ಅತ್ಯಾಚಾರ ಯತ್ನ : ಪ್ರತಿಭಟಿಸಿದ ಗೃಹಿಣಿಯ ಬೆಂಕಿ ಹಚ್ಚಿ ಬರ್ಬರ ಹತ್ಯೆ!
* ಯಾದಗಿರಿ ಹೇಯ ಕೃತ್ಯ ಮಾಸುವ ಮುನ್ನವೇ ಮತ್ತೊಂದು ಪೈಶಾಚಿಕ ಘಟನೆ
* ಅತ್ಯಾಚಾರ ಯತ್ನ : ಪ್ರತಿಭಟಿಸಿದ ಗೃಹಿಣಿಯ ಬೆಂಕಿ ಹಚ್ಚಿ ಬರ್ಬರ ಹತ್ಯೆ
* ಬೆಂಕಿಯಲ್ಲಿ ಬೆಂದ ಸುರಪುರ ತಾಲೂಕಿನ ಗ್ರಾಮವೊಂದರ 23 ವರ್ಷದ ಗೃಹಿಣಿ
ಸುರಪುರ(ಅ.05): ಪತಿ ಬಹಿರ್ದೆಸೆಗೆ ಹೋದ ವೇಳೆ, ಗೃಹಿಣಿಯೊಬ್ಬಳ ಮನೆಗೆ ನುಗ್ಗಿ ಅತ್ಯಾಚಾರ(Rape) ನಡೆಸಲು ಯತ್ನಿಸಿದ ಕಾಮುಕನೊಬ್ಬ, ಇದಕ್ಕೆ ಪ್ರತಿಭಟಿಸಿದ ಆಕೆಯ ಮೇಲೆ ಆಕ್ರೋಶಗೊಂಡು ಹಲ್ಲೆ(Assault) ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆಗೈದು ಪೈಶಾಚಿಕ ಕೃತ್ಯ ಸೋಮವಾರ ನಸುಕಿನ ಜಾವ ನಡೆದಿದೆ.
ಜಿಲ್ಲೆಯ ಶಹಾಪುರದಲ್ಲಿ ಮಹಿಳೆಯೊಬ್ಬಳನ್ನು ಬೆತ್ತಲೆ ಮಾಡಿ ಅಮಾನವೀಯವಾಗಿ ಹಲ್ಲೆ ನಡೆಸಿ, ಗ್ಯಾಂಗ್ ರೇಪ್ ನಡೆಸಿದ ವಿಕೃತರ ಕರಾಳ ಘಟನೆ ಮಾಸುವ ಮುನ್ನವೇ, ಇದೇ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದ ಈ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಸುರಪುರ ತಾಲೂಕಿನ ಚೌಡೇಶ್ವರಿಹಾಳದ ಈ ಮಹಿಳೆ 23 ವರ್ಷದ ವಯಸ್ಸಿನ ಈ ಮಹಿಳೆ ಸೋಮವಾರ ಮಧ್ಯಾಹ್ನ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಕೃತ್ಯದ ನಂತರ ಪರಾರಿಯಾದ ಅದೇ ಗ್ರಾಮದ ಆರೋಪಿ ಗಂಗೆಪ್ಪ ಎಂಬಾತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ :
ಸುರಪುರ ತಾಲೂಕಿನ ಚೌಡೇಶ್ವರಿಹಾಳದ ಈ ಗೃಹಿಣಿಯ ಮೇಲೆ ಆರೋಪಿ ಗಂಗೆಪ್ಪ ಕಾಮದೃಷ್ಟಿಬೀರುತ್ತಿದ್ದ. ತನ್ನ ಜೊತೆ ಅಕ್ರಮ ಸಂಬಂಧ ಹೊಂದುವಂತೆ ಗೃಹಿಣಿಯನ್ನು ಅನೇಕ ಬಾರಿ ಪೀಡಿಸಿದ್ದ ಎನ್ನಲಾಗಿದೆ. ಇದಕ್ಕೆ ಆಕೆ ವಿರೋಧಿಸಿದ್ದಾಗ, ಹಲ್ಲೆ ಯತ್ನವೂ ನಡೆಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ, ಗ್ರಾಮದಲ್ಲಿ ಹಿರಿಯರ ನೇತೃತ್ವದಲ್ಲಿ ಸಭೆ ನಡೆದು, ಗಂಗೆಪ್ಪನಿಗೆ ಬುದ್ಧಿ ಹೇಳಿದ್ದರೆಂದೂ ತಿಳಿದು ಬಂದಿದೆ.
