ್ಲಿ ಚೀನಾದಲ್ಲಿ ಬೃಹತ್‌ ರಾಜತಾಂತ್ರಿಕ ಸಮಾವೇಶವೊಂದು ಜರುಗಲಿದೆ. ಈ ಸಮಾವೇಶದಲ್ಲಿ ಭಾರತವನ್ನು ಹೊರತುಪಡಿಸಿ ಯುರೋಪ್‌ ಮತ್ತು ಏಷ್ಯಾ (ಯುರೇಷ್ಯಾ) ವಲಯದ ರಾಷ್ಟ್ರಗಳ ಪ್ರಮುಖರು ಭಾಗವಹಿ ಸಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಹೆಮ್ಮೆಯ ಒನ್‌ ಬೆಲ್ಟ್‌ ಒನ್‌ ರೋಡ್‌(ಒಬಿಒಆರ್‌) ಯೋಜನೆಯ ಕುರಿತ ಮೊದಲ ಶೃಂಗ ಸಮಾವೇಶ ಇದಾಗಿದ್ದು, ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ ಖಂಡಗಳನ್ನು ರೈಲ್ವೆ, ಬಂದರು ಹಾಗೂ ಪವರ್‌ ಗ್ರಿಡ್‌ ಮೂಲಕ ಬೆಸೆಯುವ ಮಹತ್ವಾಕಾಂಕ್ಷಿ ಯೋಜನೆಯ ಕುರಿತ ಮಾತುಗಳಿಗೆ ಅದು ವೇದಿಕೆಯಾಗಲಿದೆ.

ಈ ಯೋಜನೆಯ ಪರಿಕಲ್ಪನೆಯೇ ಚೀನಾದ ಮಹತ್ವಾಕಾಂಕ್ಷೆಗೆ ನಿದರ್ಶನ ಮತ್ತು ಅದರ ದಿಟ್ಟತನಕ್ಕೆ ಉದಾಹರಣೆ ಕೂಡ. ಒಬಿಒಆರ್‌ ಯೋಜನೆಯನ್ನು ಅದರ ಸಮಗ್ರ ಹಿನ್ನೆಲೆಯಲ್ಲಿ ಗ್ರಹಿಸದೆ ಕೇವಲ ಪ್ರತ್ಯೇಕವಾಗಿ ನೋಡಿದರೆ, ನಾವು ಅದರ ಹಿಂದಿನ ದೊಡ್ಡ ಸಂದೇಶವನ್ನು ಕಡೆಗಣಿಸಿದಂತೆಯೇ ಸರಿ. ಚೀನಾವನ್ನು ಜಗತ್ತಿನ ಎರಡನೇ ಅತಿದೊಡ್ಡ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿದ ಮತ್ತು ಮೊದಲ ರಾಷ್ಟ್ರವನ್ನು ಹಿಂದಿಕ್ಕಲು ಸಜ್ಜುಗೊಳಿಸಿರುವ ಅದರ ಜಾಗೃತಿಯ ಒಂದು ಭಾಗ ಈ ಯೋಜನೆ. ಒಬಿಒಆರ್‌ನಂತಹ ಯೋಜನೆಗಳ ಮೂಲಕ ಸಾಧಿಸುತ್ತಿರುವ ಆರ್ಥಿಕ ಬಲ ಕೂಡ ಚೀನಾ ತನ್ನ ಸೇನಾ ಮತ್ತು ವ್ಯೂಹಾತ್ಮಕ ಬಲದ ಮೂಲಕ ಗಳಿಸಿರುವ ಜಾಗತಿಕ ಪ್ರಭಾವ ಮತ್ತು ಪ್ರಾಬಲ್ಯದ ಮುಂದುವರಿದ ಭಾಗವೇ.

