Asianet Suvarna News Asianet Suvarna News

ಚುನಾವಣೆ ಆಯ್ತು, ಇನ್ನಾದ್ರೂ ಬರಗಾಲದತ್ತ ಗಮನಹರಿಸಿ

Editorial 10 April

ಹೆಚ್ಚುಕಮ್ಮಿ 15-20 ದಿನಗಳಿಂದ ಇಡೀ ಸರ್ಕಾರ, ಪ್ರತಿಪಕ್ಷಗಳು ಹಾಗೂ ರಾಜಕೀಯ ಪ್ರಮುಖರೆಲ್ಲ ನಂಜನಗೂಡು, ಗುಂಡ್ಲುಪೇಟೆ ಉಪ​ಚುನಾವಣೆ​​ಯಲ್ಲಿ ಮುಳುಗಿದ್ದರು. ಆ ಚುನಾವಣೆಯ ಮತದಾನ ನಿನ್ನೆ ಮುಗಿಯುವು​ದ​​ರೊಂದಿಗೆ ರಾಜಕೀಯ ನಾಯಕರ ಪಾತ್ರ ಅಲ್ಲಿ ಸಂಪನ್ನಗೊಂಡಂತಾಗಿದೆ. ಇನ್ನುಳಿದಿ​ರು​ವುದು ಫಲಿತಾಂಶ ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕ ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಚುನಾವಣೆ ಇದಾಗಿರುವುದರಿಂದ ಫಲಿತಾಂಶವೂ ಸಾಕಷ್ಟುರಾಜಕೀಯ ಪರಿಣಾಮಗಳನ್ನು ಒಳಗೊಂಡೇ ಇರುತ್ತದೆ. ಈ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆಂಬುದು ಸಂಖ್ಯಾದೃಷ್ಟಿಯಿಂದ ಯಾರಿಗೂ ಪ್ರಮುಖ ವಲ್ಲ. ಆದರೆ, ರಾಜಕೀಯವಾಗಿ ಇದು ಮಹತ್ವದ್ದೇ ಆಗಿದೆ. ಅದೇನೇ ಆದರೂ ಸದ್ಯ ಸರ್ಕಾರ, ಮಂತ್ರಿಗಳು, ಅಧಿಕಾರಿಗಳು ಹಾಗೂ ಎಲ್ಲಾ ಪಕ್ಷಗಳ ಶಾಸಕರು ತುರ್ತಾಗಿ ಗಮನ ಹರಿಸಬೇಕಾಗಿರುವುದು ಬರಗಾಲದ ಪರಿಹಾರ ಕಾರ್ಯಗಳ ಬಗ್ಗೆ. ರಾಜ್ಯದಲ್ಲಿ ಹೆಚ್ಚುಕಮ್ಮಿ 3 ವರ್ಷದಿಂದ ಬರಗಾಲವಿದ್ದರೂ, ಈ ವರ್ಷ ಅದರ ಬಿಸಿ ಇನ್ನೂ ಜೋರಾಗಿಯೇ ತಟ್ಟಿದ್ದರೂ, ಇಲ್ಲಿಯವರೆಗೆ ಬರಪೀಡಿತ ಊರುಗಳ ಜನ- ಜಾನುವಾರುಗಳ ಬಗ್ಗೆ ಸರ್ಕಾರ ಹಾಗೂ ಶಾಸಕರು ತಲೆಕೆಡಿಸಿಕೊಂಡಿದ್ದು ಅಷ್ಟಕ್ಕಷ್ಟೆ. ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂದು ರಾಜ್ಯ ಸರ್ಕಾರ ಆರೋಪ ಮಾಡುವುದು, ಕೇಂದ್ರ ಸರ್ಕಾರ ಸಾಕಷ್ಟುಹಣ ಕೊಟ್ಟಿದ್ದರೂ ರಾಜ್ಯ ಸರ್ಕಾರ ಜವಾಬ್ದಾರಿ ಮರೆತಿದೆ ಎಂದು ಬಿಜೆಪಿ​ಯವರು ಆರೋಪ ಮಾಡುವುದು ಹೀಗೆ ಆರೋಪ ಪ್ರತ್ಯಾರೋಪಗಳ ಕೆಸರೆರಚಾಟ​ ಸಾಕಷ್ಟುನಡೆದಿವೆಯೇ ಹೊರತು ನಿಜ​ವಾದ ಬರ ಪರಿಹಾರ ಕಾಮಗಾರಿ ಎಂಬುದು ಎಲ್ಲಿ ನಡೆದಿದೆ ಎಂದು ಸರ್ಕಾರವೇ ಹುಡುಕಿ ಹೇಳಬೇಕಾದ ಸ್ಥಿತಿ​ಯಿದೆ. ಸರ್ಕಾರದ ದಾಖಲೆಗಳಲ್ಲಿ ಸಾಕಷ್ಟುಕೆಲಸವಾಗಿದೆ ಎಂದು ಹೇಳಿದರೂ ವಾಸ್ತವದಲ್ಲಿ ಅದು ಆಗಿಲ್ಲ ಎಂಬುದನ್ನು ಹೇಳಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಮ್ಮೆ ಸಂಚರಿಸಿದರೆ ಕಣ್ಣಿಗೇ ಕಾಣಿ​ಸುತ್ತದೆ. ಈ ಹಿನ್ನೆಲೆಯಲ್ಲಿ, ಚುನಾವಣೆಯ ಮೂಡ್‌ನಿಂದ ತಕ್ಷಣವೇ ಹೊರಬಂದು, ಸರ್ಕಾರ ಹಾಗೂ ಶಾಸಕರು ಇಂದಿನಿಂದಲೇ ಬರ ಪರಿಹಾರ ಕಾರ್ಯಗಳ ಬಗ್ಗೆ ಗಂಭೀರವಾಗಿ ಗಮನಹರಿಸುವ ಅಗತ್ಯವಿದೆ.

