ನಮ್ಮ ಅಂಗಳದ ರತ್ನಗಳು ನಮಗೆ ಕಲ್ಲು, ಬೇರೆಯವರ ಅಂಗಳದ ಕಲ್ಲುಗಳು ನಮಗೆ ರತ್ನ! ಹೀಗೆ ಅನೇಕ ಬಾರಿ ಅನಿಸಿದ್ದಿದೆ. ಇತ್ತೀಚೆಗೆ ತಂತ್ರಜ್ಞಾನ ಶೋಧನಾ ಸಂಸ್ಥೆಯ ಜತೆಗೆ ನಿಕಟ ಸಂಬಂಧ ಹೊಂದಿದ ನಂತರ ಹೀಗೆ ಮತ್ತೆ ಮತ್ತೆ ಅನಿಸುತ್ತಿದೆ. ಅಲ್ಲಿ ಹೋಗಿ ನಮ್ಮವರು ಮಿದುಳಿನ ಪದರಗಳ ಕೆದಕಿ ರೂಪಿಸಿದ ಟೆಕ್ನಾಲಾಜಿಗೆ ನಮ್ಮವರ ಹೆಸರಂತೂ ಸಿಗುವುದಿಲ್ಲ. ಅದು ನಮಗೆ ವಿಶೇಷವಾಗಿ ಕಾಣಿಸುತ್ತದೆ. ನಮ್ಮಲ್ಲಿ ಅದಿಲ್ಲ-ಇದಿಲ್ಲವೆಂದು ಗೊಣಗುವ ಮೊದಲು ಈ ಒಂದು ಸತ್ಯವನ್ನು ಖಂಡಿತ ಅರ್ಥ ಮಾಡಿಕೊಳ್ಳಬೇಕು. ಕ್ರೀಡಾ ತಂತ್ರಜ್ಞಾನದ ಕುರಿತು ಅನೇಕ ಮಾಹಿತಿಗಳನ್ನು ವಿವಿಧ ದೇಶಗಳಿಂದ ಕಲೆಹಾಕುವ ಸಂದರ್ಭದಲ್ಲಿ ಒಂದು ಅಂಶವಂತೂ ಸ್ಪಷ್ಟವಾಯಿತು. ಅವರಿಗೆ ಈ ತಂತ್ರಜ್ಞಾನ ಸಿಗುವಲ್ಲಿ ನಮ್ಮವರ ಶ್ರಮದ ಪಾಲು ಹೆಚ್ಚಿದೆ ಎಂದು! ಹೌದು; ಇದು ಅತಿಶಯೋಕ್ತಿಯಲ್ಲ. ಕೆಲವರು ದೇಶಿ ಕ್ರೀಡಾ ತಂತ್ರಜ್ಞರನ್ನು ಸಂಪರ್ಕಿಸಿದಾಗ ಅನೇಕರಿಂದ ಸಿಕ್ಕ ಮಾಹಿತಿಯಲ್ಲಿ ಒಂದು ಅಂಶವಂತೂ ಕುತೂಹಲ ಕೆರಳಿಸಿತು. ಅವರು ಭಾರತದ ಅನೇಕ ಸಂಶೋಧಕರು ಹಾಗೂ ಕ್ರೀಡಾ ತಂತ್ರಜ್ಞಾನ ತರಬೇತುದಾರರ ಹೆಸರನ್ನು ಉಲ್ಲೇಖಿಸಿದ್ದು. ಕೆಲವು ಕರ್ನಾಟಕದವರನ್ನೂ ಆ ಹೆಸರುಗಳ ಪಟ್ಟಿಯಲ್ಲಿ ಕೇಳಿದಾಗ ಕರ್ಣಾನಂದ. ದೇಶದಲ್ಲಿ ಉನ್ನತ ತರಬೇತಿ ಪಡೆದು, ಕ್ರೀಡಾ ತರಬೇತಿಗೆ ಹೊಸ ಆಯಾಮ ನೀಡಿ, ಸ್ವದೇಶದಲ್ಲಿ ತಕ್ಕ ಧನಬಲ ಸಿಗದೇ ಮತ್ತೆ ದೇಶದ ಕಡೆಗೆ ಮುಖ ಮಾಡಿದ ಅನೇಕರಿದ್ದಾರೆ. ಇನ್ನು ಕೆಲವರು ನಮ್ಮದೇ ನೆಲದಲ್ಲಿ ಏನಾದರೂ ಸಾಧಿಸಬೇಕೆನ್ನುವ ದಿಟ್ಟತನದಿಂದ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಆದರೆ ಅವರ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಪ್ರಯೋಜನಕ್ಕೆ ಪಡೆಯುವ ಉತ್ಸಾಹವಂತೂ ಕಾಣುತ್ತಿಲ್ಲ. 