ದಕ್ಷಿಣ ಚೀನಾ ಸಮುದ್ರದ ವಿಷಯವನ್ನೇ ತೆಗೆದುಕೊಂಡರೂ, ಚೀನಾದ ಪ್ರಾಬಲ್ಯ ಎಂತಹದ್ದು ಎಂಬುದು ಅರ್ಥವಾಗುತ್ತದೆ. ಈ ಸಮುದ್ರದ ಬಹುತೇಕ ಭಾಗ ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್‌ ಮತ್ತು ಇಂಡೋನೇಷ್ಯಾ ಜಲಗಡಿಗಳಿಂದ ಆವರಿಸಿದೆ. ಹಾಗಾಗೇ ಆರಂಭದಲ್ಲಿ ಆ ದೇಶಗಳು ಚೀನಾದ ಆಕ್ರಮಣವನ್ನು ವಿರೋಧಿಸಿದ್ದವು. ಫಿಲಿಪ್ಪೀನ್ಸ್‌ ಅಂತೂ ಅಂತಾರಾಷ್ಟ್ರೀಯ ಕೋರ್ಟಿಗೆ ಹೋಗಿ ತನ್ನ ಪರ ತೀರ್ಪು ಪಡೆಯಿತು ಕೂಡ. ಆದರೆ, ಚೀನಾ ಅದಾವುದಕ್ಕೂ ಸೊಪ್ಪು ಹಾಕಲಿಲ್ಲ. ದಕ್ಷಿಣ ಚೀನಾ ಸಮುದ್ರದ ಉದ್ದಕ್ಕೂ ಮರಳುದಿಬ್ಬಗಳು, ದ್ವೀಪ ಸಮೂಹ ಸಂಪರ್ಕ ಮತ್ತು ಲಘು ವಿಮಾನ ನಿಲ್ದಾಣಗಳ ನಿರ್ಮಾಣವನ್ನು ಮುಂದುವರಿಸಿತು. ಇದೀಗ ಸಂಪೂರ್ಣ ಸೇನಾ ನೆಲೆಯಾಗಿ ಪರಿವರ್ತನೆಯಾಗಿರುವ ದಕ್ಷಿಣ ಚೀನಾ ಸಮುದ್ರದ ದ್ವೀಪಗಳಲ್ಲಿ ನೂರಾರು ಕ್ಷಿಪಣಿಗಳನ್ನು ಪೇರಿಸಿಡಲಾ ಗಿದೆ ಎಂದು ಅಮೆರಿಕ ಹೇಳುತ್ತಿವೆ. ಆದರೆ, ಚೀನಾವನ್ನು ತಡೆಯಲು ಈಗ ಕಾಲ ಮಿಂಚಿದೆ ಎಂದು ಆಸ್ಪ್ರೇಲಿಯಾ ಹೇಳುತ್ತಿದೆ. ಆ ವಲಯದಲ್ಲಿ ಚೀನಾ ಎಷ್ಟರಮಟ್ಟಿಗೆ ಮುನ್ನುಗ್ಗಿದೆ ಎಂದರೆ, ಇದೀಗ ಸ್ವತಃ ಫಿಲಿಪ್ಪೀನ್ಸ್‌ ಅಧ್ಯಕ್ಷರೇ, ಈ ವಿಷಯದಲ್ಲಿ ಏನೂ ಮಾಡಲಾಗದು, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವು ದೊಂದೇ ಉಳಿದಿರುವ ಮಾರ್ಗ ಎಂದು ಇತರ ದಕ್ಷಿಣ ಏಷ್ಯಾ ನಾಯಕರಿಗೆ ಕರೆ ನೀಡಿದ್ದಾರೆ. ಒಂದೇ ಒಂದು ಗುಂಡಿನ ಸದ್ದು ಮೊಳಗಿಸದೆ ಚೀನಾ ಇಡೀ ದಕ್ಷಿಣ ಚೀನಾ ಸಮುದ್ರವನ್ನು ತನ್ನ ಕೈವಶ ಮಾಡಿಕೊಂಡಿದೆ ಮತ್ತು ಅದರ ಸುತ್ತಲ ಅರ್ಧ ಡಜನ್‌ ದೇಶWಳು ತನ್ನ ಸುತ್ತ ಉಪಗ್ರಹಗಳಂತೆ ಗಿರಕಿಹೊಡೆಯುವಂತೆ ಮಾಡಿದೆ!

