Asianet Suvarna News Asianet Suvarna News

[ನೇರ ಮಾತು] ದೇಶವನ್ನು ಬೆಸೆಯದ ಹಿಂದಿ ಭಾಷಾ ಪ್ರಚಾರ

ಸ್ವಸ್ಥ ಮತ್ತು ದೂರದೃಷ್ಟಿಯ ಭಾಷಾ ನೀತಿಯ ಕನಸು ಕಂಡ ಏಕೈಕ ಭಾರತೀಯ ನಾಯಕ ಎಂದರೆ ಅದು ಸುಭಾಶ್ಚಂದ್ರ ಬೋಸ್‌. 1938ರ ಹರಿಪುರ ಕಾಂಗ್ರೆಸ್‌ ಅಧಿವೇಶನದಲ್ಲಿ ಬೋಸ್‌, ಹಿಂದೂಸ್ತಾನಿ ಭಾಷೆಗೆ ರೋಮನ್‌ ಲಿಪಿ ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಮಾಡಿದ್ದರು. ಆದರೆ ಕಾಂಗ್ರೆಸ್‌ ಅವರ ಸಲಹೆ ನಿರ್ಲಕ್ಷಿಸಿತು.

Nera Mathu
  • Facebook
  • Twitter
  • Whatsapp

ಹಿಂದಿ ಭಾಷೆಯ ಪ್ರಚಾರಕ್ಕೆ ಇತರೆ ಹಲವು ಉತ್ತಮ ಮಾದರಿಗಳಿರುವಾಗ ಅನಗತ್ಯವಾಗಿ ಹಿಂದಿ ಹೇರಿಕೆಯ ವಿವಾದದ ಕಿಡಿ ಹೊತ್ತಿಸುವುದು ಅಗತ್ಯವಿದೆಯೇ? ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದು ಹದಿನೈದು ದಿನದಲ್ಲೇ ಕೇಂದ್ರ ಸರ್ಕಾರದ ವಿವಿಧ ಕಚೇರಿಗಳಿಗೆ ಒಂದು ಸುತ್ತೋಲೆ ಕಳಿ​ಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ​ಯನ್ನೇ ಬಳಸುವಂತೆ ಇಲಾಖೆಗಳಿಗೆ ಸೂಚಿಸಿದ್ದ ಸುತ್ತೋಲೆ ಅದು. ಆದರೆ, ಹಿಂದಿಯೇತರ ರಾಜ್ಯ​ಗ​ಳ​ಲ್ಲಿ ಆ ಸುತ್ತೋಲೆಯ ವಿರುದ್ಧ ಹೋರಾಟ​ಗಳು ಭುಗಿ​ಲೆ​ದ್ದವು. ಆಗ ಪ್ರತಿರೋಧದ ಬಿಸಿಗೆ ಕರಗಿದ ಪ್ರಧಾನಿ ಕಾರ್ಯಾಲಯ, ಆ ಸುತ್ತೋಲೆ ಹಿಂದಿ ಮಾತ​ನಾ​ಡು​ವ ರಾಜ್ಯಗಳಿಗೆ ಮಾತ್ರ ಸಂಬಂಧಿಸಿದ್ದು ಎಂದು ಸಮ​ಜಾಯಿಷಿ ನೀಡಿ ವಿವಾದದ ಬೆಂಕಿ ತಣ್ಣಗಾಗಿಸಿತು.

