Asianet Suvarna News Asianet Suvarna News

ಸ್ವಾತಂತ್ರ್ಯ ಯೋಧರ ನಡುವೆ ಟಿಪ್ಪುಗೆ ಸ್ಥಾನ

ಭಾರತದ ಸಂವಿಧಾನದ ಮೂಲಪ್ರತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ವಿವರವಿರುವ ೧೪೪ನೇ ಪುಟದಲ್ಲಿ ಟಿಪ್ಪು  ಸುಲ್ತಾನ್ ಹಾಗೂ ರಾಣಿ ಲಕ್ಷ್ಮೀಬಾಯಿ ರೇಖಾಚಿತ್ರಗಳು ಇವೆ. ಕೊನೆಯಲ್ಲಿ ರಾಜೇಂದ್ರ ಪ್ರಸಾದ್, ನೆಹರು, ಪಟೇಲ್ ಅವರಲ್ಲದೆ ಸಂಘಪರಿವಾರದ ಸಾಕ್ಷಿಪ್ರಜ್ಞೆ ಎನಿಸಿಕೊಂಡಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ಅವರೂ ಸಹಿ ಹಾಕಿದ್ದಾರೆ.

Mukanayaka Column 12 November 2016

ಟಿಪ್ಪು ಜನ್ಮದಿನೋತ್ಸವದ ಕೆಟ್ಟ ರಾಜಕಾರಣ ಮುಗಿದಿದೆ. ಈಗಷ್ಟೇ ಟಿಪ್ಪುವಿನ ಬಗ್ಗೆ ಒಂದಷ್ಟು ಒಳನೋಟಗಳನ್ನು ಕಂಡುಕೊಳ್ಳಬಹುದು, ಪೂರ್ವಗ್ರಹಗಳನ್ನು ಬಿಟ್ಟು ತಣ್ಣಗೆ ಧ್ಯಾನಿಸಬಹುದು ಅನಿಸುತ್ತಿದೆ. ಈಚೆಗೆ ಬುದ್ಧಪ್ರಕಾಶ ಎಂಬ ಬೌದ್ಧಭಿಕ್ಷುವೊಬ್ಬರು ಮದರಾಸಿನ ಕ್ಯಾನ್‌ಬೆರಾ ಗ್ರಂಥಾಲಯದಿಂದ ಭಾರತ ಸಂವಿಧಾನದ ಮೂಲಪ್ರತಿಯೊಂದರ ನಕಲನ್ನು ತಂದುಕೊಟ್ಟರು. ಇದರ ಮೇಲೆ ೧೯೫೬ ಡಿಸೆಂಬರ್ ೨೩ರ ಗ್ರಂಥಾಲಯದ ಸೀಲ್ ಹಾಕಲಾಗಿದೆ. ಈ ಪ್ರತಿಯ ಪುಟಪುಟವನ್ನೂ ನೋಡತೊಡಗಿದೆ. ಭಾರತದ ಇತಿಹಾಸಕ್ಕೆ ಸಂಬಂಧಿಸಿದ, ಭಾರತ ಇತಿಹಾಸದ ಪ್ರಮುಖ ಘಟ್ಟಗಳ ಕೇವಲ ೨೨ ಅಪರೂಪದ ರೇಖಾಚಿತ್ರಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ. ಇದರಲ್ಲಿ ಮಹೇಂಜದಾರೋ ಕಾಲಘಟ್ಟದಿಂದ ಮೌರ್ಯ, ಗುಪ್ತರ ಕಾಲಘಟ್ಟಗಳವರೆಗೆ ಮುಂದುವರಿಸಿ ೧೪೪ನೇ ಪುಟದಲ್ಲಿ Rise Against The British Conquest ಅಡಿಯಲ್ಲಿ ಟಿಪ್ಪು ಸುಲ್ತಾನ್ ಹಾಗೂ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ರೇಖಾಚಿತ್ರಗಳನ್ನು ಮಾತ್ರ ನೀಡಲಾಗಿದೆ.

ಇಲ್ಲಿ ನೀಡಿರುವ ಟಿಪ್ಪು ಸುಲ್ತಾನ್‌ರ ಸುಂದರ ರೇಖಾಚಿತ್ರ ಇದೇ ಭಾರತ ಸಂವಿಧಾನ ಪ್ರತಿಯಿಂದ ತೆಗೆದದ್ದು! ಈ ಚಿತ್ರಗಳನ್ನು ರಚಿಸಿದವರು ಶಾಂತಿನಿಕೇತನದ ಕಲಾವಿದರಾದ ನಂದಲಾಲ್ ಬೋಸ್ ಮತ್ತವರ ಸಂಗಡಿಗರು. ಭಾರತ ಸಂವಿಧಾನದ ಈ ಪ್ರತಿಯ ಕಡೆಯ ಭಾಗದಲ್ಲಿ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಪ್ರಧಾನಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಾ ಭಾಯ್ ಪಟೇಲ್ ಅವರಿಂದ ಹಿಡಿದು ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್, ಸಂವಿಧಾನ ರಚನಾ ಸಮಿತಿ ಸದಸ್ಯರೂ, ಆಗಿನ ಲೋಕಸಭಾ ಸದಸ್ಯರಾದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬಿ ಎನ್ ರಾವ್‌ರೊಂದಿಗೆ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಸಿದ್ದಲಿಂಗಯ್ಯ ಅಲ್ಲದೆ ಸಂಘಪರಿವಾರದ ಸಾಕ್ಷಿಪ್ರಜ್ಞೆ ಎನಿಸಿಕೊಂಡ ಜನಸಂಘದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯಂಥವರೂ ಸಹಿ ಹಾಕಿದ್ದಾರೆ.


ಕರ್ನಾಟಕಕ್ಕೆ ಸೀಮಿತವಾದ ವ್ಯಕ್ತಿ ಮತ್ತು ವ್ಯಕ್ತಿತ್ವವಲ್ಲ, ಇಡೀ ದೇಶವೇ ಗುರುತಿಸಿದ ದೇಶಪ್ರೇಮಿ, ರಾಷ್ಟ್ರೀಯವಾದಿ ಎನ್ನುವುದು ಸಾಬೀತಾಗುತ್ತದೆ. ಇಲ್ಲಿಂದ ಆಚೆ ಗಾಂಧೀಜಿ, ನೆಹರು ಅಂಥವರೂ ಟಿಪ್ಪುವನ್ನು ರಾಷ್ಟ್ರೀಯವಾದಿ ಎಂದು ಗುರುತಿಸಿದ ದಾಖಲೆ–ಗಳಿವೆ. ಆದರೆ ನಂತರದಲ್ಲಿ ದೇಶ ಕಂಡ ಮತೀಯ ರಾಜಕಾರಣದ ಹಿನ್ನೆಲೆಯಲ್ಲಿ ಟಿಪ್ಪುರನ್ನು ಮತೀಯವಾದಿ, ಹಿಂದೂ ವಿರೋಧಿ, ಕ್ರೂರಿ ಮುಂತಾಗಿ ಗುರುತಿಸುವ ಪ್ರಕ್ರಿಯೆಗಳು ಆರಂಭವಾದವು. ಅನೇಕ ಮೆಳ್ಳುಗಣ್ಣು ಇತಿಹಾಸಕಾರರು ಅವರ ಕಣ್ಣಿನಳತೆಗೆ ದಾಖಲಿಸತೊಡಗಿದರು. ಅನೇಕರು ಇದನ್ನೇ ಸತ್ಯವೆಂದುಕೊಂಡರು! ಈ ಪೂರ್ವಗ್ರಹಗಳು ಇಂದು ಕೇವಲ ಮತೀಯವಾದಿಗಳಲ್ಲಿ ಮಾತ್ರವಲ್ಲ, ಮುಗ್ಧ ಜನಸಾಮಾನ್ಯರಲ್ಲೂ ಬೆಳೆದು ಹೆಮ್ಮರಗಳಾಗಿವೆ! ಈಚೆಗೆ ಟಿಪ್ಪು ಜನ್ಮದಿನಾಚರಣೆಗೆ ಸಂಬಂಧಿಸಿದ ಒಂದು ಪ್ರಕರಣ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಬಂದಾಗ, ವಾದಕ್ಕೆ ಮುಂಚೆಯೇ ನ್ಯಾಯಮೂರ್ತಿಗಳು ಟಿಪ್ಪು ಬಗ್ಗೆ ನೆಗೆಟಿವ್ ಆಗಿ ಮಾತನಾಡತೊಡಗಿದರು! ಇದನ್ನು ಕಾನೂನಿನ ಭಾಷೆಯಲ್ಲಿ obitor dicta (a judge's expression of opinion uttered in court or in a written judgement, but not essential to the decision and therefore not legally binding as a precedent) ಎನ್ನುತ್ತಾರೆ. ಸದರಿ ನ್ಯಾಯಮೂರ್ತಿಗಳು ಹಿಂದೆ ಸಾರ್ವಜನಿಕವಾಗಿ ತಮ್ಮ ಜಾತಿಯ ಮಠಾಧಿಪತಿಯೊಬ್ಬರ ಕಾಲಿಗೆ ಬಿದ್ದದ್ದು, ಮತ್ತೊಬ್ಬ ಮಠಾಧಿಪತಿಯಿಂದ ಪ್ರಶಸ್ತಿ ಸ್ವೀಕರಿಸಿ ಒಂದು ಧರ್ಮದವರ ಪರವಹಿಸಿ ಮಾತನಾಡಿದ್ದು ಇನ್ನೂ ವಿವಾದಗಳಲ್ಲಿದ್ದರೂ ಆದಷ್ಟೂ ಬೇಗ ರಾಮಮಂದಿರ ಕಟ್ಟಿಸಬೇಕೆಂದು ಸಾರ್ವಜನಿಕವಾಗಿ ವಿಶ್ವಹಿಂದೂ ಪರಿಷತ್ತಿನ ಪ್ರಮುಖರೂ ಆದ ಶ್ರೀಗಳಿಗೆ ಒತ್ತಾಯಿಸಿ ಮನವರಿಕೆ ಮಾಡಿದ್ದು ದಿನಪತ್ರಿಕೆಗಳಲ್ಲಿ ಸುದ್ದಿಯಾಯಿತು. ದುರಂತವೆಂದರೆ, ಸಂವಿಧಾನದ ಮೂಲತತ್ವ ಜಾತ್ಯತೀತತೆ ಎತ್ತಿಹಿಡಿಯಬೇಕಾದವರೇ ಸಾರ್ವಜನಿಕವಾಗಿ ಜಾತಿವಂತರಂತೆ ಕಂಡುಬಿಟ್ಟರೆ ನ್ಯಾಯಾಂಗದ ಮೇಲಿನ ನಂಬಿಕೆಯನ್ನೇ ಜನರು ಕಳೆದುಕೊಳ್ಳಬಹುದು. ಎರಡೂ ಕಡೆಯ ಇತಿಹಾಸಕಾರರು ಹೇಳುವಂತೆ ಟಿಪ್ಪುವನ್ನು ‘ಹೀರೋ’ ಎಂದು ವೈಭವೀಕರಿಸುವುದೂ ಬೇಡ ಅಥವಾ ‘ವಿಲನ್’ ಎಂದು ತೆಗಳುವುದೂ ಬೇಡ. ಜನಸಾಮಾನ್ಯರಂತೆ ಪೂರ್ವಗ್ರಹಗಳಿಲ್ಲದೆ ನೋಡೋಣ.