ಊಹಿಸಲಸಾಧ್ಯ ವೇಗದಲ್ಲಿ ಪೂರ್ಣಗೊಂಡ ತನ್ನದೇ ದೇಸಿ ನಿರ್ಮಾಣದ ಯುದ್ಧವಿಮಾನ ವಾಹಕ ನೌಕೆಯನ್ನು ಚೀನಾ ಕಳೆದ ತಿಂಗಳು ಸೇವೆಗೆ ಸೇರಿಸಿಕೊಂಡಿತು (ಭಾರತದ ಕೊಚ್ಚಿಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಯುದ್ಧನೌಕೆ ನಿಗದಿತ ಅವಧಿಗಿಂತ ಎಂಟು ವರ್ಷ ಹಿಂದೆ ಬಿದ್ದಿದೆ!) ಅಲ್ಲದೆ, ಇನ್ನೂ ಆರು ಯುದ್ಧನೌಕೆಗಳನ್ನು ನಿರ್ಮಾಣ ಮಾಡಿ ಹಿಂದೂ ಮಹಾಸಾಗರದಲ್ಲಿ ಶಾಶ್ವತವಾಗಿ ನಿಯೋಜಿಸಲಾಗುವುದು ಎಂದೂ ಚೀನಾ ಹೇಳಿದೆ. ಪಾಕಿಸ್ತಾನದ ಗ್ವದಾರ್‌ನಲ್ಲಿ ಬೃಹತ್‌ ಬಂದರು ನಿರ್ಮಾಣ ಮಾಡಿರುವ ಚೀನಾ, ಆಡೆನ್‌ ಜಲಸಂಧಿಯ ಜಿಬೋತಿ ಬಂದರಿನಲ್ಲಿ ತನ್ನ ಸೇನಾ ನೆಲೆಯನ್ನೇ ಸ್ಥಾಪಿಸಿದೆ. ಶಕ್ತಿಶಾಲಿ ನೌಕಾಬಲವಾಗಿ ಹಿಂದೂ ಮಹಾಸಾಗರ ಮತ್ತು ಏಷ್ಯಾ-ಪೆಸಿಫಿಕ್‌ ವಲಯದಲ್ಲಿ ಚೀನಾ ಅತ್ಯಂತ ಪ್ರಬಲ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಜೊತೆಗೆ ಇತ್ತೀಚಿನ ಅದರ ಈ ಕಾರ್ಯಗಳು ಆ ಪ್ರಾಬಲ್ಯವನ್ನು ಇನ್ನಷ್ಟುಗಟ್ಟಿಗೊಳಿಸುತ್ತಿವೆ ಅಷ್ಟೇ!

ಇಷ್ಟೇ ಅಲ್ಲ; ಇದಕ್ಕೆ ಮತ್ತೊಂದು ಸೇರ್ಪಡೆ ವ್ಯೂಹಾತ್ಮಕ ಮೈತ್ರಿಯ ವಿಷಯದಲ್ಲಿ ಚೀನಾದ ಜಾಣ್ಮೆಯ ನಡೆ. ರಷ್ಯಾದೊಂದಿಗಿನ ತನ್ನ ಬಾಂಧವ್ಯವನ್ನು ಇತ್ತೀಚಿನ ವರ್ಷಗಳಲ್ಲಿ ವೃದ್ಧಿಸಿಕೊಂಡಿರುವ ಅದು, ಚೀನಾ-ರಷ್ಯಾ- ಪಾಕಿಸ್ತಾನ ಆರ್ಥಿಕ ಪಾಲುದಾರಿಕೆ ಮೈತ್ರಿಯನ್ನು ಗಟ್ಟಿಗೊಳಿಸಿಕೊಂಡಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ; ರಷ್ಯಾ ಒಂದು ಕಾಲದಲ್ಲಿ ಭಾರತದ ಪರಮಾಪ್ತ ಮಿತ್ರರಾಷ್ಟ್ರವಾಗಿತ್ತು ಮತ್ತು ಆಗ ರಷ್ಯಾ ಪಾಕಿಸ್ತಾನವನ್ನು ಬಹಳ ಅಂತರದಲ್ಲಿಟ್ಟಿತ್ತು. ಆದರೆ, ಭಾರತ ರಷ್ಯಾದ ಬದಲಿಗೆ ಅಮೆರಿಕವನ್ನು ತನ್ನ ಪರಮಾಪ್ತ ರಾಷ್ಟ್ರವನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ವಿದೇಶಾಂಗ ನೀತಿಯ ಹಳಿ ಬದಲಿಸುತ್ತಲೇ, ಇಡೀ ವಲಯದ ವ್ಯೂಹಾತ್ಮಕ ಸಮತೋಲನವೇ ಹಳಿ ತಪ್ಪಿತು. ಅದರಿಂದಾಗಿ ಭಾರತಕ್ಕೆ ಆದ ಲಾಭವೇನು? ಒಂದೆಡೆ, ಚೀನಾ ಮತ್ತು ರಷ್ಯಾ ರೂಪಿಸುತ್ತಿರುವ ದಕ್ಷಿಣ ಏಷ್ಯಾ ಭೌಗೋಳಿಕ ರಾಜಕಾರಣದ ಅವಿಭಾಜ್ಯ ಅಂಗವಾಗಿ ಪಾಕಿಸ್ತಾನ ಹೊರಹೊಮ್ಮಿದೆ. ಆದರೆ, ಅದಕ್ಕೆ ಪ್ರತಿಯಾಗಿ ತನ್ನ ಏಷ್ಯಾ ನೀತಿಯ ಸೂತ್ರವಾಗಿ ಭಾರತವನ್ನು ಬಳಸುವ ಅಮೆರಿಕ ವ್ಯೂಹಾತ್ಮಕ ಕಾರ್ಯನೀತಿ ಸಂಪೂರ್ಣ ಕರಗಿಹೋಗುತ್ತಿರುವಂತೆ ಕಾಣುತ್ತಿದೆ. ಟ್ರಂಪ್‌ ಅವರ ಅಮೆರಿಕ ಎಷ್ಟುಅಂದಾಜಿಗೆ ನಿಲುಕದ್ದು ಎಂದರೆ, ಕಳೆದ ವಾರ ಅಲ್ಲಿನ ವಿದೇಶಾಂಗ ಸಚಿವಾಲಯವೇ ಏಷ್ಯಾದಲ್ಲಿ ಅಮೆರಿಕದ ಮಹತ್ವದ ಪ್ರಾಶಸ್ತ್ಯ ಯಾವಾಗಲೂ ಚೀನಾಕ್ಕೆ ಎಂದು ಹೇಳಿದೆ! ಆ ಮೂಲಕ ಈ ವಲಯದಲ್ಲಿ ತಮ್ಮ ದೃಷ್ಟಿಯಲ್ಲಿ ಭಾರತದ ಸ್ಥಾನಮಾನ ಏನು ಎಂಬುದನ್ನು ಪರೋಕ್ಷವಾಗಿ ಅಮೆರಿಕ ತೋರಿಸಿದೆ.

