Asianet Suvarna News Asianet Suvarna News

ಬಹಿರಂಗವಾಗಿ ಅನ್ಯಾಯದ ಹಾದಿ ತುಳಿಯುತ್ತಿರುವ ಪಾಕ್‌

Editorial

ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯದಲ್ಲಿ ತೊಡಗಿದ ಆರೋಪದ ಮೇಲೆ ಭಾರತದ ಮಾಜಿ ಯೋಧ ಕುಲಭೂಷಣ್‌ ಜಾಧವ್‌ ಅವರನ್ನು ಪಾಕಿಸ್ತಾನದ ಸೇನೆ ಗಲ್ಲಿಗೇರಿಸಲು ಮುಂದಾಗಿದೆ. ಕರ್ನಾಟಕದ ಗಡಿಯ ವಿಜಯಪುರದ ಅಂಚಿನ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಭಾರತೀಯ ನೌಕಾಪಡೆಯ ಈ ಮಾಜಿ ಅಧಿಕಾರಿಯನ್ನು ಕಳೆದ ವರ್ಷದ ಮಾಚ್‌ರ್‍ನಲ್ಲಿ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಂಧಿಸಿರುವುದಾಗಿ ಪಾಕ್‌ ಹೇಳಿತ್ತು. ಆದರೆ, ಅವರ ಮೇಲಿನ ಆರೋಪಗಳಿಗೆ ಪಾಕಿಸ್ತಾನ ಯಾವುದೇ ಪುರಾವೆ ನೀಡಿಲ್ಲ ಮತ್ತು ಜಾಧವ್‌ ಅವರನ್ನು ಸಂಪರ್ಕಿಸಲು ಅವಕಾಶ ನೀಡುವಂತೆ ಭಾರತ ಸರ್ಕಾರ ಮಾಡಿದ ಮನವಿಗಳಿಗೆ ಅದು ಕಿವಿಗೊಟ್ಟಿಲ್ಲ. ಜಾಧವ್‌ ತಪ್ಪೊಪ್ಪಿಕೊಂಡಿರುವುದಾಗಿ ಪಾಕ್‌ ಸೇನೆ ಬಿಡುಗಡೆ ಮಾಡಿದ ವಿಡಿಯೋ ಒಂದರಲ್ಲಿ ಹೇಳಲಾಗಿತ್ತು. ಆದರೆ, ಭಾರತ ಸರ್ಕಾರ ಈ ವಿಡಿಯೋ ಸಾಚಾ ಅಲ್ಲ ಎಂದು ತಿರಸ್ಕರಿಸಿತ್ತು.

ಇದೀಗ ಪಾಕ್‌ ಸೇನೆಯ ಫೀಲ್ಡ್‌ ಜನರಲ್‌ ಕೋರ್ಟ್‌ ಮಾರ್ಷಲ್‌ನಲ್ಲಿ 46 ವರ್ಷದ ಜಾಧವ್‌ಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ. ಅಲ್ಲದೆ, ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಅವರು ಈ ತೀರ್ಪನ್ನು ಉಲ್ಲೇಖಿಸಿ, ಈ ಪ್ರಕರಣವನ್ನು ಭಾರತ ಎಚ್ಚರಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಆ ಮೂಲಕ ಇಡೀ ಪ್ರಕರಣ ಭಾರತದ ವಿರುದ್ಧದ ಪಾಕಿಸ್ತಾನದ ದ್ವೇಷ ಮತ್ತು ಕುತಂತ್ರದ ಫಲ ಎಂಬುದನ್ನು ಪಾಕ್‌ ರಕ್ಷಣಾ ಸಚಿವರೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಭಾರತ ಸರ್ಕಾರ ಕೂಡ ಆರಂಭದಿಂದಲೂ ಇದೊಂದು ಷಡ್ಯಂತ್ರ ಎಂದೇ ಬಲವಾಗಿ ಹೇಳುತ್ತ ಬಂದಿದೆ. ಇದೀಗ ಪಾಕಿಸ್ತಾನದ ಸಾಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸದೆ, ಭಾರತದೊಂದಿಗೆ ಮಾತನಾಡುವ ರಾಜತಾಂತ್ರಿಕ ಅವಕಾಶವನ್ನೂ ನೀಡದೆ, ಏಕಪಕ್ಷೀಯವಾಗಿ ಪಾಕಿಸ್ತಾನದ ಸೇನೆ ತೀರ್ಪು ಪ್ರಕಟಿಸಿರುವುದು ಸಹಜ ನ್ಯಾಯದ ವಿರುದ್ಧದ ಕ್ರಮ ಮತ್ತು ಪೂರ್ವನಿರ್ಧರಿತ ಕೊಲೆ ಯತ್ನ ಎಂದು ಭಾರತ ಕಟು ಮಾತುಗಳಲ್ಲಿ ತನ್ನ ಪ್ರಬಲ ಪ್ರತಿರೋಧ ದಾಖಲಿಸಿದೆ.

