Asianet Suvarna News Asianet Suvarna News

ಕೊನೆಗೂ ನಾವೀಗ ಸರಿ ದಾರಿಯಲ್ಲಿ ಹೊರಟಿದ್ದೇವೆ

ದೇಶದ ಆರ್ಥಿಕತೆಯಲ್ಲಿ ದೃಢ ಹಾಗೂ ಸಮರ್ಥನೀಯ ಬದಲಾವಣೆ ತಂದ ನರೇಂದ್ರ ಮೋದಿ ಆಡಳಿತದ ಮೂರು ವರ್ಷ

MP Rajeev Chandrasekhar Column

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಊಹೆಗೂ ನಿಲುಕದಷ್ಟುಸಮಸ್ಯೆಗಳು ದೇಶದಲ್ಲಿದ್ದವು. ಪ್ರಪಾತಕ್ಕೆ ಬಿದ್ದ ಆರ್ಥಿಕತೆ, ಹೆಚ್ಚಾದ ಹಣದುಬ್ಬರ, ಇಷ್ಟುಸಾಲದು ಎಂಬಂತೆ ಕಲ್ಲಿದ್ದಲು, ಟೆಲಿಕಾಂ, 2ಜಿ ಹೀಗೆ ಸಾಲು ಸಾಲು ಹಗರಣಗಳಿಂದ ದೇಶದ ಸ್ಥಿತಿ ಅಯೋಮಯವಾಗಿತ್ತು. ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದ ಹಿಂದಿನ ಸರ್ಕಾರ ಹಣದ ಕೊರತೆಯಿಂದಾಗಿ ದೇಶದ ಅಭಿವೃದ್ಧಿಗೂ ಹಣ ಹೂಡಲಾಗದ ಸ್ಥಿತಿಗೆ ತಲುಪಿತ್ತು.

2017ರ ನಂತರದಲ್ಲಿ ದೇಶ ಈ ಎಲ್ಲ ಸಂದಿಗ್ಧತೆಗಳಿಂದ ಹೊರಬಂದು ಆರ್ಥಿಕ ಬೆಳವಣಿಗೆಯಲ್ಲಿ ಸ್ಥಿರವಾಗಿ ಶೇ.7+ ಪ್ರಗತಿ ಸಾಧಿಸಿದೆ. ಜತೆಗೆ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ. ಕಳೆದ ಮೂರು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ ದಾಖಲೆಯ 150 ಬಿಲಿಯಲ್‌ ಡಾಲರ್‌ (ಸುಮಾರು 10 ಲಕ್ಷ ಕೋಟಿ)ಗೆ ತಲುಪಿದೆ. ಅದರಿಂದಾಗಿ ದೇಶದ ಹಣದ ಕೊರತೆ ತಗ್ಗಿದೆ. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಭ್ರಷ್ಟಸರ್ಕಾರವಿದ್ದ ಸ್ಥಳದಲ್ಲಿ ಭ್ರಷ್ಟಾಚಾರಮುಕ್ತ, ನಿಸ್ವಾರ್ಥ ಹಾಗೂ ಕಠಿಣ ಪರಿಶ್ರಮದ ಸರ್ಕಾರ ಆಡಳಿತ ನಡೆಸುತ್ತಿದೆ.

ಆಡಳಿತದ ಬಗ್ಗೆ ಏನೇ ಟೀಕೆ, ಆರೋಪಗಳು ಕೇಳಿಬಂದರೂ ಹಳಿ ತಪ್ಪಿದ್ದ ದೇಶದ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಹಾಗೂ ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಹಣದ ದುರುಪಯೋಗ ತಡೆಗಟ್ಟಲು ಸರ್ಕಾರ ದೃಢ ನಿರ್ಧಾರಗಳನ್ನು ಕೈಗೊಂಡಿದೆ. ಜಿಎಸ್‌ಟಿ ಮಸೂದೆ ಜಾರಿ, ಕಪ್ಪು ಹಣ ನಿಯಂತ್ರಣ ಮತ್ತು ಡಿಜಿಟಲ್‌ ವ್ಯವಹಾರಕ್ಕೆ ಒತ್ತು ನೀಡುವ ಸಲುವಾಗಿ ಕೈಗೊಂಡ ನೋಟು ಅಮಾನ್ಯೀಕರಣ, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಂದ ಗ್ರಾಹಕರಿಗೆ ಆಗುತ್ತಿದ್ದ ಮೋಸ, ದಬ್ಬಾಳಿಕೆ ತಡೆಗಟ್ಟಲು ಜಾರಿಗೆ ತಂದ ರಿಯಲ್‌ ಎಸ್ಟೇಟ್‌ ಮಸೂದೆ, ದಿವಾಳಿ ಮಸೂದೆ ಹಾಗೂ ಬ್ಯಾಂಕುಗಳ ಸುಸ್ತಿಸಾಲದ ಸಮಸ್ಯೆ ಬಗೆಹರಿಸಲು ಎಸ್‌ಎಆರ್‌ಎಫ್‌ಎಇಎಸ್‌ಇಐ ಕಾಯ್ದೆಗೆ ತಂದ ತಿದ್ದುಪಡಿ ಇವು ಎನ್‌ಡಿಎ ಸರ್ಕಾರದ ಮೂರು ವರ್ಷದ ಸಾಧನೆಗಳು. ಇದರ ಜತೆಗೆ ಕಠಿಣ ಪರಿಶ್ರಮ ಎಂಬ ಹೊಸ ಪದ್ಧತಿಯನ್ನು ಈ ಸರ್ಕಾರ ಅಳವಡಿಸಿಕೊಂಡಿದೆ. ಸಾರ್ವಜನಿಕ ಸೇವೆಗಳು ಈಗಲೂ ಮಂದಗತಿಯಲ್ಲೇ ಇವೆ. ಆದರೆ ಖಂಡಿತವಾಗಿಯೂ ಸರ್ಕಾರ ಅದನ್ನೂ ಬದಲಿಸಲಿದೆ.

ಸಹಜ ಸ್ಥಿತಿಗೆ ಬಂದ ಆರ್ಥಿಕತೆ
ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ ಸತತವಾಗಿ ಗಡಿಯಾರದ ರೀತಿಯಲ್ಲಿ ಶೇ.7ರ ಸ್ಥಿರತೆಯೊಂದಿಗೆ ಬೆಳವಣಿಗೆ ಕಾಣುತ್ತಿದೆ. ಅದರ ಹೊರತಾಗಿ ಹಿಂದಿನ ಯುಪಿಎ ಸರ್ಕಾರದ ಬೃಹತ್‌ ಆರ್ಥಿಕ ಅಸ್ಥಿರತೆಯನ್ನು ಈ ಸರ್ಕಾರ ಅಳಿಸಿಹಾಕಿದೆ. 2017-18ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7.4ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಜಗತ್ತಿನಲ್ಲೇ ಅತಿಹೆಚ್ಚಿನ ದರದ ಬೆಳವಣಿಗೆ. ಅಷ್ಟೇ ಅಲ್ಲದೇ 2016ರ ಜೂನ್‌ನಲ್ಲಿದ್ದ ಶೇ.6ರ ಹಣದುಬ್ಬರ 2016ರ ಡಿಸೆಂಬರ್‌ನಲ್ಲಿ ಶೇ.3.4ಕ್ಕೆ ಇಳಿದಿದೆ. ಸಾರ್ವಜನಿಕ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದ್ದರೂ ವಿತ್ತೀಯ ಕೊರತೆ ಶೇ.3.5ರ ಆರೋಗ್ಯಕರ ಮಿತಿಯಲ್ಲೇ ಇದೆ. ಇದನ್ನು 2017-18ನೇ ಸಾಲಿನಲ್ಲಿ ಶೇ.3.2ಕ್ಕೆ ಇಳಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಎಫ್‌ಆರ್‌ಬಿಎಂ ರಿವ್ಯೂ ಸಮಿತಿ ನಿಗದಿಪಡಿಸಿದ ಶೇ.3ರ ವಿತ್ತೀಯ ಕೊರತೆಗೆ ಇದು ಅತಿ ಸಮೀಪದ ದರ. 2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ವಿತ್ತೀಯ ಕೊರತೆ ಶೇ.5ಕ್ಕೆ ತಲುಪುವ ಮೂಲಕ ಅಪಾಯ ಮಟ್ಟಕ್ಕೇರಿದ್ದಕ್ಕೆ ಈಗಿನ ಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ಅದೇ ರೀತಿ ಚಾಲ್ತಿ ಖಾತೆ ಕೊರತೆ ಕೂಡ ಜಿಡಿಪಿಯ ಶೇ.0.3ರ ಆರೋಗ್ಯಕರ ಮಟ್ಟಕ್ಕೆ ಇಳಿದಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ ದೇಶಕ್ಕೆ ಸುಮಾರು 10 ಲಕ್ಷ ಕೋಟಿ ರು.ಗಳಷ್ಟುವಿದೇಶಿ ನೇರ ಬಂಡವಾಳ ಹರಿದು ಬಂದಿದೆ. ಜಾಗತಿಕವಾಗಿ ಬೇರೆ ಬೇರೆ ದೇಶಗಳಿಗೆ ವಿದೇಶಿ ನೇರ ಬಂಡವಾಳದ ಹರಿವು ಈ ಅವಧಿಯಲ್ಲಿ ಶೇ.5ರಷ್ಟುಕಡಿಮೆಯಾಗಿದ್ದರೂ, ನಮ್ಮ ದೇಶಕ್ಕೆ ವಿದೇಶಿ ಬಂಡವಾಳದ ಹರಿವಿನ ಪ್ರಮಾಣ ಶೇ.36ರಷ್ಟುಹೆಚ್ಚಿದೆ.

