ನವದೆಹಲಿ (ಮಾ​ 01) ಅತ್ಯಾಚಾರದ ಆರೋಪದ ಮೇಲೆ ಬಂಧಿತನಾಗಿದ್ದ ಸರ್ಕಾರಿ ಸೇವೆಯಲ್ಲಿದ್ದ ವ್ಯಕ್ತಿ ಬಂಧನದಿಂದ ತಪ್ಪಿಸಿಕೊಳ್ಳಲು ರಕ್ಷಣೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ, ಜಾಮೀನು ಅರ್ಜಿಯ ವಿಚಾರಣೆ ವೇಳೆ ಸರ್ಕಾರಿ ನೌಕರನನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್​, ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳೆಯನ್ನು ಮದುವೆಯಾಗಲು ಸಾಧ್ಯವೇ? ಎಂದು ಕೇಳಿದೆ.

ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಸುಭಾಷ್ ಚೌವಾಣ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಇಂತಹ ಪ್ರಶ್ನೆ ಕೇಳಿದೆ. ಮೋಹಿತ್ ಸುಭಾಷ್ ಚೌವಾಣ್ ವಿರುದ್ಧ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿದ್ದು,  ಆತನ ಮೇಲೆ ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾನೂನಿನ ಅಡಿಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ಮುಖ್ಯ ನಾಯಮೂರ್ತಿ ಎಸ್‌ಎ ಬೋಬ್ಡೆ ಅವರ ಮುಂದೆ ಬಂದಿತ್ತು.

ಬಾಲಕಿಯನ್ನು ಮದುವೆಯಾಗುತ್ತೀರಿ ಎಂದರೆ ನೆರವು ನೀಡಬಹುದು. ಇಲ್ಲವಾದರೆ ನೀವು ಕೆಲಸ ಕಳೆದುಕೊಂಡು ಜೈಲು ಸೇರಬೇಕಾಗುತ್ತದೆ ಎಂದಿದ್ದಾರೆ.

ಅಂತರ್ ಜಾತಿ ವಿವಾಹದ ಬಗ್ಗೆ ಮಹತ್ವದ ಮಾತನಾಡಿದ ಸುಪ್ರೀಂ

ಆರೋಪಿ ಮತ್ತು ಹದಿನಾರು ವರ್ಷದ ಬಾಲಕಿ ದೂರದ ಸಂಬಂಧಿಕರು. ಆಕೆಯ ಕಾಲು ಮತ್ತು ಕೈ ಕಟ್ಟಿ ಮೊದಲ ಸಾರಿ ದೌರ್ಜನ್ಯ ಎಸಗಿದ್ದು ನಂತರ ಇದೇ ಚಾಳಿಯನ್ನು ಮುಂದುವರಿಸಿದ್ದ.  ಬಾಲಕಿ ಒಂಭತ್ತನೇ ತರಗತಿಯಲ್ಲಿರುವಾಗಲೇ ದೌರ್ಜನ್ಯ ಎಸಗಿದ್ದ ಎನ್ನುವುದು ಆರೋಪ.

ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನವೂ ನಡೆದು ಬಾಲಕಿಗೆ 18 ತುಂಬಿದ ಮೇಲೆ ಮದುವೆ ಮಾಡಿಕೊಡುವುದು ಎಂದು ಆಗಿತ್ತು. ನಂತರ ಆರೋಪಿ ಅಪಸ್ವರ ತೆಗೆದಿದ್ದು ದೂರು ಸಲ್ಲಿಕೆಯಾಗಿದೆ. ಆದರೆ ಸೋಶಿಯಲ್ ಮೀಡಿಯಾ ವಿಭಿನ್ನ ಪ್ರತಿಕ್ರಿಯೆ ನೀಡಿದೆ.

ಅತ್ಯಾಚಾರಿಯನ್ನು ಏಕೆ ಮದುವೆಯಾಗಬೇಕು. ಆತನಿಗೆ ಕ್ರೂರ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದೆ. ಅಪರಾಧಕ್ಕೆ ಶಿಕ್ಷೆ ನೀಡುವ ಬದಲು ಇದು ಬಹುಮಾನ ನೀಡಿದಂತೆ ಆಗುತ್ತದೆ ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇನು ಸುಪ್ರೀಂ ಕೋರ್ಟೋ ಅಥವಾ ಹಳ್ಳಿ ಪಂಚಾಯಿತಿಯೋ ಎಂದು ಪ್ರಶ್ನೆ ಮಾಡಿದ್ದಾರೆ.