ಚೆನ್ನೈ(ಜೂ.29): ಒಂದೇ ಕುಟುಂಬದ ಇಬ್ಬರು ವರ್ತಕರು ಪೊಲೀಸರ ಮಾರಣಾಂತಿಕ ಹಲ್ಲೆಯಿಂದ ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಇಂಥದ್ದೇ ಮತ್ತೊಂದು ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಭೂ ವ್ಯಾಜ್ಯದ ವಿಚಾರಣೆಗಾಗಿ ವ್ಯಕ್ತಿಯನ್ನು ಠಾಣೆಗೆ ಕರೆಸಿಕೊಂಡಿದ್ದ ವೀರಕೇರಲಂಪುದೂರ್‌ ಠಾಣೆ ಪೊಲೀಸರು, ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ಜರ್ಜರಿತರಾಗಿದ್ದ ವ್ಯಕ್ತಿಯು 15 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾಗ್ಯೂ, ಗುಣಮುಖರಾಗದೆ ಸಾವನ್ನಪ್ಪಿದ್ದಾರೆ. ಹೀಗೆ, ಪೊಲೀಸರ ಮುಂಗೋಪಕ್ಕೆ ಬಲಿಯಾದ ಸಂತ್ರಸ್ತನನ್ನು ಆಟೋ ಚಾಲಕ ಎನ್‌. ಕುಮಾರೇಸನ್‌ ಎಂದು ಗುರುತಿಸಲಾಗಿದೆ.

ತಮಿಳ್ನಾಡು ಲಾಕಪ್‌ ಡೆತ್‌ಗೆ ವ್ಯಾಪಕ ಆಕ್ರೋಶ: ಗಾಯದಿಂದ ತೋಯ್ದು ತೊಪ್ಪೆಯಾದ 8 ಲುಂಗಿ!

ಭೂ ವ್ಯಾಜ್ಯದ ವಿಚಾರಣೆ ಮುಗಿಸಿ ಮನೆಗೆ ಬಂದಿದ್ದ ಕುಮಾರೇಸನ್‌ ರಕ್ತ ಕಾರಿದ್ದರು. ಮೊದಲಿಗೆ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆ ನಂತರ ತಿರುಣಲ್ವೆಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಕುಮಾರೇಸನ್‌ ಅವರ ಕಿಡ್ನಿ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಗಗಳು ಸಂಪೂರ್ಣ ಹಾನಿಯಾಗಿದ್ದನ್ನು ವೈದ್ಯರು ಪತ್ತೆ ಮಾಡಿದ್ದಾರೆ.

ಈ ವೇಳೆ ಪೊಲೀಸರು ತಮ್ಮ ಮೇಲೆ ನಡೆಸಿದ ಕ್ರೌರ್ಯದ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ, ಈ ವಿಚಾರವನ್ನು ಹೊರಗೆ ಯಾರಿಗಾದರೂ ತಿಳಿಸಿದ್ದಲ್ಲಿ, ತಂದೆಯನ್ನು ಜೀವಂತವಾಗಿ ಉಳಿಸಲ್ಲ ಎಂದು ಬೆದರಿಕೆ ಹಾಕಿದ್ದರು ಎಂದೂ ಕುಮಾರೇಸನ್‌ ದೂರಿದ್ದಾರೆ. ಜನ ಸಾಮಾನ್ಯರ ರಕ್ಷಣೆಗಾಗಿ ಇರುವ ಪೊಲೀಸರೇ ಈ ರೀತಿ ಗಲ್ಲಿ ರೌಡಿಗಳಂತೆ ವರ್ತಿಸಿದರೆ ಹೇಗೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಆ.14ಕ್ಕೆ ಜೈಲಿನಿಂದ ಶಶಿಕಲಾ ನಟರಾಜನ್ ಬಿಡುಗಡೆ; BJP ನಾಯಕನ ಟ್ವೀಟ್‌ಗೆ ತಮಿಳುನಾಡು ಗಡಗಡ

ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರ ಪ್ರತಿಭಟನೆ ನಡುವೆಯೇ, ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಕಾನ್‌ಸ್ಟೇಬಲ್‌ ವಿರುದ್ಧ ದೂರು ದಾಖಲಾಗಿದೆ.