ಮೈಸೂರಿನ ಕಲಾಮಂದಿರದಲ್ಲಿ ಏರುಧ್ವನಿಯಲ್ಲಿ ಹಾಡುತ್ತಿದ್ದ ಲಾವಣಿ ಕೇಳಿಸಿಕೊಳ್ಳುತ್ತಿದ್ದೆ. ‘‘ಟಿಪ್ಪು ಹುಟ್ಟಿದ ನೆಲಕ್ಕೆ ವಂದನೆ...’’ ಎಂದಾರಂಭಾವಾದ ಲಾವಣಿ ಕಡೆಗೆ ‘‘ಟಿಪ್ಪು ತೊಟ್ಟ ಕೆರದ ಕೆಳಗಿನ ಅರಿವಿಗೆ ವಂದನೆ...’’ ಎಂದು ಮುಂದುವರಿಯುತ್ತೆ! ಇದರ ಅರ್ಥವೇನು? ನಮ್ಮ ಜನಪದರು ಕ್ರೂರಿ, ಮತಾಂಧನನ್ನು ವೈಭವೀಕರಿಸಿಕೊಂಡು ಎದೆಯಾಳದಿಂದ ಹಾಡುತ್ತಾರೇಕೆ? ಇವರ್ಯಾರೂ ಆಸ್ಥಾನ ಕವಿಗಳಲ್ಲ, ಇತಿಹಾಸಕಾರರೂ ಅಲ್ಲ, ಕನಿಷ್ಠ ಅಕ್ಷರಸ್ಥರೂ ಅಲ್ಲ, ಹಣಕ್ಕಾಗಿ ಹೊಗಳುವ ಹೊಗಳುಭಟ್ಟರೂ ಅಲ್ಲ, ವಂದಿಮಾಗದರೂ ಅಲ್ಲ. ಲಾವಣಿ ಎನ್ನುವುದು ಜನಪದರ ಎದೆಯ ಹಾಡು, ಇದನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶಃ ಟಿಪ್ಪು ಮೇಲೆ ಕಟ್ಟಿರುವಷ್ಟು ಲಾವಣಿಗಳನ್ನು ಇನ್ಯಾವ ರಾಜ, ಜನನಾಯಕನ ಮೇಲೂ ಕಟ್ಟಿದ ದಾಖಲೆಗಳಿಲ್ಲ.


ಹೈದರಾಲಿ ಹುಟ್ಟಿದ ಬೂದಿಕೋಟೆ ಇರುವ ಕೋಲಾರ ಜಿಲ್ಲೆಯಿಂದ ಬಂದ ನಮ್ಮಂಥವರು ಕೆಲವು ವಾಸ್ತವಗಳನ್ನು ಹತ್ತಿರದಿಂದ ನೋಡಿದ್ದೇವೆ. ನೀರೇ ಇಲ್ಲದ ಜಿಲ್ಲೆಯಲ್ಲಿ ಬೆಳೆಸಿದ ಟೊಮೇಟೊ, ಆಲೂಗಡ್ಡೆ, ಮಾವು ಬೆಲೆ ಸಿಗದೆ ತಿಪ್ಪೆಗೆ ಎಸೆಯುವ ರೈತರಿಗೆ ವರದಾನ ರೇಷ್ಮೆ. ಈ ರೇಷ್ಮೆಯಿಂದ ಅಸಂಖ್ಯಾತ ರೈತರಲ್ಲದೆ ಸಣ್ಣಪುಟ್ಟ ವ್ಯಾಪಾರಿ, ಗೂಡಂಗಡಿಗಳವರೂ, ರೀಲರ್‌ಗಳೂ ಬದುಕುತ್ತಿದ್ದಾರೆ. ಈ ರೇಷ್ಮೆಯನ್ನು ಈ ನೆಲಕ್ಕೆ ತಂದವರೇ ಟಿಪ್ಪು. ಅಂದು ಟಿಪ್ಪು ನೀಡಿದ ಲಗಳನ್ನು ನಮ್ಮ ಜನ ಇಂದಿಗೂ ಉಣ್ಣುತ್ತಿದ್ದಾರೆ. ಆದ್ದರಿಂದಲೇ ಟಿಪ್ಪುವನ್ನು Visionary ಎಂದು ಕರೆಯುವುದು. ಇದನ್ನು ನಂತರದಲ್ಲಿ ಮುಂದುವರಿಸಿದವರೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸು. ಆದರೆ, ಇಂದು ಟಿಪ್ಪುವನ್ನು ಓಟಿಗಾಗಿ ಬಳಸಿಕೊಳ್ಳುತ್ತಿರುವವರೇ ಟಿಪ್ಪು ತಂದ ರೇಷ್ಮೆಯನ್ನು ಹೊಡೆದೋಡಿಸಿ ಚೀನಾ ರೇಷ್ಮೆಗೆ ಕೆಂಪು ಕಾರ್ಪೆಟ್ ಹಾಕಿದ್ದಾರೆ. 


ನಾವು ವಿದೇಶಿ, ಸ್ವದೇಶಿ ಇತಿಹಾಸಕಾರರ ಪುಸ್ತಕಗಳನ್ನು ಪಕ್ಕಕ್ಕಿಟ್ಟು, ಮೈಸೂರಿನವರೇ ಆದ, ಜನಸಂಗ್ರಾಮದಲ್ಲಿ ಪಾಲ್ಗೊಂಡು ಊಳಿಗಮಾನ್ಯ ವ್ಯವಸ್ಥೆಯ, ಬಂಡವಾಳಶಾಹಿ ಪ್ರಭುತ್ವದ ಕ್ರೌರ್ಯಕ್ಕೆ ಬಲಿಯಾದ ‘‘ಸಾಕಿ’’ಯವರ Making History ಯ ಪುಟಗಳಿಗೆ ಹೋಗೋಣ.


ಟಿಪ್ಪು ಯುದ್ಧ ಭೂಮಿಯಲ್ಲಿ ಪ್ರಾಣ ತೆತ್ತ ಮೊದಲ ಭಾರತೀಯ ರಾಜ. ಈತ ಕಾಲವಾಗಿ ಈಗಾಗಲೇ ಸುಮಾರು ಇನ್ನೂರು ವರ್ಷ ಮುಗಿದಿದೆ. ಭೂ ಒಡೆತನವನ್ನಿಟ್ಟುಕೊಂಡು ರೈತಾಪಿ ಜನರ ಬದುಕುಗಳಿಗೆ ಕಂಟಕರಾಗಿದ್ದ ಹಾಗೂ ಬ್ರಿಟಿಷರೊಂದಿಗೆ ಶಾಮೀಲಾಗಿದ್ದ ಸುಮಾರು ಇನ್ನೂರು ಮಂದಿ ಪಾಳೇಗಾರರನ್ನು ಅವರ ಜಾತಿಮತಗಳ ಹಿನ್ನೆಲೆ ನೋಡದೆ ಸದೆಬಡಿದಿದ್ದು ನಿಜ. ಅಂತೆಯೇ ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು ಮತ್ತು ವಿಸ್ತರಿಸಲು ಸುಮಾರು ೩೮ ವರ್ಷಗಳ ಕಾಲ ಟಿಪ್ಪು ಮತ್ತು ಹೈದರ್ ಯುದ್ಧಗಳನ್ನು, ದಂಗೆಗಳನ್ನು ನಡೆಸಿದ್ದು ಕೂಡ ನಿಜ. ಈ ಕಾಲಘಟ್ಟದಲ್ಲಿ ಸಾವು ನೋವುಗಳಾಗಿದ್ದು, ಮತಾಂತರಗಳಾಗಿದ್ದು ಅಂತೆಯೇ ಹಿಂದೂ ದೇವಾಲಯ–ಗಳನ್ನು ಉಳಿಸಿದ್ದು, ಸಲಹಿದ್ದು ಪರಧರ್ಮ ಸಹಿಷ್ಣುತೆಗಳ ಘಟನಾವಳಿಗಳು ನಡೆದದ್ದು ಎಲ್ಲವೂ ನಿಜ. ಇದೆಲ್ಲವನ್ನೂ ಗ್ರಹಿಸಿದವರು ಅವರವರ ಭಾವಕ್ಕೆ ತಕ್ಕಂತೆ ಟಿಪ್ಪುವನ್ನು ಹೀರೋ ಅಥವಾ ವಿಲನ್ ಎಂದು ನಿಧರ್ರಿಸಿಕೊಳ್ಳುತ್ತಾರೆ.


ಎಂದೂ ಭೂಮಿಯನ್ನು ಉತ್ತದ, ಬಿತ್ತದ ಶಾನುಭೋಗ, ಪಟೇಲರ ಬಳಿ ಇದ್ದ ಅಪಾರ ಎಕರೆಗಳಷ್ಟು ಭೂಮಿಯನ್ನು ಬಡ ರೈತಾಪಿಗೆ ಕೊಡಿಸಿ ಉಳುವವನೇ ಭೂಒಡೆಯ ಎಂಬ ಚಿಂತನೆ ಆರಂಭವಾದದ್ದೇ ಟಿಪ್ಪುವಿನಿಂದ ಎನ್ನಲು ನಿದರ್ಶನಗಳಿವೆ. ಇದರೊಂದಿಗೆ ೨೪ ಸಾವಿರ ನಾಲೆಗಳನ್ನು, ೧೬ ಸಾವಿರ ಬಾವಿಗಳನ್ನು ಕಟ್ಟ್ಪಿ, ಮೈಸೂರು ರಾಜ್ಯವನ್ನು ನೀರಾವರಿಯಾಗಿಸಿದ್ದು, ಮಲ್ಬರಿ, ಕಬ್ಬು, ಭತ್ತದ ಹೊಸ ತಳಿಗಳನ್ನು ತಂದಿದ್ದು ಟಿಪ್ಪು, ತನ್ನ ರಾಜ್ಯವನ್ನು ವಾಣಿಜ್ಯೀಕರಣಗೊಳಿಸಿ Marchandize Capital ಮಾಡಿ ರೆವಿನ್ಯೂ ರೆಗ್ಯುಲೇಶನ್‌ನೊಂದಿಗೆ ಕಮರ್ಷಿಯಲ್ ರೆಗ್ಯುಲೇಶನ್ ಕೂಡ ತಂದದ್ದಲ್ಲದೆ, ಹೊರದೇಶದಲ್ಲಿ ಅಂದರೆ ಮಸ್ಕತ್, ಕರಾಚಿ ಹಾಗೂ ಬಲೂಚಿಸ್ತಾನದವರೆಗೂ ನಾಡಿನ ವ್ಯಾಪಾರ ವಹಿವಾಟನ್ನು ವಿಸ್ತರಿಸಿದರು.


