ಬೆಂಗಳೂರು(ಆ.09): ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಗೆ ಆಸ್ತಿ ಹಾಗೂ ಚಿನ್ನಾಭರಣ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಸುಪಾರಿ ಕೊಟ್ಟು ತಂದೆಯನ್ನು ಹತ್ಯೆ ಮಾಡಿಸಿರುವ ಪ್ರಕರಣವನ್ನು ಪೂರ್ವ ವಿಭಾಗದ ಪೊಲೀಸರು ಬೇಧಿಸಿದ್ದಾರೆ.

ಸರ್‌ ಎಂ.ವಿ.ನಗರದ ನಿವಾಸಿ ಪನ್ನೀರ್‌ ಸೆಲ್ವಂ (52) ಕೊಲೆಯಾದವರು. ಈ ಸಂಬಂಧ ಕೊಲೆಯಾದ ಪನ್ನೀರ್‌ ಸೆಲ್ವಂ ಪುತ್ರ ರಾಜೇಶ್‌ ಕುಮಾರ್‌(26), ತಮಿಳುನಾಡಿನ ವೇಲೂರು ಜಿಲ್ಲೆಯ ಪಾರ್ಥಿಬನ್‌ (29), ಶಾಂತಿ ಲೇಔಟ್‌ ನಿವಾಸಿ ಸ್ಟ್ಯಾನ್ಲಿ (25) ಹಾಗೂ ಎನ್‌ಆರ್‌ಐ ಲೇಔಟ್‌ನ ಆನಂದ್‌ (21) ಬಂಧಿತರು. ಮತ್ತೊಬ್ಬ ಆರೋಪಿ ಗಣೇಶ್‌ ಸೇರಿದಂತೆ ಹಲವು ಮಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

ಪನ್ನೀರ್‌ ಸೆಲ್ವಂ ಅವರು ಮೂಲತಃ ತಮಿಳುನಾಡಿನವರಾಗಿದ್ದು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಕುಟುಂಬದೊಂದಿಗೆ ನೆಲೆಸಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಸೆಲ್ವಂ ಅವರು 5 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದರು. ಸೆಲ್ವಂ ಅವರ ಪುತ್ರ ಆರೋಪಿ ರಾಜೇಶ್‌ಗೆ ವಿವಾಹವಾಗಿದ್ದು, ಒಂದು ಮಗು ಇದೆ. ಕೆಲಸಕ್ಕೆ ಹೋಗದೆ ಆರೋಪಿ ಓಡಾಡಿಕೊಂಡಿದ್ದ.

ಹಣಕಾಸಿನ ವಿಚಾರವಾಗಿ ತಂದೆ ಬಳಿ ಆರೋಪಿ ಆಗ್ಗಾಗ್ಗೆ ಜಗಳ ಮಾಡುತ್ತಿದ್ದ. ತಂದೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಮಹಿಳೆಗೆ ಹಣ, ಚಿನ್ನಾಭರಣ, ಆಸ್ತಿ ನೀಡುತ್ತಿದ್ದಾರೆ ಎಂದು ಜಗಳ ತೆಗೆದಿದ್ದ. ಅಲ್ಲದೆ, ನಿವೇಶನವೊಂದನ್ನು ಖರೀದಿಸಿ ರಾಜೇಶ್‌ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಹಣ ಕೇಳಿದಾಗ ತಂದೆ ಸೆಲ್ವಂ ಹಣ ನೀಡಲು ನಿರಾಕರಿಸಿದ್ದರು. ಅಲ್ಲದೆ, ಮನೆಯ ಎಲ್ಲಾ ಆಡಳಿತ ಮತ್ತು ಹಣದ ವ್ಯವಹಾರ ವಹಿಸುವಂತೆ ಒತ್ತಾಯ ಮಾಡುತ್ತಿದ್ದ. ಇದೇ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಹಲವು ಬಾರಿ ಜಗಳ ನಡೆದಿತ್ತು.

