ಬೆಂಗಳೂರು(ಏ.05): ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಿಗೇಹಳ್ಳಿ ನಿವಾಸಿ ವಿಕ್ರಮ್‌(26) ಕೊಲೆಯಾದವರು. ಘಟನೆಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಸುರೇಶ್‌ ಎಂಬುವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸುರೇಶ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಸಂಬಂಧಿ ವಿಕ್ರಮ್‌ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಇಬ್ಬರು ಕೊಡಿಗೇಹಳ್ಳಿ ಸಹಕಾರ ನಗರದ ತಮ್ಮ ಕಚೇರಿಯಲ್ಲಿದ್ದರು. ಇನ್ನೋವಾ ಕಾರಿನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಸುರೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ವಿಕ್ರಮ್‌ಗೆ ಚೂರಿಯಿಂದ ಇರಿದು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿಕ್ರಮ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಚೇಸಿಂಗ್.. ಖಾರದ ಪುಡಿ.. ಲಿಫ್ಟ್.. ಜತೆಗಿದ್ದವನೇ ಕೊಟ್ಟಿದ್ದ ಸುಳಿವು..!

ದುಷ್ಕರ್ಮಿಗಳು ಸ್ಥಳದಲ್ಲೇ ಬಿಟ್ಟು ಹೋಗಿರುವ ಇನ್ನೋವಾ ಕಾರು ಆಂಧ್ರ ಪ್ರದೇಶದ ನೋಂದಣಿ ಹೊಂದಿದೆ. ಆಂಧ್ರ ಪ್ರದೇಶ ಮೂಲದ ಆರೋಪಿಗಳೇ ಹತ್ಯೆ ಮಾಡಿರುವ ಸಾಧ್ಯತೆಗಳಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಿಚಾರಕ್ಕೆ ಹತ್ಯೆ ನಡೆದಿರುವುದು ಕಂಡು ಬಂದಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.