ಲಕ್ನೋ(ಏ.03): ಟ್ಯೂಷನ್ ಮುಗುಸಿ ಮನೆಗೆ ಮರಳುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಉತ್ತರ ಪ್ರದೇಶದಲ್ಲಿ ನಡೆದಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಕೇಶವ್ ಕುಮಾರ್ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ಬರೆದಿಟ್ಟಿದ್ದ ಡೆತ್‌ ನೋಟ್‌ ಆಧರಿಸಿ ಇವರನ್ನು ಬಂಧಿಸಿದ್ದೇವೆ. ಇನ್ನುಳಿದ ಇಬ್ಬರಿಗಾಗಿ ಹುಟುಕಾಟ ಮುಂದುವರೆಸಿದ್ದೇವೆ ಎಂದು ತಿಳಿಸಿದ್ದಾರೆ.

ಬಾಲಕಿ ತನ್ನ ಡೆತ್‌ ನೋಟ್‌ನಲ್ಲಿ ಹತ್ತಿರದ ಹಳ್ಳಿಯವರಾದ ಲಖನ್ ಹಾಗೂ ವಿಕಾಸ್‌ ಸೇರಿ ನಾಲ್ವರ ಹೆಸರನ್ನು ಉಲ್ಲೇಖಿಸಿ, ಇವರು ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಬರೆದಿದ್ದಾಳೆ. ಲಖನ್ ಹಾಗೂ ವಿಕಾಸ್‌ನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರಿಗಾಗಿ ಲುಕ್‌ಔಟ್‌ ನೋಟೀಸ್ ಜಾರಿಗೊಳಿಸಿದ್ದಾರೆ.

ಮನೆಗೆ ಮರಳಿದ್ದ ಬಾಲಕಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದಳು. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೂಡಲೇ ಹೆತ್ತವರು ಮಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಾಳೆ.