Asianet Suvarna News Asianet Suvarna News

ಕಪ್ಪುಹಣ ಮೂಲೋತ್ಪಾಟನೆಗೆ ಇಂಥ ನಿರಂತರ ಕ್ರಮ ಅತ್ಯಗತ್ಯ

Editorial

ನೋಟು ರದ್ದತಿ ಮೂಲಕ ಕಳೆದ ನವೆಂಬರ್‌ನಲ್ಲಿ ಕಪ್ಪುಹಣದ ವಿರುದ್ಧ ಸಮರ ಸಾರಿದ ಕೇಂದ್ರ ಸರ್ಕಾರ, ಇದೀಗ ತೆರಿಗೆಗಳ್ಳರ ವಿರುದ್ಧ ಎರಡನೇ ಹಂತದ ಕಾರ್ಯಾಚರಣೆಗೆ ಚಾಲನೆ ನೀಡಿದೆ. ನೋಟು ರದ್ದತಿಯ ಬಳಿಕ ಹಳೆಯ ನೋಟು ವಿನಿಮಯಕ್ಕೆ ಅವಕಾಶ ನೀಡಿದ ಅವಧಿಯಲ್ಲಿ ಬ್ಯಾಂಕ್‌ ಖಾತೆಗಳಿಗೆ ಆದಾಯ ಮೀರಿದ ಪ್ರಮಾಣದ ನಗದು ಜಮಾ ಮಾಡಿದವರನ್ನಷ್ಟೇ ಅಲ್ಲದೆ, ಆ ಅವಧಿಯಲ್ಲಿ ಆದಾಯ ಮೀರಿದ ಪ್ರಮಾಣದ ಆಸ್ತಿ ವಹಿವಾಟು ನಡೆಸಿದವರು ಹಾಗೂ ವಿದೇಶಗಳಿಗೆ ಹಣ ವರ್ಗಾವಣೆ ಮಾಡಿದವರ ಮೇಲಿನ ತನಿಖೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಇಲಾಖೆ ಇಂತಹ ಶಂಕಾಸ್ಪದ ಹಣಕಾಸು ಚಟುವಟಿಕೆ ನಡೆಸಿದ 60 ಸಾವಿರ ಮಂದಿಯನ್ನು ಗುರುತಿಸಿದ್ದು, ಆ ಪೈಕಿ ಅಪಾರ ಪ್ರಮಾಣದ ನಗದನ್ನು ಖಾತೆಗಳಿಗೆ ಜಮಾ ಮಾಡಿರುವ 1300 ಮಂದಿಯನ್ನು ಅತ್ಯಂತ ಅಪಾಯಕಾರಿ ಗುಂಪು ಎಂದು ಹೆಸರಿಸಿ ತೀವ್ರ ತನಿಖೆ ಆರಂಭಿಸಿದೆ. ಇಂತಹವರ ಬ್ಯಾಂಕ್‌ ಖಾತೆಯ ವಹಿವಾಟನ್ನು ಮಾತ್ರವಲ್ಲದೆ, ಇತರ ಹಣಕಾಸು ಚಟುವಟಿಕೆಗಳನ್ನೂ ತನಿಖೆ ನಡೆಸಲಾಗುತ್ತಿದೆ. ರಿಯಲ್‌ ಎಸ್ಟೇಟ್‌, ಜಮೀನು- ತೋಟ ಖರೀದಿ, ಆಸ್ಪತ್ರೆ ವೆಚ್ಚ, ವಾಹನ ಖರೀದಿಯಂತಹ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯದ ಅಂದಾಜಿನ ಪ್ರಕಾರ ಈ 1300 ಮಂದಿ ಸುಮಾರು 6 ಸಾವಿರ ಕೋಟಿ ರು. ಮೊತ್ತದ ವಹಿವಾಟು ನಡೆಸಿದ್ದು, ಅದು ಅವರ ಆದಾಯ ತೆರಿಗೆ ರಿಟನ್ಸ್‌ರ್‍ ಮಾಹಿತಿ ಮತ್ತು ಘೋಷಿತ ಆದಾಯಕ್ಕೆ ಹೋಲಿಸಿದರೆ ಹತ್ತಾರು ಪಟ್ಟು ಅಧಿಕ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ, ನೋಟು ರದ್ದತಿಯ ಅವಧಿಯಲ್ಲಿ ಸುಮಾರು 6,600 ಮಂದಿ ವಿದೇಶಿ ಹಣ ವರ್ಗಾವಣೆ ಸೌಲಭ್ಯ ಬಳಸಿ ಅಪಾರ ಪ್ರಮಾಣದ ಹಣ ವರ್ಗಾವಣೆ ಮಾಡಿರುವ ಮಾಹಿತಿ ಕೂಡ ಲಭ್ಯವಾಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸುಮಾರು 1800 ಕೋಟಿ ರು. ಮೊತ್ತದ ಹಣವನ್ನು ಈ ರೀತಿ ಶಂಕಾಸ್ಪದವಾಗಿ ವರ್ಗಾವಣೆ ಮಾಡಲಾಗಿದೆ ಎಂದೂ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಇಂತಹ ಅಕ್ರಮ ಹಣಕಾಸು ವಹಿವಾಟುಗಳಿಗೆ, ತೆರಿಗೆಗಳ್ಳತನಕ್ಕೆ ಸಹಕರಿಸಿದ ಸಾರ್ವಜನಿಕ ವಲಯದ ಬ್ಯಾಂಕ್‌ ಅಧಿಕಾರಿಗಳು, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಅಧಿಕಾರಿಗಳ ವಿರುದ್ಧವೂ ತನಿಖೆ ತೀವ್ರಗೊಳಿಸುವುದಾಗಿಯೂ ಹೇಳಲಾಗಿದೆ.

ಈ ನಡುವೆ, ಕಳೆದ ವಾರ ಸಂಸತ್‌ ಅಧಿವೇಶನದ ವೇಳೆ ನೋಟು ರದ್ದತಿಯ ಅವಧಿಯಲ್ಲಿ ಪತ್ತೆ ಮಾಡಲಾಗಿರುವ ಅಕ್ರಮ ಸಂಪತ್ತಿನ ವಿವರ ನೀಡುತ್ತಾ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸುಮಾರು 5400 ಕೋಟಿ ರು. ಮೌಲ್ಯದ ಅಕ್ರಮ ಸಂಪತ್ತನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದಿದ್ದಾರೆ. ನೋಟು ರದ್ದತಿಯ ಬಳಿಕ ಸುಮಾರು 18 ಲಕ್ಷ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮ ಹಣಕಾಸು ವಹಿವಾಟು ನಡೆದಿದೆ ಎಂದು ಶಂಕಿಸಲಾಗಿದೆ. ಅಂತಹ ಖಾತೆದಾರರ ಮೇಲೆ ಈವರೆಗೆ ಒಟ್ಟು 1100 ದಾಳಿಗಳನ್ನು ಮಾಡಲಾಗಿದ್ದು, 5,100 ತಪಾಸಣಾ ನೋಟೀಸ್‌ ಜಾರಿ ಮಾಡಲಾಗಿದೆ ಎಂದೂ ವಿವರ ನೀಡಿದ್ದಾರೆ. ಕಪ್ಪುಹಣ ಮತ್ತು ಕಾಳಧನಿಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ತೆರಿಗೆ ಇಲಾಖೆಯ ಈ ಕ್ರಮ ನಿಜಕ್ಕೂ ಶ್ಲಾಘನೀಯ ಮತ್ತು ಅಪೇಕ್ಷಣೀಯ ಕೂಡ. ಏಕೆಂದರೆ, ಕಪ್ಪುಹಣಕ್ಕೆ ಕಡಿವಾಣ ಹಾಕುವುದೆಂದರೆ, ಅದು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಎಂದೇ ಅರ್ಥ. ಆ ಹಿನ್ನೆಲೆಯಲ್ಲಿ ನೋಡುವುದಾದರೆ, ಕಪ್ಪುಹಣದ ಕರಾಳ ವ್ಯವಸ್ಥೆಯ ಮೂಲೋತ್ಪಾಟನೆ ಮಾಡಲು ನೋಟು ರದ್ದತಿಯ ದಿಢೀರ್‌ ಕ್ರಮ ಎಷ್ಟುಮುಖ್ಯವೋ ಅಷ್ಟೇ ಮುಖ್ಯ ಶಂಕಾಸ್ಪದ ವ್ಯಕ್ತಿಗಳ ವಿರುದ್ಧದ ನಿಷ್ಪಕ್ಷಪಾತ ತನಿಖೆ. ಇದು ಒಮ್ಮೆ ಮಾಡಿ ಮುಗಿಸುವ ಕೆಲಸವಲ್ಲ. ಆದಾಯ ತೆರಿಗೆ ಇಲಾಖೆ ನಿರಂತರವಾಗಿ ಕಪ್ಪು ಹಣದ ಸೃಷ್ಟಿಹಾಗೂ ಚಲಾವಣೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಭಿಯಾನವನ್ನು ಜಾರಿಯಲ್ಲಿಟ್ಟಿರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟುದಿಟ್ಟಮತ್ತು ನಿರ್ದಾಕ್ಷಿಣ್ಯ ಕ್ರಮಗಳನ್ನು ಜಾರಿಮಾಡಬೇಕಿದೆ.