ಸರ್ಕಾರದ ಮತ್ತೊಂದು ಸಾಧನೆಯೆಂದರೆ ಆರ್ಥಿಕ ಸುಧಾರಣೆಗೆ ರಚನಾತ್ಮಕ ಯೋಜನೆಗಳನ್ನು ಕೈಗೊಂಡಿದ್ದು. ಈ ಸರ್ಕಾರ ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಬರೀ ಮಾತನಾಡುತ್ತ ಕುಳಿತುಕೊಳ್ಳಲಿಲ್ಲ ಅಥವಾ ಹಿಂದಿನ ಯುಪಿಎ ಸರ್ಕಾರ ಮಾಡಿದಂತೆ ಯಾವತ್ತೂ ಜಾರಿಗೆ ಬರದ ಭಾರೀ ದೂರದೃಷ್ಟಿಯ ಯೋಜನೆಗಳ ಜಪ ಮಾಡುತ್ತ ಕಾಲಹರಣ ಮಾಡಲಿಲ್ಲ. ಉದಾಹರಣೆಗೆ ಜನ-ಧನ್‌ ಯೋಜನೆಯನ್ನು ಜಾರಿಗೆ ತರುವ ಮೂಲಕ ಬ್ಯಾಂಕಿಂಗ್‌ ವ್ಯವಹಾರದಿಂದ ದೂರವೇ ಉಳಿದಿದ್ದ 28 ಕೋಟಿ ಜನರನ್ನು ಬ್ಯಾಂಕಿಂಗ್‌ ವ್ಯವಸ್ಥೆಯಡಿಗೆ ತರಲಾಯಿತು. ಈ ಯೋಜನೆಯನ್ನು ಸರ್ಕಾರ ಎಷ್ಟುಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ ಎಂದರೆ, ಖಾತೆದಾರರ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಖಾತೆಗೆ ಲಿಂಕ್‌ ಮಾಡುವ ಮೂಲಕ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಕೈಗೆ ಸೇರುವಂತಾಗಿದೆ. ಅದರಿಂದಾಗಿ ಈ ಹಿಂದಿನಂತೆ ಹಣ ಸೋರಿಕೆಯಾಗುವುದು ನಿಂತಿದೆ. ಇದರಿಂದ ಸರ್ಕಾರಕ್ಕೆ .36 ಸಾವಿರ ಕೋಟಿ ಉಳಿತಾಯವಾಗಿದೆ.

