ಬೆಂಗಳೂರು(ಫೆ.03): ಕುಡಿದು ಬಂದು ಮನೆಯಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯನ್ನು ಪುತ್ರನೊಬ್ಬ ಮುದ್ದೆ ಕೋಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಣಪತಿ ನಗರ ನಿವಾಸಿ ದೊಡ್ಡಚೌಡಪ್ಪ (56) ಮೃತರು. ಘಟನೆ ಸಂಬಂಧ ಪುತ್ರ ಗಹನ್‌ (19) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೊಡ್ಡ ಚೌಡಪ್ಪ ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನವರಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರರ ಜತೆ ಹಲವು ವರ್ಷಗಳಿಂದ ಗಣಪತಿ ನಗರದಲ್ಲಿ ನೆಲೆಸಿದ್ದರು. ಚೌಡಪ್ಪ ಸಿಂಡಿಕೇಟ್‌ ಬ್ಯಾಂಕ್‌ವೊಂದರಲ್ಲಿ ಸಹಾಯಕರಾಗಿದ್ದು, ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದರು. ಸರಿಯಾಗಿ ಕೆಲಸಕ್ಕೆ ಹೋಗದ ಚೌಡಪ್ಪ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ತಂದೆಯ ಕುಡಿತದ ಚಟದಿಂದ ಮಕ್ಕಳು ರೋಸಿ ಹೋಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜ.28ರಂದು ರಾತ್ರಿ ದೊಡ್ಡ ಚೌಡಪ್ಪ ಕುಡಿದು ಮನೆಗೆ ಬಂದು ಗಲಾಟೆ ಮಾಡಿದ್ದ. ಈ ವೇಳೆ ಗಹನ್‌ ಮುದ್ದೆ ಕೋಲಿನಿಂದ ಎದೆ, ಬೆನ್ನಿಗೆ ಹೊಡೆದಿದ್ದ. ಹಲ್ಲೆಗೊಳಗಾದ ದೊಡ್ಡ ಚೌಡಪ್ಪ ಕೊಠಡಿಗೆ ಹೋಗಿ ನಿದ್ರೆಗೆ ಜಾರಿದ್ದರು. ಮರು ದಿನ ಮಧ್ಯಾಹ್ನ ಮೂರು ಗಂಟೆಯಾದರೂ ದೊಡ್ಡಚೌಡಪ್ಪ ನಿದ್ರೆಯಿಂದ ಎದ್ದೇಳದ ಹಿನ್ನೆಲೆಯಲ್ಲಿ ನೋಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೊದಲಿಗೆ ಸಹಜ ಸಾವು ಪ್ರಕರಣ ದಾಖಲಸಿಕೊಳ್ಳಲಾಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಮೃತ ದೇಹದ ಮೇಲೆ ಹಲ್ಲೆ ಗುರುತುಗಳಿರುವುದು ಪತ್ತೆಯಾಗಿದ್ದು, ಕೊಲೆ ಎಂದು ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಮೃತನ ಪುತ್ರನನ್ನು ಬಂಧಿಸಲಾಗಿದೆ. ಗಹನ್‌ ನಗರದಲ್ಲಿ ಕಾಲೇಜೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾನೆ. ಕೋಪದಲ್ಲಿ ಮುದ್ದೆ ಕೋಲಿನಿಂದ ಹಲ್ಲೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.