ಬೆಂಗಳೂರು(ಡಿ. 02): ನಕಲಿ ದಾಖಲೆಗಳನ್ನು ಸಲ್ಲಿಸಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ಪಡೆಯಲು ಮುಂದಾಗಿದ್ದ ಮೂವರು ಅಭ್ಯರ್ಥಿಗಳನ್ನು ಪತ್ತೆ ಹಚ್ಚಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ವಿದ್ಯಾರ್ಥಿಗಳು ಮತ್ತು ನಕಲಿ ದಾಖಲೆಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ.

ಒಬ್ಬ ಪುರುಷ ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳು ಮಂಗಳವಾರ ಕೆಇಎಗೆ ಕಚೇರಿಗೆ ಬಂದು ದಾಖಲಾತಿಗಳನ್ನು ಸಲ್ಲಿಸುವಾಗ ಸಿಕ್ಕಿ ಬಿದ್ದಿದ್ದು, ದಾಖಲೆಗಳು ನಕಲಿ ಎಂದು ಖಚಿತಪಟ್ಟ ಕೂಡಲೇ ಅಧಿಕಾರಿಗಳು ಮಲ್ಲೇಶ್ವರ ಪೊಲೀಸರಿಗೆ ಮಾಹಿತಿ ಕೊಟ್ಟು, ವಶಕ್ಕೆ ನೀಡಿದ್ದಾರೆ.

ಕೆಇಎ ಯುಜಿ ನೀಟ್‌ನಲ್ಲಿ ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿರುವ ಪ್ರಕಾರ ಅಭಯ್‌ ಗೌತಮ್‌ (ರೋಲ್‌ ನಂ-2001103170), ಪರಗಿ (2001203601) ಮತ್ತು ಮಹೀನ್‌ ನವಾಜ್‌(3107016064) ಅಭ್ಯರ್ಥಿಗಳು ಖಾಸಗಿ ಕೋಟಾದಡಿ ಬೆಂಗಳೂರು ಬಿಜಿಎಸ್‌ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌ ಮೆಡಿಕಲ್‌ ಸೈನ್ಸ್‌ ಸೀಟು ಪಡೆದುಕೊಂಡಿದ್ದಾರೆ.

ಎಸಿಬಿ ದಾಳಿ: ಲಂಚ ಸಮೇತ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿಗಳು

ಖಾಸಗಿ ಕೋಟಾದ ಸೀಟು ಪಡೆದ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಇಎ ನೈಜ ಆಂಕಪಟ್ಟಿಗಳನ್ನು ಸಲ್ಲಿಸಬೇಕಿದೆ. ಇದಕ್ಕಾಗಿ ಮಂಗಳವಾರ ಕೆಇಎ ಕಚೇರಿಗೆ ನೈಜ ಅಭ್ಯರ್ಥಿಗಳ ಬದಲು ಮಧು, ಪೂಜಾ, ಚೈತ್ರಾ ಎಂಬುವರು ಹಾಜರಾಗಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. 

ದಾಖಲೆಗಳಲ್ಲಿರುವ ಹೆಸರು ಮತ್ತು ಕಚೇರಿಗೆ ಆಗಮಿಸಿರುವ ಅಭ್ಯರ್ಥಿಗಳು ಬೇರೆಯಾಗಿದ್ದು, ಕೆಇಎ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಅಂಕಪಟ್ಟಿಗಳನ್ನು ಸಿಬಿಎಸ್‌ಸಿ ವೆಬ್‌ಸೈಟ್‌ ಮೂಲಕ ಪರಿಶೀಲಿಸಿದಾಗ, ಅಂಕಪಟ್ಟಿಮೇಲೆ ಮುದ್ರಣವಾಗಿರುವ ಅಭ್ಯರ್ಥಿಗಳ ಫೋಟೋ ಮಾತ್ರವಲ್ಲ, ಅಂಕಪಟ್ಟಿಗಳು ಸಹ ತಾಳೆಯಾಗದೇ ಇರುವುದು ಕಂಡು ಬಂದಿದೆ.

ತಪ್ಪು ಒಪ್ಪಿಕೊಂಡ ಅಭ್ಯರ್ಥಿಗಳು:

ಮೂವರು ಅಭ್ಯರ್ಥಿಗಳು ಅಧಿಕಾರಿಗಳಿಗೆ ತಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಸೇರಿದಂತೆ ಸಲ್ಲಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಖಾತರಿಯಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಅಭ್ಯರ್ಥಿಗಳನ್ನು ಪ್ರಶ್ನಿಸಲು ಆರಂಭಿಸಿದಾಗ ಮೊದಲಿಗೆ ಇಲ್ಲಸಲ್ಲದ ಕತೆ ಹೇಳಲು ಆರಂಭಿಸಿ ನಂತರ ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.

ನಿಜವಾದ ಅಭ್ಯರ್ಥಿಗಳಿಗೆ ನೋಟಿಸ್‌

ಮುಂದೆ ನೈಜ ಅಭ್ಯರ್ಥಿಗಳಿಗೆ ನೋಟಿಸ್‌ ನೀಡಲು ಪ್ರಾಧಿಕಾರ ತೀರ್ಮಾನಿಸಿದೆ. ಅವರಿಂದ ಬರುವ ಸ್ಪಷ್ಟನೆ ನಂತರ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಒಂದು ವರ್ಷ ಸೀಟು ಪಡೆಯದಂತೆ ಶಿಕ್ಷೆ ವಿಧಿಸುತ್ತದೆ. ಆದರೆ, ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಹೋಗಿ ನಮಗೂ ನಕಲಿ ದಾಖಲೆ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳಿಗೂ ಸಂಬಂಧವಿಲ್ಲ ಎಂದು ಹೇಳಿ ತಡೆ ತರುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಪ್ರಾಧಿಕಾರದ ಮೂಲಗಳು.

ಸೀಟ್‌ ಬ್ಲಾಕಿಂಗ್‌ ಮಾಫಿಯಾ ಕೈವಾಡ?

ಕೆಇಎ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಖಾಸಗಿ ಕಾಲೇಜುಗಳ ಸೀಟ್‌ ಬ್ಯಾಕಿಂಗ್‌ ಮಾಫಿಯಾ ಇದರ ಹಿಂದೆ ಇರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ತನಿಖಾ ಸಂಸ್ಥೆಗೆ ಇದರ ತನಿಖೆ ಒಪ್ಪಿಸಬೇಕು. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಇದರ ಹಿಂದೆ ಯಾರಾರ‍ಯರಿದ್ದಾರೆ?, ಹೇಗೆ ಸೀಟ್‌ ಬ್ಲಾಕ್‌ ನಡೆಯುತ್ತದೆ? ಎಂಬುದು ಹೊರಬರುತ್ತದೆ ಎನ್ನುತ್ತಾರೆ.