ಸೋಮವಾರ ನಸುಕಿನ ಜಾವ ಪತಿ ಬಹಿರ್ದೆಸೆಗೆ ಹೋದ ವೇಳೆ, ಈ ಗೃಹಿಣಿ ವಾಸಿಸುತ್ತಿದ್ದ ಮನೆಗೆ ನುಗ್ಗಿದ ಆರೋಪಿ ಗಂಗೆಪ್ಪ ಅತ್ಯಾಚಾರ ಯತ್ನ ನಡೆಸಿದ್ದಾನೆ. ಇದಕ್ಕೆ ಆಕೆ ಪ್ರತಿಭಟಿಸಿದಾಗ ಹಲ್ಲೆ ನಡೆಸಿದ್ದಾನೆ. ಕೊನೆಗೆ, ಬೈಕಿನಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನಲ್ಲದೆ, ಹೊರಗಡೆ ಪಾರಾಗದಂತೆ ಬಾಗಿಲು ಕೊಂಡಿ ಹಾಕಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಬೆಂದ ಗೃಹಿಣಿ ಚೀರಾಡಿದಾಗ ಅಕ್ಕಪಕ್ಕದವರು ಸೇರಿದಂತೆ ಎಲ್ಲರೂ ದೌಡಾಯಿಸಿದ್ದಾರೆ. ಬಾಗಿಲು ತೆರೆದು ಆಕೆಯ ಮೇಲೆ ನೀರು ಎರಚಿ, ಕೌದಿ ಹಾಕಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಈ ಗೃಹಿಣಿಯ ದೇಹ ಬೆಂಕಿಯಿಂದ ಸಂಪೂರ್ಣವಾಗಿ ಬೆಂದು ಹೋಗಿತ್ತು. ತಕ್ಷಣವೇ ಸುರಪುರ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಚಿಕಿತ್ಸೆಗೆ ಕಲಬುರ್ಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ.
ಇದಕ್ಕೂ ಪೂರ್ವದಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಕೆಯ ಹೇಳಿಕೆ (ಡೈಯಿಂಗ್ ಡೀಕ್ಲೆರೇಶನ್) ಪಡೆದಿದ್ದಾರೆ. ಗ್ರಾಮದ ಗಂಗೆಪ್ಪ ವಿರುದ್ಧ ಗೃಹಿಣಿ ದೂರಿದ್ದಾಳೆ. ಅತ್ಯಾಚಾರಕ್ಕೆ ಯತ್ನಿಸಿದಾಗ ಇದಕ್ಕೆ ಪ್ರತಿಭಟಿಸಿದ ತನ್ನ ಮೇಲೆ ಹಲ್ಲೆ ನಡೆಸಿದ ಗಂಗೆಪ್ಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಎಂದು ತಿಳಿಸಿದ್ದಾಳನ್ನಲಾಗಿದೆ.
ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಸುನಿಲ್ ಮೂಲಿಮನಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಡಾ. ವೇದಮೂರ್ತಿ ತಿಳಿಸಿದ್ದಾರೆ.
ನಿಲ್ಲದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:
ಶಹಾಪುರದಲ್ಲಿ ನಡೆದ ಮಹಿಳೆಯ ಮೇಲಿನ ಹೇಯ ಕೃತ್ಯ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿತ್ತು. ಆರಂಭದಲ್ಲಿ ಮಹಿಳೆಯ ನಡತೆಯನ್ನೇ ಪ್ರಶ್ನಿಸಿದ್ದ ಕೆಲವರು ಇದು ಹಳೆಯದ್ದು ಎಂದು ಸಬೂಬು ನೀಡುವ ಯತ್ನಕ್ಕಿಳಿದಿದ್ದರು. ಅಧಿವೇಶನದ ನಂತರ, ಎಚ್ಚೆತ್ತ ಪೊಲೀಸರು ಈ ಹಿಂದಿನದ್ದು ಎನ್ನಲಾದ, ಬೆಳಕಿಗೆ ಬಾರದ ಅನೇಕ ಪ್ರಕರಣಗಳ, ಬಾಲ್ಯವಿವಾಹಗಳ ಎಫ್‌ಐಆರ್ ದಾಖಲಿಸಿ ನಿಟ್ಟುಸಿರು ಬಿಟ್ಟಿದ್ದರು. ಇವುಗಳ ಮಧ್ಯೆ ಈ ಪ್ರಕರಣ ಆಘಾತ ಮೂಡಿಸಿದೆ.
ಮೊನ್ನೆ ಮೊನ್ನೆಯಷ್ಟೇ ನವವಿವಾಹಿತೆ, ಇಲ್ಲಿನ ಶಿಕ್ಷಕನೊಬ್ಬನ ಪತ್ನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆಕೆಯ ಪಾಲಕರು ಹಾಗೂ ಶಿಕ್ಷಕರ ಸಂಘದ ಪ್ರಮುಖರ ಮಧ್ಯಸ್ಥಿಕೆಯಲ್ಲಿ ಬಗೆಹರಿದು, ಇದೊಂದು ಹೊಟ್ಟೆನೋವಿನ ಬಾಧೆ ತಾಳದೆ ಆತ್ಮಹತ್ಯೆ ಎಂಬ ಷರಾ ಬರೆದಂತಿತ್ತು. ಲಕ್ಷಾಂತರ ರುಪಾಯಿಗಳ (ಅ)ವ್ಯವಹಾರ ಇಲ್ಲಿ ನಡೆದಿದೆ ಅನ್ನೋ ಮಾತುಗಳು ಶಿಕ್ಷಕರಲ್ಲೇ ಪಿಸುಗುಟ್ಟಿದ್ದವು. ಹಣದ ದಾಹದಿಂದಾಗಿ ತನಿಖೆಯೊಂದು ಆರಂಭಿಕ ಹಂತದಲ್ಲೇ ಹೂತು ಹೋಗಿದೆ ಎನ್ನಲಾಗಿದೆ.