ಬೆಂಗಳೂರು(ಫೆ.03): ಜ್ಯೋತಿಷಿ ಆನಂದ್‌ ಗುರೂಜಿ ಹಾಗೂ ಕಾಂಗ್ರೆಸ್‌ ಮುಖಂಡ ಸುಧೀಂದ್ರ ವಿರುದ್ಧ ಮಾನಹಾನಿ ಬರಹ ಪ್ರಕಟಿಸುವುದಾಗಿ ಬೆದರಿಸಿ 50 ಲಕ್ಷ ಹಣ ಸುಲಿಗೆಗೆ ಯತ್ನಿಸಿದ ಆರೋಪದ ಮೇಲೆ ಸಂಘಟನೆಯೊಂದರ ಅಧ್ಯಕ್ಷ ಸೇರಿದಂತೆ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರದ ಕೃಷ್ಣಮೂರ್ತಿಗೌಡ ಹಾಗೂ ಗಿರಿನಗರ ವೆಂಕಟೇಶ್‌ ಬಂಧಿತರಾಗಿದ್ದು, ಈ ಇಬ್ಬರು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಮತ್ತೊಬ್ಬ ಆರೋಪಿ, ಸ್ಥಳೀಯ ಪತ್ರಿಕೆಯ ಸಂಪಾದಕ ಜೆ.ಕೆ.ವೇಲು ಅಲಿಯಾಸ್‌ ಮಾರ್ಕೆಟ್‌ ವೇಲು ತಲೆಮರೆಸಿಕೊಂಡಿದ್ದಾನೆ.

ಗುರೂಜಿ ಪರವಾಗಿ ಕಾಂಗ್ರೆಸ್‌ ಮುಖಂಡ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಇ.ಎಸ್‌.ಸುಧೀಂದ್ರ ಅವರ ಆಪ್ತ ಸಹಾಯಕ ಬಿ.ಆರ್‌.ನಾಗರಾಜ್‌ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಸಂಬಂಧ : ವಿವಸ್ತ್ರಗೊಳಿಸಿ ಫೋಟೊ ತೆಗೆದಿದ್ದಕ್ಕೆ ಯುವಕ ಸೂಸೈಡ್

ಹಲವು ತಿಂಗಳಿಂದ ಕಾಟ:

ಕೆಲ ತಿಂಗಳಿಂದ ಸುಧೀಂದ್ರ ಅವರಿಗೆ ಸ್ಥಳೀಯ ಪತ್ರಿಕೆ ಸಂಪಾದ ವೇಲು, ಕೃಷ್ಣಮೂರ್ತಿಗೌಡ ಹಾಗೂ ಯುವ ಕರ್ನಾಟಕ ಸಂಘಟನೆ ಅಧ್ಯಕ್ಷ ಎ.ಸಿ.ವೆಂಕಟೇಶ್‌ ಕರೆ ಮಾಡಿ, ನಿಮ್ಮ ಮತ್ತು ಆನಂದ ಗುರೂಜಿ ಅವರ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತು ಕೆಲವು ಮಾಹಿತಿ ಸಂಗ್ರಹಿಸಿದ್ದೇವೆ. ಈ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಈ ಸುದ್ದಿ ಪ್ರಕಟಿಸಬಾರದು ಎಂದರೆ 50 ಲಕ್ಷ ಕೊಡಬೇಕು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಕೊನೆಗೆ 26 ಲಕ್ಷವಾದರೂ ಗುರೂಜಿಯಿಂದ ಕೊಡಿಸಬೇಕು ಎಂದು ಬೆದರಿಸುತ್ತಿದ್ದರು. ಹೀಗೆ ಸುಳ್ಳು ಪ್ರಕಟಿಸುವುದಾಗಿ ಹಾಗೂ ನಮಗೆ ಮಾರಕಾಸ್ತ್ರಗಳನ್ನು ತೋರಿಸಿ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜ.21ರಂದು ನಾಗರಾಜ್‌ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು, ಕೃಷ್ಣಮೂರ್ತಿ ಹಾಗೂ ವೆಂಕಟೇಶ್‌ನನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.