ತಂದೆಯನ್ನು ಹತ್ಯೆ ಮಾಡಿಸಿದರೆ ಆಸ್ತಿ ತುರ್ತಾಗಿ ನನಗೆ ಸಿಗುತ್ತದೆ ಎಂದು ಭಾವಿಸಿದ್ದ ಆರೋಪಿ, ಸ್ನೇಹಿತ ಪಾರ್ಥಿಬನ್‌ ಬಳಿ ವಿಷಯ ಕೊಲೆ ವಿಷಯ ಪ್ರಸ್ತಾಪಿಸಿದ್ದ. ಪಾರ್ಥಿಬನ್‌ ಸ್ನೇಹಿತನ ತಂದೆ ಹತ್ಯೆ ಮಾಡಲು ಒಪ್ಪಿದ್ದ. ಅದರಂತೆ ಸೆಲ್ವಂ ಅವರನ್ನು ಕಾರಿನಲ್ಲಿ ಅಪಹರಣ ಮಾಡಿ ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಕೆ.ಜಿ.ಹಳ್ಳಿಯಲ್ಲಿರುವ ಟ್ರಾವೆಲ್ಸ್‌ವೊಂದರಲ್ಲಿ ಬೊಲೆನೊ ಕಾರನ್ನು ಬಾಡಿಗೆಗೆ ಪಡೆದಿದ್ದರು.
ಸೆಲ್ವಂ ಅವರು ಆ.7ರಂದು ಬೆಳಗ್ಗೆ 6.30ರ ಸುಮಾರಿಗೆ ಬೈಕ್‌ನಲ್ಲಿ ವಿಜಿನಾಪುರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಆರೋಪಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದರು.

ವಿಷದ ಇಂಜಕ್ಷನ್‌ ನೀಡಿ ಹತ್ಯೆ

ಅಪರಹಣದ ಬಳಿಕ ಆರೋಪಿಗಳು ಕಾರಿನಲ್ಲಿ ಸೆಲ್ವಂ ಅವರನ್ನು ಥಳಿಸಿದ್ದರು. ಬಳಿಕ ಗಣೇಶ್‌ ವಿಷಕಾರಿ ಇಂಜಕ್ಷನ್‌ನ್ನು ಸೆಲ್ವಂ ಅವರಿಗೆ ಚುಚ್ಚಿದ್ದ. ಎರಡು ಗಂಟೆ ಕಾರಿನಲ್ಲಿ ಸುತ್ತಾಡಿದ ಬಳಿಕ ಸೆಲ್ವಂ ಅವರು ಮೃತಪಟ್ಟಿರುವುದನ್ನು ಆರೋಪಿಗಳು ದೃಢಪಡಿಸಿಕೊಂಡು, ಬಳಿಕ ಮೃತ ದೇಹವನ್ನು ಕೋಲಾರ ಜಿಲ್ಲೆಯ ವೇಮ್‌ಗಲ್‌ ಸಮೀಪದ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಇನ್‌ಸ್ಪೆಕ್ಟರ್‌ ಕೆ.ಜಿ.ಸತೀಶ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ತಂದೆ ಅಪಹರಣವಾದ ಬಗ್ಗೆ ರಾಜೇಶ್‌ ಖುದ್ದು ಠಾಣೆಗೆ ಬಂದು ದೂರು ನೀಡಿದ್ದ. ತಂದೆ ಅಪಹರಣವಾದ ಬಗ್ಗೆ ಸ್ವಲ್ಪವೂ ಆತನ ಮುಖದಲ್ಲಿ ಆತಂಕ ಕಾಣಿಸಲಿಲ್ಲ. ರಾಜೇಶ್‌ನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ, ಆತ ಸಾಲ ಮಾಡಿಕೊಂಡಿದ್ದು, ತಂದೆ ಬಳಿ ಆಗ್ಗಾಗ್ಗೆ ಜಗಳವಾಡುತ್ತಿದ್ದ ವಿಚಾರ ಗೊತ್ತಾಯಿತು. ಸೆಲ್ವಂ ಅವರು ಅಪಹರಣವಾದ ದಿನ ಆರೋಪಿ ಯಾವುದೇ ಅನುಮಾನ ಮೂಡಬಾರದು ಎಂಬ ಕಾರಣಕ್ಕೆ ಮೊಬೈಲ್‌ನ್ನು ಕೂಡ ಬಳಕೆ ಮಾಡಿರಲಿಲ್ಲ. ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಎಂದು ತನಿಖಾಧಿಕಾರಿಗಳು ವಿವರಿಸಿದರು.