ಬ್ರಿಟನ್‌, ಆಸ್ಪ್ರೇಲಿಯಾ, ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಕ್ರೀಡಾ ತರಬೇತಿಗೆ ಪ್ರಾಧಾನ್ಯತೆ ನೀಡಿರುವ ಅನೇಕ ವಿಶ್ವವಿದ್ಯಾಲಯಗಳಿವೆ. ಅದು ಅವರ ಶ್ರೇಷ್ಠತೆ. ಕ್ರೀಡೆಗೆ ನೀಡಿರುವ ಆದ್ಯತೆಯ ಪ್ರತೀಕ. ಅದನ್ನು ಆಕ್ಷೇಪಿಸುವ ಅರ್ಹತೆ ನಮಗೆ ಖಂಡಿತ ಇಲ್ಲ. ಆದರೆ ಅವರು ಸಾಧಿಸಿದ್ದನ್ನು ನಾವು ಸಾಧಿಸಲು ಸಾಧ್ಯವಿಲ್ಲವೆ? ಖಂಡಿತ ಸಾಧ್ಯವಿದೆ. ಇತ್ತೀಚೆಗೆ ಒಬ್ಬ ಯುವ ತಂತ್ರಜ್ಞ ಹೇಳಿದ ಮಾತು ಮನದಲ್ಲಿ ಗಟ್ಟಿಯಾಗಿ ನಾಟಿದೆ. ಸ್ಪೋಟ್ಸ್‌ರ್‍ ಶೂಟಿಂಗ್‌ ರೈಫಲ್‌ನಿಂದ ಸ್ಟ್ರಿಂಟ್‌ ರನ್ನರ್‌ ಶೂ ಮೊಳೆಯವರೆಗೆ ಎಲ್ಲವನ್ನೂ ನಾವು ಸಿದ್ಧಪಡಿಸಬಹುದು ಎನ್ನುವ ಆ ಯುವಕನ ಮಾತಲ್ಲಿ ಸತ್ಯವಿದೆ. ಚಂದ್ರ ಹಾಗೂ ಮಂಗಳನ ಕಡೆಗೆ ಮುಖಮಾಡಿರುವ ದೇಶವು ಕ್ರೀಡೆ ಹಾಗೂ ಕ್ರೀಡಾ ತರಬೇತಿಗೆ ಅಗತ್ಯವಿರುವ ಸ್ವಸಾಮರ್ಥ್ಯದ ತಂತ್ರಜ್ಞಾನವನ್ನು ರೂಪಿಸುವುದು ದೊಡ್ಡ ಸವಾಲಂತೂ ಖಂಡಿತ ಅಲ್ಲ. ಮೇಕ್‌ ಇನ್‌ ಇಂಡಿಯಾ ಬಗ್ಗೆ ಮಾತನಾಡುತ್ತೇವೆ, ದೊಡ್ಡ ದೊಡ್ಡ ಜಾಹೀರಾತು ಹರಿಬಿಡುತ್ತೇವೆ. ಆದರೆ ಕ್ರೀಡೆಯ ವಿಷಯ ಬಂದಾಗ ದೇಶದಲ್ಲಿಯೇ ಗುಣಮಟ್ಟದ ತರಬೇತಿ ಎನ್ನುವ ಭ್ರಮೆ. ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. 