ಜಾಧವ್‌ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಮಂಗಳವಾರ ಭಾರೀ ಚರ್ಚೆಗೆ ಗ್ರಾಸವಾಯಿತು. ಪಕ್ಷಾತೀತವಾಗಿ ಎಲ್ಲಾ ಸಂಸದರೂ ಪಾಕಿಸ್ತಾನದ ಪೈಶಾಚಿಕ ಕ್ರಮವನ್ನು ಉಗ್ರವಾಗಿ ಖಂಡಿಸಿದರು ಮತ್ತು ಕೂಡಲೇ ಭಾರತ ಸರ್ಕಾರ ಜಾಧವ್‌ ಜೀವ ರಕ್ಷಣೆಯ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಂಸದರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌, ಕುಲಭೂಷಣ್‌ ಜಾಧವ್‌ ಅವರಿಗೆ ನ್ಯಾಯ ದೊರಕಿಸಿಕೊಡಲು ಭಾರತ ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. ಈ ನಡುವೆ, ಜಾಧವ್‌ ಅವರಿಗೆ ಶಿಕ್ಷೆ ವಿಧಿಸಿದ ಪಾಕ್‌ ಸೇನೆಯ ಕ್ರಮವನ್ನು ಖಂಡಿಸಿ, ಭಾರತ ಸರ್ಕಾರ ಪಾಕ್‌ ರಾಯಭಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿರೋಧ ದಾಖಲಿಸಿದೆ ಮತ್ತು 12 ಮಂದಿ ಪಾಕಿಸ್ತಾನಿ ಕೈದಿಗಳ ಬಿಡುಗಡೆಯನ್ನು ತಡೆಹಿಡಿದಿದೆ. ಈಗಾಗಲೇ ಹಳಸಿರುವ ಭಾರತ ಮತ್ತು ಪಾಕ್‌ ಸಂಬಂಧವನ್ನು ಈ ಪ್ರಕರಣ ಮತ್ತಷ್ಟುಕಗ್ಗಂಟಾಗಿಸಿದೆ.

ಹಾಗೆ ನೋಡಿದರೆ, ಪಾಕಿಸ್ತಾನ ಹೀಗೆ ಭಾರತೀಯ ಪ್ರಜೆಗಳನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಿ, ಹತ್ಯೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದಿನ ಸರಬ್ಜಿತ್‌ ಸಿಂಗ್‌, ಕಿರ್ಪಾಲ್‌ ಸಿಂಗ್‌ ಹಾಗೂ ಚಮೇಲ್‌ ಸಿಂಗ್‌ ಪ್ರಕರಣಗಳೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆಕಸ್ಮಿಕವಾಗಿ ಗಡಿದಾಟಿದ ಭಾರತೀಯರನ್ನು ತನ್ನ ಅಮಾನವೀಯ ಕ್ರೌರ್ಯಕ್ಕೆ ಬಲಿತೆಗೆದುಕೊಂಡ ಇತಿಹಾಸವೇ ಪಾಕಿಸ್ತಾನಕ್ಕಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದ ಮಾಜಿ ಯೋಧ ಕುಲಭೂಷಣ್‌ ಜಾಧವ್‌ ಅವರಿಗೆ ನ್ಯಾಯ ದೊರಕಿಸಿಕೊಡಲು ಮತ್ತು ಅವರ ಜೀವ ಉಳಿಸಲು ಅಂತಾರಾಷ್ಟ್ರೀಯ ಸಮುದಾಯದ ಒತ್ತಡವೂ ಸೇರಿದಂತೆ ದಿಟ್ಟಪ್ರಯತ್ನ ನಡೆಸಬೇಕಿದೆ. ಆ ಮೂಲಕ ಪಾಕಿಸ್ತಾನದ ಆಡಳಿತ ಮತ್ತು ಅಲ್ಲಿಯ ಸೇನೆಯ ಹೇಯ ಪರಿಪಾಠಕ್ಕೆ ಇತಿಶ್ರೀ ಹಾಡಬೇಕಿದೆ.