ಜಿಎಸ್‌ಟಿ ಮತ್ತು ಅಮಾನ್ಯೀಕರಣ
ಜಾರಿಗೆ ಬಹು ದೀರ್ಘ ಸಮಯ ಹಿಡಿದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮಸೂದೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬೃಹತ್‌ ಪರೋಕ್ಷ ತೆರಿಗೆ ಸುಧಾರಣೆಗೆ ಸಹಾಯಕವಾಗಲಿದೆ. ಇದು ನಮ್ಮ ಆರ್ಥಿಕತೆ ಶೇ.1ರಿಂದ 2ರಷ್ಟುಬೆಳೆಯಲು ಪೂರಕವಾಗಲಿದೆ. ಜಿಎಸ್‌ಟಿ ಮಸೂದೆಯು ಗ್ರಾಹಕರಿಗೂ ಹೆಚ್ಚು ಲಾಭ ತರುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೇ ಜಿಎಸ್‌ಟಿಯಿಂದಾಗಿ ದೇಶದ ತೆರಿಗೆ ಜಾಲ ವಿಸ್ತರಣೆಗೊಳ್ಳಲಿದ್ದು, ಇದರಿಂದ ಸರ್ಕಾರದ ಆದಾಯವೂ ಹೆಚ್ಚಾಗಿ, ಸರ್ಕಾರದ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಹಣ ಸಿಗಲಿದೆ. ಅಂತಿಮವಾಗಿ ಈ ಎಲ್ಲ ಅಂಶಗಳು ದೇಶದ ಆರ್ಥಿಕತೆ ಸದೃಢಗೊಳ್ಳಲು ನೆರವಾಗುತ್ತವೆ. ಇದು ಜಗತ್ತಿನ ಸದೃಢ ರಾಷ್ಟ್ರಗಳೊಂದಿಗೆ ಸ್ಪರ್ಧೆ ನೀಡಲು ಭಾರತಕ್ಕೆ ಸಹಾಯಕವಾಗುತ್ತದೆ.

ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಇದ್ದ ಕಪ್ಪು ಹಣ ನಿಯಂತ್ರಣಕ್ಕಾಗಿ ಮೋದಿ ಸರ್ಕಾರ ಕೈಗೊಂಡ .500 ಮತ್ತು 1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ಕ್ರಮ ಸರ್ಕಾರದ ಮುಕ್ತ ಮತ್ತು ದಿಟ್ಟತನಕ್ಕೆ ಸಾಕ್ಷಿ. ಹಾಗೆಯೇ ಇತ್ತೀಚಿನ ಕೆಲ ವರ್ಷಗಳಲ್ಲಿ ಆರ್ಥಿಕ ಸುಧಾರಣೆಗೆ ಇಷ್ಟುದಿಟ್ಟಕ್ರಮ ಕೈಗೊಂಡ ಉದಾಹರಣೆ ಇಲ್ಲ. ನೋಟು ಅಮಾನ್ಯೀಕರಣದಿಂದಾಗಿ 2016-17ನೇ ಸಾಲಿನಲ್ಲಿ 91 ಲಕ್ಷ ಹೊಸ ತೆರಿಗೆದಾರರು ಹುಟ್ಟಿಕೊಂಡರು. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.80ರಷ್ಟುಹೆಚ್ಚು ತೆರಿಗೆ ಸಂಗ್ರಹವಾಗಿದೆ. ಅಷ್ಟೇ ಅಲ್ಲದೇ ಈ ಕ್ರಮ ಜನರನ್ನು ಡಿಜಿಟಲ್‌ ವ್ಯವಹಾರದತ್ತ ಮುಖ ಮಾಡುವಂತೆಯೂ ಮಾಡಿದೆ ಮತ್ತು ಇದು ಪರ್ಯಾಯ ಆರ್ಥಿಕತೆಯನ್ನು ಕೂಡ ಮಟ್ಟಹಾಕುತ್ತಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದಂತೆ ‘ನೋಟು ಅಮಾನ್ಯೀಕರಣದಿಂದ ಜಿಡಿಪಿ ದೊಡ್ಡದಾಗಿ, ಸ್ವಚ್ಛವಾಗಿ ಮತ್ತು ವಾಸ್ತವವಾಗಿ ಬೆಳೆಯುವುದು ಇನ್ನು ಮುಂದಿನ ಹೊಸ ‘ಸಾಮಾನ್ಯ'ವಾಗಲಿದೆ.'