ದೇಶಿ ವಿಶ್ವವಿದ್ಯಾಲಯಗಳಲ್ಲಿನ ತರಬೇತಿ ಹಾಗೂ ಮಾರ್ಗದರ್ಶನದ ವಿಷಯದ ಕುರಿತು ಆಸಕ್ತಿ ಸಹಜ. ನಮ್ಮ ದೇಶದ ಕ್ರೀಡಾ ಕೋಚ್‌ಗಳು ಹಾಗೂ ಕ್ರೀಡಾ ಜ್ಞಾನಿಗಳು ಇತ್ತೀಚೆಗೆ ಎರಡು ವಾರ ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯಕ್ಕೆ ಹೋಗಿ ಕಾಲ ಕಳೆದು ಬಂದರು. ಆದರೆ ಅಲ್ಲಿಂದ ಜ್ಞಾನ ಪಡೆದು ಬಂದಿರುವುದಕ್ಕಿಂತ ಹೆಚ್ಚಾಗಿ ನಮ್ಮ ಕ್ರೀಡಾಪಟುಗಳಿಗೆ ಅಲ್ಲಿ ತರಬೇತಿ ಕೊಡಿಸುವ ಕುರಿತು ಚರ್ಚೆ ಅತಿಯಾಗಿದೆ. ಇದು ಬೇಸರದ ವಿಷಯ. ಅಲ್ಲಿ ನೋಡಿದ್ದನ್ನು ನಮ್ಮಲ್ಲಿ ಮಾಡಿ ತೋರಿಸುವ ಕಡೆಗೆ ಚರ್ಚೆ ಸಾಗುವುದು ಅಗತ್ಯವಾಗಿತ್ತು. ಆ ವಿಶ್ವವಿದ್ಯಾಲಯದಲ್ಲಿ ತರಬೇತಿಯ ಮೂರು ಅಂಶಗಳ ಕಡೆಗೆ ಒತ್ತು ನೀಡಲಾಗುತ್ತದೆ. ಮೊದಲನೆಯದು ವಿಶ್ಲೇಷಣೆ. ಇದು ನಡೆಯುವುದು ತಂತ್ರಜ್ಞಾನದ ನೆರವಿನಿಂದ. ಯಾವ ಕ್ರೀಡೆಗೆ ಯಾವ ರೀತಿಯಲ್ಲಿ ತಂತ್ರವನ್ನು ಯಾವ ದೈಹಿಕ ಸಾಮರ್ಥ್ಯದ ವ್ಯಕ್ತಿ ಹೇಗೆ ಬಳಸಬೇಕೆಂದು ಪರಿಶೀಲನೆ ಮಾಡಲಾಗುತ್ತದೆ. ಎರಡನೇಯದು ತರಬೇತಿಯ ಹಂತ. ವಿಶ್ಲೇಷಣೆಯಲ್ಲಿ ಗಮನಿಸಿದ ಕೊರತೆಗಳನ್ನು ತಿದ್ದುವ ಪ್ರಕ್ರಿಯೆ ನಡೆಯುತ್ತದೆ. ಮೂರನೆಯದ್ದು ಡಯಟ್‌ ಹಾಗೂ ವ್ಯಾಯಾಮ. ಇದು ಕೊನೆಯದ್ದು ಎನಿಸಿದರೂ ಮುಖ್ಯವಾದ ಅಂಗ. ಯಾವ ಕ್ರೀಡಾಪಟು ಹೇಗೆ ಆಹಾರ ಕ್ರಮವನ್ನು ಅನುಸರಿಸಬೇಕು, ಅಗತ್ಯವಿರುವ ಪೋಷಕಾಂಶಗಳೇನು ಎನ್ನುವ ಮಾಹಿತಿಯನ್ನು ನೀಡಲಾಗುತ್ತದೆ. ಅದರ ಜತೆಗೆ ಡಯಟ್‌ಗೆ ಪೂರಕವಾದ ವ್ಯಾಯಾಮ ಕ್ರಮವನ್ನು ಅನುಸರಿಸಲು ಆದ್ಯತೆ ನೀಡಲಾಗುತ್ತದೆ. ಆದರೆ ಇದೆಲ್ಲದಕ್ಕೂ ತಂತ್ರಜ್ಞಾನದ ಪರೀಕ್ಷಾ ಮಾರ್ಗಗಳನ್ನು ನಿಯಮಿತವಾಗಿ ಅಳವಡಿಸಿಕೊಳ್ಳಲಾಗಿದೆ. ಆದ್ದರಿಂದಲೇ ಅಲ್ಲಿ ತರಬೇತಿ ಹೆಚ್ಚು ಪರಿಣಾಮಕಾರಿಯಾಗಿ ಕಾಣಿಸುತ್ತದೆ. ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ ವಿವಿಯಿಂದ ಮಾರ್ಗದರ್ಶನ ಪಡೆದ ಅನೇಕ ಕ್ರೀಡಾಪಟುಗಳು ಉನ್ನತ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ. ಆ ಕುರಿತು ಅನುಮಾನವೇ ಇಲ್ಲ.