ಅಲ್ಲದೆ, ಭಾರತದ ಕುರಿತ ಚೀನಾದ ಧೋರಣೆ ಕೂಡ ಇತ್ತೀಚಿನ ವರ್ಷಗಳಲ್ಲಿ ಬದಲಾಗಿದೆ. ಒಂದು ಕಾಲದಲ್ಲಿ ತಾನು ಭಾವಿಸಿದಂತೆ ಭಾರತ ತಾನು ತೀರಾ ಗಂಭೀರವಾಗಿ ಪರಿಗಣಿಸಬೇಕಾದ ಪ್ರತಿಸ್ಫರ್ಧಿ ಅಲ್ಲ ಎಂಬ ನಿಲುವಿಗೆ ಅದು ಬಂದಿದೆ.
ಇರಾನ್‌ ಆರಂಭದಲ್ಲಿ ಭಾರತದೊಂದಿಗಿನ ಸಂಬಂಧ ವೃದ್ಧಿಗೆ ಆಸಕ್ತಿ ವಹಿಸಿತ್ತು. ಆದರೆ, ಇರಾನ್‌ ಆಸಕ್ತಿಗೆ ನಮ್ಮ ಪ್ರತಿಕ್ರಿಯೆ ನೀರಸವಾಗಿತ್ತು. ಹಾಗಾಗಿ ಸಹಜವಾಗೇ ಇರಾನ್‌ ಚೀನಾ-ಪಾಕಿಸ್ತಾನ- ರಷ್ಯಾ ಮೈತ್ರಿ ಕಡೆ ವಾಲಿತು. ಒಟ್ಟಾರೆ ಈ ವಲಯದಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಕೈಚೆಲ್ಲುತ್ತಿದೆ ಎಂಬುದು ಕೂಡ ವಾಸ್ತವ. ಶ್ರೀಲಂಕಾದ ವಿಷಯದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿನ ಟ್ರಿಂಕೊಮಲೆಯಲ್ಲಿ ಭಾರತ ಬಂದರು ನಿರ್ಮಾಣಕ್ಕೆ ಮುಂದಾದಾಗ ಸ್ಥಳೀಯರ ವಿರೋಧ ಎಷ್ಟುಪ್ರಬಲವಾಯಿತು ಎಂದರೆ; ಅಂತಿಮವಾಗಿ ಆ ಯೋಜನೆಯನ್ನೇ ಕೈಬಿಡಬೇಕಾಯಿತು. ಆದರೆ, ಅದೇ ಹೊತ್ತಿಗೆ ಆ ದೇಶದ ರಾಜಧಾನಿ ಕೊಲಂಬೋದಲ್ಲೇ ಚೀನಾ ಭಾರೀ ಬಂದರು ನಿರ್ಮಾಣ ಕಾರ್ಯ ಮುಂದುವರಿಸಿತ್ತು! ಇದೆಲ್ಲವನ್ನು ನೋಡುತ್ತಿದ್ದರೆ, ಎಲ್ಲೋ ಏನೋ ನಮ್ಮಿಂದಲೇ ತಪ್ಪಾಗಿದೆ ಎನಿಸದಿರದು. ಅದನ್ನು ಹುಡುಕುವವರು ಯಾರು? ತಪ್ಪನ್ನು ಸರಿಪಡಿಸುವವರು ಯಾರು?

ಬೆಕ್ಕಿಗೆ ಗಂಟೆ ಕಟ್ಟುವವರು ಬೇಕಾಗಿದ್ದಾರೆ!