ಬಳಿಕ ಈಗ ಈ ತಿಂಗಳ ಮೊದಲ ವಾರ, ರಾಜನಿ​ಗಿಂತ ರಾಜಸೇವಕನೇ ನಿಷ್ಠಾವಂತ ಎನ್ನುವಂತೆ ಕೇಂದ್ರ ಸಚಿವ ಕಿರಣ್‌ ರಿಜಿಜು ನೇತೃತ್ವದ ಆಡಳಿತ ಭಾಷಾ ಸಮಿತಿ ಎಲ್ಲಾ ಗಣ್ಯರು ಹಿಂದಿಯಲ್ಲೇ ಮಾತ​ನಾಡ​ಬೇಕು (ಹಿಂದಿಯಲ್ಲಿ ಮಾತನಾಡದೇ ಇದ್ದವರನ್ನು ಗಣ್ಯರು ಎಂದು ಪರಿಗಣಿಸಲಾಗದು ಎಂಬರ್ಥದಲ್ಲಿ!) ಮತ್ತು ವಿಮಾನಗಳಲ್ಲಿ ಕೂಡ ಹಿಂದಿಯಲ್ಲೇ ಮೊದಲು ಸೂಚನೆಗಳನ್ನು ನೀಡಬೇಕು, ನಂತರ ಇಂಗ್ಲಿಷ್‌ ಬಳಸ​ಬ​ಹುದು​(ಈಗಲೂ ಹಾಗೇ ಮಾಡುತ್ತಿರುವುದು) ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತು ಮತ್ತು ರಾಷ್ಟ್ರಪತಿಗಳು ಅದಕ್ಕೆ ಅಂಗೀಕಾರ ನೀಡಿಯೂ ಬಿಟ್ಟರು! ಆ ಬಗ್ಗೆ ಆಕ್ಷೇಪಗಳು, ವಿರೋಧಗಳು ಕೇಳಿ ಬಂದಾಗ, ನಾವು ಹಿಂದಿಯನ್ನು ಹೇರುತ್ತಿಲ್ಲ. ಇತರ ಭಾಷೆಗಳಂತೆ ಹಿಂದಿಯನ್ನೂ ಪ್ರಚಾರ ಮಾಡುತ್ತಿದ್ದೇವೆ ಅಷ್ಟೇ ಎಂದು ಸಚಿವ ರಿಜಿಜು ಸ್ಪಷ್ಟನೆ ನೀಡಿದರು. ಇತರೆ ಭಾಷೆಗಳಂತೆ? ಹಾಗಾದರೆ, ತೆಲುಗು ಅಥವಾ ಕೊಂಕಣಿ ಭಾಷೆಯ ಪ್ರಚುರಪಡಿಸುವ ನಿಟ್ಟಿನಲ್ಲಿ ರಿಜಿಜು ಕೈಗೊಂಡ ಇತ್ತೀಚಿನ ಕ್ರಮ ಏನು?

ಹಿಂದಿವಾಲಾಗಳ ದಬ್ಬಾಳಿಕೆ
ದಕ್ಷಿಣ ಭಾರತೀಯರು ಹಿಂದಿ ವಿರೋಧಿಗಳು ಎಂದು ಭಾವಿಸುವುದು ‘ಹಿಂದಿ ಪ್ರತಿಷ್ಠೆ'ಯ ಮನಸ್ಥಿತಿಯ ಫಲ. ಆದರೆ, ವಾಸ್ತವವಾಗಿ ದಕ್ಷಿಣ ಭಾರತೀಯರು ಹಿಂದಿ ವಿರೋಧಿಗಳಲ್ಲ ಎಂಬುದಕ್ಕೆ ಈ ಭಾಗದಲ್ಲಿ ಹಿಂದಿ ಸಿನಿಮಾ, ಟಿವಿ ವಾಹಿನಿಗಳು, ಕ್ರೀಡೆಗಳ ಜನ​ಪ್ರಿಯತೆಯೇ ಸಾಕ್ಷಿ. ಜೊತೆಗೆ ಹಿಂದಿಯನ್ನು ಈ ವಲಯ​ದಲ್ಲಿ ಪ್ರಚುರಪಡಿಸುವಲ್ಲಿ ಮಹತ್ವದ ಪಾತ್ರ ವಹಿ​ಸುವ ಉತ್ತರಭಾರತದ ವಲಸೆ ಕಾರ್ಮಿಕರನ್ನು ದಕ್ಷಿಣದವರು ಸ್ವಾಗತಿಸಿರುವುದು ಕೂಡ ಗಮನಾರ್ಹ. ಆದರೆ, ನಿಜವಾಗಿಯೂ ಹಿಂದಿಗೆ ಅಡ್ಡಿಯಾಗುವ ಎರಡು ಅಂಶಗಳೆಂದರೆ; ಒಂದು, ಹಿಂದಿವಾಲಾಗಳ ಮೇಲರಿ​ಮೆಯ ಸ್ವಭಾವ, ಅದರಲ್ಲೂ ಹುದ್ದೆ, ಸ್ಥಾನ​ಮಾನ​​ದಲ್ಲಿ ಉನ್ನತಮಟ್ಟದಲ್ಲಿದ್ದರಂತೂ ಅವರ ದಬ್ಬಾಳಿ​ಕೆ​ಯ ಮನೋಭಾವಕ್ಕೆ ಮಿತಿಯೇ ಇರುವು​ದಿ​ಲ್ಲ. ಮತ್ತೊಂದು, ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದಿ ಮಾತನಾಡುವವರಿಗೆ ಸಿಗುವ ಇನ್ನಿಲ್ಲದ ಮಾನ್ಯತೆ ಮತ್ತು ಆದ್ಯತೆ.