ಇನ್ನೂ ಇವೆ ಸವಾಲುಗಳು
ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಸರ್ಕಾರದ ಮುಂದೆ ಇನ್ನೂ ಹಲವು ಸವಾಲುಗಳಿವೆ. ಹೆಚ್ಚುತ್ತಿರುವ ಸುಸ್ತಿ ಸಾಲಗಳು (ನಾನ್‌ ಪರ್ಫಾರ್ಮಿಂಗ್‌ ಅಸೆಟ್ಸ್‌) ಮತ್ತು ಹೆಪ್ಪುಗಟ್ಟಿದ ಬ್ಯಾಂಕಿಂಗ್‌ ವಲಯದಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಸರಿಯಾದ ಸಾಲ ಸಿಗದಂತಾಗಿದೆ. ಅಲ್ಲದೇ ರಫ್ತಿನ ಪ್ರಮಾಣ ಕುಸಿಯುತ್ತಿರುವುದು ಕೂಡ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಎರಡು ಸಮಸ್ಯೆಗಳನ್ನು ಆದಷ್ಟುಶೀಘ್ರ ಬಗೆಹರಿಸಬೇಕಾದ ಅನಿವಾರ್ಯತೆ ಇದೆ. ಸುಸ್ತಿ ಸಾಲದ ಸಮಸ್ಯೆ ಎಷ್ಟುಗಂಭೀರವಾಗುತ್ತಿದೆ ಎಂಬ ಬಗ್ಗೆ ನಾನು ಮೊದಲ ಬಾರಿಗೆ 2012ರಲ್ಲಿ ಸಂಸತ್ತಿನ ಗಮನಕ್ಕೆ ತಂದಿದ್ದೆ. ನಂತರ 2014ರಲ್ಲೂ ಸರ್ಕಾರವನ್ನು ಎಚ್ಚರಿಸಿದ್ದೆ. ಇಲ್ಲಿಯವರೆಗೆ ಸರ್ಕಾರ ಕೈಗೊಂಡ ಯಾವ ಆರ್ಥಿಕ ಸುಧಾರಣಾ ಕ್ರಮಗಳೂ ಸುಸ್ತಿ ಸಾಲದ ಸಮಸ್ಯೆಯನ್ನು ತಳಮಟ್ಟದಿಂದ ಸರಿಪಡಿಸಲು ಸಮರ್ಥವಾಗಿಲ್ಲ. ಹಿಂದಿನ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ರಾಜಕಾರಣಿಗಳ ಒತ್ತಡದಿಂದ ಬ್ಯಾಂಕುಗಳು ಅನರ್ಹರಿಗೆ ನೀಡಿದ ದೊಡ್ಡ ಪ್ರಮಾಣದ ಸಾಲದಿಂದಾಗಿಯೇ ಇಂದು ಸುಸ್ತಿ ಸಾಲದ ಸಮಸ್ಯೆ ಈ ಪರಿ ಬೆಳೆದು ನಿಂತಿದೆ. ಅದನ್ನು ಮೆಟ್ಟಿನಿಂತು, ಮುಂದೆ ಇನ್ನೂ ಸಾಕಷ್ಟುದೂರ ಸಾಗಬೇಕಿದೆ. ಆಶಾದಾಯಕ ಬೆಳವಣಿಗೆ ಏನೆಂದರೆ, ಹಲವು ದಶಕಗಳ ಬಳಿಕ ಮೊದಲ ಬಾರಿಗೆ ನಾವು ಸರಿಯಾದ ಮಾರ್ಗದಲ್ಲಿ ಹಾಗೂ ಸರಿಯಾದ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದೇವೆ.