ಉನ್ನಾವೋ (ಡಿ.07):  ಉನ್ನಾವ್‌ ಪ್ರಕರಣ ಸಂತ್ರಸ್ತೆಗೆ, ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಆರೋಪಿಗಳೇ ಗುರುವಾರ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಘಟನೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಇದೀಗ ಆಕೆಯ ಕುಟುಂಬ ಸದಸ್ಯರಿಗೂ ಜೀವ ಬೆದರಿಕೆ ಕರೆ ಮಾಡಲಾಗಿದೆ.

ಶುಕ್ರವಾರ ಸಂತ್ರಸ್ತೆಯ ಚಿಕ್ಕಪ್ಪನಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿಗಳ ಸಂಬಂಧಿಕರು, ಕೇಸು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆಯ ಚಿಕ್ಕಪ್ಪ ಉನ್ನಾವೋದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

 ‘ಆತ್ಯಾಚಾರದ ಸಂಬಂಧ ನೀಡಿರುವ ದೂರು ಕೈಬಿಡದೇ ಇದ್ದರೆ, ನಿನ್ನ ಅಂಗಡಿಗೂ ಬೆಂಕಿ ಇಡಲಾಗುವುದು, ನಿನ್ನನ್ನೂ ಬದುಕಲು ಬಿಡುವುದಿಲ್ಲ. ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅನಾಮಿಕರು ಬೆದರಿಕೆ ಹಾಕಿದ್ದಾರೆ. 

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!...

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ‘ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ ಮಾಹಿತಿ ಬಂದಿದೆ. ಅವರಿಗೆ ಸೂಕ್ತ ಭದ್ರತೆ ನೀಡಲಾಗುವುದು. ಯಾವುದೇ ಅವಘಡಕ್ಕೆ ಆಸ್ಪದ ನೀಡುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.