ಅಧಿಕೃತ ಸರ್ಕಾರಿ ನೌಕರಿ ಪೋರ್ಟಲ್‌ 2016ರಲ್ಲಿ ಸಾವಿರಾರು ಸರ್ಕಾರಿ ನೇಮಕಾತಿಯಲ್ಲಿ ಹಿಂದಿ ಮಾತೃ​​ಭಾಷೆ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡ​ಲಾ​ಯಿತು. ಆದರೆ, ಹಿಂದಿ ಭಾಷೆ​​ಯೊಂದಿ​ಗೆ ಮಿಳಿತ​ವಾ​​ಗಿರುವ ಇಂತಹ ಹೊಟ್ಟೆ-​ಬಟ್ಟೆಯ ಪರಿಣಾಮಗಳು ರಿಜಿಜು ಅವರಂತಹ ಹಿಂದಿ ಕಟ್ಟರ್‌ವಾದಿಗಳಿಗೆ ಅರ್ಥವಾಗುವುದೇ ಇಲ್ಲ ಎಂಬುದು ದುರಂತ.

ರಿಜಿಜು ಅವರು ‘ಎಲ್ಲಾ' ಭಾಷೆಗಳ ಪ್ರಚಾರದಲ್ಲಿ ಮಗ್ನವಾಗಿರುವ ಹೊತ್ತಿಗೇ ಮತ್ತೊಬ್ಬ ದೇಶಭಕ್ತ ‘ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸಲು' ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಮಕ್ಕಳಿಗೆ ಹಿಂದಿ ಕಲಿಕೆ ಕಡ್ಡಾಯಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ ಮೆಟ್ಟಿ​ಲೇರಿದ್ದರು. ಆದರೆ, ಸುಪ್ರೀಂಕೋರ್ಟ್‌ ಆ ಮನವಿ​ಯನ್ನು ತಳ್ಳಿಹಾಕಿದ್ದು ಮಾತ್ರವಲ್ಲ, ಅರ್ಜಿ ಹಾಕಿ​ದಾತ ಬಿಜೆಪಿ ದೆಹಲಿ ಘಟಕದ ವಕ್ತಾರ ಎಂಬು​ದನ್ನು ಗಮನಿಸಿ, ನೀವು ಈ ಬಗ್ಗೆ ನಿಮ್ಮದೇ ಪಕ್ಷವನ್ನು ಏಕೆ ಕೇಳಬಾರದು? ಸ್ವತಃ ಸರ್ಕಾರದ ಭಾಗವಾಗಿದ್ದೀರಿ ಅಲ್ಲವೆ? ಎಂದು ಬಿಸಿಮುಟ್ಟಿಸಿತು. ಹಾಗೆ ನೋಡಿದರೆ, ಅವರು 1968ರಲ್ಲೇ ಸರ್ಕಾರ ನೀತಿಯಾಗಿ ಅಳವಡಿಸಿ​ಕೊಂಡಿ​ರುವ ತ್ರಿಭಾಷಾ ಸೂತ್ರದ ಬಗ್ಗೆ ಯಾಕೆ ಕೇಳ​ಬಾರದು? ಅದರ ಪ್ರಕಾರ, ಹಿಂದಿ ಮಾತನಾಡುವ ರಾಜ್ಯ​ಗಳಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಯಾವು​ದಾ​ದ​ರೊಂದು ಆಧುನಿಕ ಭಾರತೀಯ ಭಾಷೆಯನ್ನು ಕಲಿ​​​ಯ​ಲೇಬೇಕು. ಆದರೆ, ಉತ್ತರಪ್ರದೇಶದಲ್ಲಿ ಎಷ್ಟುಮಂದಿ ಇಂಗ್ಲಿಷ್‌ ಕಲಿತಿದ್ದಾರೆ ಅಥವಾ ಮತ್ತೊಂದು ಭಾರತೀಯ ಭಾಷೆ ಕಲಿತಿದ್ದಾರೆ?

ಅಹಂ, ದರ್ಪದಿಂದ ಭಾಷೆ ಬೆಳೆಯಲ್ಲ
ಭಾಷಾ ಬೆಳವಣಿಗೆಯ ವಿಷಯದಲ್ಲಿ ನಮ್ಮಂತೆ ಹುಸಿ ಹೆಚ್ಚುಗಾರಿಕೆ, ಪ್ರತಿಷ್ಠೆ, ಅಹಂ ಮತ್ತು ದರ್ಪಕ್ಕೆ ಗಂಟು​ಬೀಳದೆ, ಪ್ರಾಯೋಗಿಕವಾಗಿ ಯೋಚಿಸುವ ಮೂಲಕ ಇತರ ರಾಷ್ಟ್ರಗಳು ಸಾಕಷ್ಟು ಮುಂದೆ ಸಾಗಿವೆ. 2001​ರಲ್ಲಿ ಚೀನಾ ಪ್ರಾಥಮಿಕ, ಮಾಧ್ಯಮಿಕ ಶಾಲೆ​ಗಳಲ್ಲಿ ಇಂಗ್ಲಿಷ್‌ ಕಲಿಕೆ ಕಡ್ಡಾಯ​ಗೊಳಿ​ಸಿ​ತು. ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗೆ(ಎನ್‌ಎಚ್‌ಇಇಇ) ಇತರ ವಿಷಯಗಳೊಂದಿಗೆ ಇಂಗ್ಲಿಷನ್ನೂ ಕಡ್ಡಾಯ​ಗೊ​ಳಿ​ಸಲಾಯಿತು. ಪರಿಣಾಮವಾಗಿ ಇಂದು, ವಿದೇಶಿ ಭಾಷೆ ಅಧ್ಯಯನ ನಡೆಸುವ ಆಸಕ್ತ ವಿದ್ಯಾರ್ಥಿ​ಗಳ ಪೈಕಿ ಶೇ.94 ಮಂದಿ ಇಂಗ್ಲಿಷ್‌ ಅಧ್ಯಯನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಜಾಗತಿಕ ನಾಯಕತ್ವದತ್ತ ದಾಪುಗಾಲು ಇಡುತ್ತಿರುವ ಚೀನಾದ ಇತ್ತೀಚಿನ ಯಶಸ್ಸಿನ ಹಿಂದೆ ಈ ಅಂಶವೂ ಪ್ರಧಾನವಾಗಿದೆ.