ಈ ಬಾರಿ ರಾಜ್ಯದ ಬಹುತೇಕ ಎಲ್ಲಾ ತಾಲೂಕು​ಗಳಲ್ಲೂ ಬರಗಾಲವಿದೆ. ಕುಡಿವ ನೀರಿನ ಸಮಸ್ಯೆ, ಜನರಿಗೆ ಉದ್ಯೋಗದ ಸಮಸ್ಯೆ, ಹಣಕಾಸಿನ ಅಡಚಣೆ, ರೈತರಿಗೆ ಬೆಳೆ ನಷ್ಟದ ಸಮಸ್ಯೆ, ಸಾಲ, ಜಾನುವಾರು​ಗಳಿಗೆ ಮೇವಿನ ಸಮಸ್ಯೆ ಹೀಗೆ ನೂರೆಂಟು ಸಮಸ್ಯೆಗಳಿವೆ. ಅಗತ್ಯವಿರುವೆಡೆಯಲ್ಲೆಲ್ಲ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಯಾವ ಊರಿನಲ್ಲಿ ನೋಡಿದರೂ ಜನರು ಕುಡಿಯುವ ನೀರಿಗಾಗಿ ಕೊಡ ಹಿಡಿದು ದೂರದ ಪ್ರದೇಶಗಳಿಗೆ ಅಲೆಯುವ, ಸರ್ಕಾರ ನೀಡಿರುವ ಅಲ್ಪಸ್ವಲ್ಪ ಟ್ಯಾಂಕರ್‌ ನೀರಿಗಾಗಿ ಜಗಳವಾಡುವ ದೃಶ್ಯಗಳು ದಿನನಿತ್ಯ ಮಾಧ್ಯಮಗಳಲ್ಲಿ ಕಾಣಿಸುತ್ತಿವೆ. ಇನ್ನು ಜಾನುವಾರುಗಳಿಗೆ ಸರ್ಕಾರ ಮೇವು ಬ್ಯಾಂಕ್‌ ಹಾಗೂ ಗೋಶಾಲೆ ತೆರೆದಿದೆ ಎನ್ನಲಾಗಿದ್ದರೂ ಆ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳಲ್ಲಿ ಹೆಚ್ಚಿನವು ಅಸ್ತಿತ್ವದಲ್ಲೇ ಇಲ್ಲ ಎಂದು ಸುವರ್ಣನ್ಯೂಸ್‌ ಹಾಗೂ ಕನ್ನಡಪ್ರಭದ ‘ಕವರ್‌ಸ್ಟೋರಿ' ತಂಡ ಸಾಕ್ಷ್ಯಸಮೇತ ತೋರಿಸಿದೆ. ಮೇವು ಇರುವ ಗೋಶಾಲೆಗಳಲ್ಲೂ ಕಸ-ಕಡ್ಡಿಗಳನ್ನೇ ಮೇವು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಬರಗಾಲದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಶಾಶ್ವತ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಂಬಂಧಪಟ್ಟಸಚಿವರು ಹೇಳಿದ್ದರೂ ಅಂತಹ ಉದಾಹರಣೆಗಳು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಬೆಳೆಹಾನಿಗೆ ಪರಿಹಾರ ವಿತರಿಸುವ ಕಾರ್ಯ ಸರ್ಕಾರದ ದೃಷ್ಟಿಯಲ್ಲಿ ಪ್ರಗತಿಯಲ್ಲಿರುವುದೇನೋ ಹೌದು, ಆದರೆ ಆ ಪರಿಹಾರದ ಹಣ ರೈತರಿಗೆ ಎಷ್ಟರಮಟ್ಟಿಗೆ ಪ್ರಯೋಜನಕ್ಕೆ ಬರುತ್ತಿದೆ ಎಂಬ ಬಗ್ಗೆ ಮಂತ್ರಿಗಳು ಹಾಗೂ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಒಟ್ಟಾರೆ ಬರ ಹಾಗೂ ಚುನಾವಣಾ ರಾಜಕೀಯವನ್ನು ಇಲ್ಲಿಗೆ ಸಾಕುಮಾಡಿ, ಪಟ್ಟಾಗಿ ಕೆಲಸ ಮಾಡುವುದನ್ನು ಜನರು ಎದುರುನೋಡುತ್ತಿದ್ದಾರೆ.