10 ಲಕ್ಷಕ್ಕೆ ಸುಪಾರಿ

ಆರೋಪಿ ತಂದೆ ಹತ್ಯೆ ಮಾಡಿಸಲು .10 ಲಕ್ಷ ಸುಪಾರಿ ನೀಡಿದ್ದು, ಈ ಪೈಕಿ 3 ಲಕ್ಷವನ್ನು ಮುಂಗಡವಾಗಿ ನೀಡಿದ್ದ. 3 ಲಕ್ಷವನ್ನು ಬೇರೊಬ್ಬರಿಂದ ಸಾಲ ಮಾಡಿ ತಂದಿದ್ದ. ಹಿಂದೆ ಕೊಲೆ ಯತ್ನ ವಿಫಲಗೊಂಡು ಸೆಲ್ವಂ ಅವರು ಆಸ್ಪತ್ರೆ ಸೇರಿದಾಗ ಸೆಲ್ವಂ ಚಿಕಿತ್ಸೆಗೆ ಸುಮಾರು 2.5 ಲಕ್ಷ ತಗುಲಿತ್ತು. ಈ ಬಾರಿ ಹೇಗಾದರೂ ತಂದೆಯನ್ನು ಹತ್ಯೆ ಮಾಡುವಂತೆ ಪಾರ್ಥಿಬನ್‌ಗೆ ಸೂಚಿಸಿದ್ದ. ಪಾರ್ಥಿಬನ್‌ ಸೇರಿದಂತೆ ಎಲ್ಲ ಆರೋಪಿಗಳು ಕಾರು ಚಾಲಕರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು

ಮೂರ್ನಾಲ್ಕು ಬಾರಿ ಕೊಲೆಗೆ ವಿಫಲ ಯತ್ನ

ಆರೋಪಿಗಳು ಸುಮಾರು ಐದು ತಿಂಗಳಿಂದ ಸೆಲ್ವಂ ಹತ್ಯೆಗೆ ಮೂರ್ನಾಲ್ಕು ಬಾರಿ ವಿಫಲ ಯತ್ನ ನಡೆಸಿದ್ದಾರೆ. ಮಾಚ್‌ರ್‍ 16ರಂದು ವಿಬ್‌ಗಯಾರ್‌ ಸಮೀಪ ಒಮ್ಮೆ ತಲೆಗೆ ಬಲವಾದ ಪೆಟ್ಟು ಹೊಡೆದು ಪರಾರಿಯಾಗಿದ್ದರು. ಅದೃಷ್ಟವಶಾತ್‌ ಆಸ್ಪತ್ರೆಗೆ ಸೇರಿದ್ದ ಸೆಲ್ವಂ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿತ್ತು. ಆದರೆ ಸೆಲ್ವಂ ಅವರು ತನಿಖೆಗೆ ಸಹಕಾರ ನೀಡಿರಲಿಲ್ಲ. ಪೊಲೀಸರು ಸೆಲ್ವಂ ಅವರನ್ನು ಪುತ್ರ ರಾಜೇಶ್‌ ತಂದೆ ಠಾಣೆಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ. ರಾಜೇಶ್‌ ಮೇಲೆ ಮನೆಯಲ್ಲಿ ಯಾರಿಗೂ ಅನುಮಾನ ಬಂದಿರಲಿಲ್ಲ ಎಂದು ಡಿಸಿಪಿ ಶರಣಪ್ಪ ತಿಳಿಸಿದರು.