ತನ್ನ ಪುಸ್ತಕ ಭಂಡಾರದಲ್ಲಿದ್ದ ಗಣಿತ, ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಆರೋಗ್ಯ ಶಾಸ್ತ್ರದೊಂದಿಗೆ ಜ್ಞಾನ ಭಂಡಾರವನ್ನೇ ಹೊಂದಿದ್ದ ಟಿಪ್ಪು ಸ್ವತಃ ಕವಿ, ಪತ್ರಬರೆಯುವ ಹವ್ಯಾಸವುಳ್ಳ ಕನಸುಗಾರ. ಅಂತೆಯೇ ಆತನಲ್ಲಿ ಒಬ್ಬ ಸಂಶೋಧಕ, ಒಬ್ಬ ಇತಿಹಾಸಕಾರ, ಒಬ್ಬ ವೈದ್ಯ, ಒಬ್ಬ ಜನನಾಯಕ, ಒಬ್ಬ ಸೇನಾನಿ ಇದ್ದ.  ಅಷ್ಟೇ ಅಲ್ಲ ಪ್ರೆಂಚ್ ರೆವಲ್ಯೂಷನ್ ಹಾಗೂ ಅಮೆರಿಕನ್ ವಾರ್ ಆಫ್ ಪ್ರೀಡಂನಲ್ಲೂ ಟಿಪ್ಪು ಸಹಕಾರವಿದೆಯೆಂದು ಇತಿಹಾಸಕಾರರು ಗುರುತಿಸುತ್ತಾರೆ.
ನಮ್ಮಂಥವರನ್ನು ಕಾಡುವುದು ಟಿಪ್ಪು ಹಿಡಿದ ಕತ್ತಿ ಬಿಡದೆ ಯುದ್ಧ ಭೂಮಿಯಲ್ಲಿ ಪ್ರಾಣಬಿಟ್ಟಿದ್ದು, ಅಧಿಕಾರದ ಸಂಕೇತ ಕತ್ತಿಯನ್ನು ಕಡೆಗೂ ಟಿಪ್ಪು ಬಿಟ್ಟು ಕೊಡಲೇ ಇಲ್ಲ. ಇದೇ ರೀತಿ ಬಾಬಾ ಸಾಹೇಬರು ತಮ್ಮ ಸಾವು ಹತ್ತಿರ ಬಂದಾಗ ನೀಡಿದ ಕಡೆಯ ಸಂದೇಶ ತನ್ನ ಜನ ಅಧಿಕಾರ ಹಿಡಿಯುವುದನ್ನು ನೋಡಬೇಕು ಎಂದು ಹಂಬಲಿಸಿದ್ದು. ಇವರಿಬ್ಬರು ಆಲೋಚನೆಗಳಲ್ಲಿ ಎಷ್ಟು ಹತ್ತಿರವಾಗಿದ್ದರೆಂಬುದಕ್ಕೆ ಇದು ಸಾಕ್ಷಿ.


 ಮತ್ತೊಂದು ಹೃದಯ ತಟ್ಟುವ ಘಟನೆ, ಟಿಪ್ಪು ಸತ್ತಾಗ ಕಣ್ಣು ಮುಚ್ಚಿರಲಿಲ್ಲ ಎನ್ನುವುದು! ಸಾವಿನಲ್ಲೂ ಕಣ್ಣು ತೆರೆದಿರುವುದು ಎಚ್ಚರದ ಸಂಕೇತವೆನ್ನುತ್ತಾರೆ. ಟಿಪ್ಪುವಿನಂತೆಯೇ ಮಾನ್ಯ ಹಾಗೂ ಬಂಡವಾಳಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಚೆಗುವಾರ ಕೂಡ ನೆನಪಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಪ್ಪು ಮತ್ತು ಚೆ ಎಷ್ಟು ಹತ್ತಿರವಾಗುತ್ತಾರಲ್ಲವೆ?


 ಈ ಕಾರಣಗಳಿಂದಲೇ ಇರಬೇಕು ಟಿಪ್ಪು ಭಾರತದ ಸಂವಿಧಾನದಲ್ಲಿ ಸ್ಥಾನ ಪಡೆದದ್ದು.