ಇಂಡೋನೇಷ್ಯಾದ ಉದಾಹರಣೆಯಂತೂ ಇನ್ನಷ್ಟುಸ್ಫೂರ್ತಿದಾಯಕ. 17,500 ಪುಟ್ಟಪುಟ್ಟದ್ವೀಪ​​ಗಳನ್ನೊಳಗೊಂಡ ಆ ದೇಶದಲ್ಲಿ ಅಧಿಕ ಬಳಕೆಯ 260 ಭಾಷೆಗಳು, ಅಳಿವಿನಂಚಿನಲ್ಲಿರುವ 350 ಭಾಷೆಗಳೂ ಇವೆ. ಇಂಡೋನೇಷ್ಯಾದ ಶೇ.45 ಮಂದಿ ಜಾವನ್ನರು. ಆದರೂ, ಆ ದೇಶದ ಸ್ವಾತಂತ್ರ್ಯ ಹೋರಾಟಗಾರರು (ಬಹು ಸಂಖ್ಯಾತ ಜಾವನ್ನ​ರಾಗಿ​ದ್ದ​ರೂ) ಸ್ವತಂತ್ರ ಇಂಡೋನೇಷ್ಯಾ​​ದಲ್ಲಿ ಜಾವನ್ನರು ಮತ್ತು ಅವರ ಭಾಷೆಗೆ ಅಗತ್ಯಕ್ಕಿಂತ ಹೆಚ್ಚಿನ ಆದ್ಯತೆ ಇರ​ಬಾರದು ಎಂದು ಭಾವಿಸಿ, ಮಲಯ-​ಜಾವಾ ಸಮ್ಮಿಶ್ರ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸಿ, ಅದಕ್ಕೆ ಬಹಸ ಇಂಡೋನೇಷ್ಯಾ ಎಂದು ಹೆಸ​ರಿಟ್ಟು, ರೋಮನ್‌(ಲ್ಯಾಟಿನ್‌) ಲಿಪಿಯನ್ನು ಆಯ್ಕೆ​​ಮಾಡಿಕೊಂಡರು. ಅದು ನಿಜವಾದ ಮತ್ತು ಸರಿಯಾದ ಅರ್ಥದ ದೇಶಪ್ರೇಮ.

ಇಂತಹ ಸ್ವಸ್ಥ ಮತ್ತು ದೂರದೃಷ್ಟಿಯ ಭಾಷಾ ನೀತಿಯ ಕನಸು ಕಂಡ ಏಕೈಕ ಭಾರತೀಯ ನಾಯಕ ಎಂದರೆ ಅದು ಸುಭಾಶ್ಚಂದ್ರ ಬೋಸ್‌. 1938ರ ಹರಿಪುರ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷರಾಗಿ ಬೋಸ್‌, ಹಿಂದೂಸ್ತಾನಿ ಭಾಷೆಗೆ ರೋಮನ್‌ ಲಿಪಿ ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಮಾಡಿದ್ದರು. ಆದರೆ, ಕಾಂಗ್ರೆಸ್‌ ಅವರ ಸಲಹೆಯನ್ನು ನಿರ್ಲಕ್ಷಿಸಿತು. ಬಳಿಕ ಮಹಾತ್ಮ ಗಾಂಧಿ​ಯವರು, ದೇವನಾಗರಿ ಲಿಪಿ​ಯೊಂದಿಗೆ ಹಿಂದಿ​​ಯ​ನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡ​ಬೇಕು ಎಂಬ ಪ್ರಸ್ತಾ​ವನೆ ಮಂಡಿಸಿದರು. ಆದರೆ, ದೇಶವನ್ನು ಒಗ್ಗೂಡಿ​ಸುವ ಬದಲು ಹಿಂದಿ, ಒಡೆ​​ಯುವ ಕೆಲಸ​ವನ್ನೇ ಮಾಡುತ್ತಿದೆ ಎಂಬುದು ಸಾಬೀತಾ​ಗಿದೆ. ಏಕೆಂದರೆ, ಬೋಸರ ವಿವೇಕ​ವ​ನ್ನಾ​ಗಲೀ, ಜಾವನ್ನರ ದೂರದೃಷ್ಟಿ​ಯನ್ನಾಗಲೀ ಹೊಂದದೆ ಹಿಂದಿಯನ್ನು ಪ್ರಚುರಪಡಿಸಲಾಗುತ್ತಿದೆ. ಜತೆಗೆ, ಅದರ ಪ್ರವರ್ತಕರು ದೇಶಪ್ರೇಮದ ಕುರಿತು ಮೆಳ್ಳಗಣ್ಣಿನ ದೃಷ್ಟಿಹೊಂದಿದ್ದಾರೆ. ನಾವು ಅಂತಹ ಅಂಧ ದೇಶಪ್ರೇಮಕ್ಕೆ ಬೆಲೆ ತೆರುತ್ತಲೇ ಇದ್ದೇವೆ!

Follow Us:
Download App:
  • android
  • ios