ಓವರ್ ಟೇಕ್ ಭರದಲ್ಲಿ ಎಸ್‌ಯುವಿ ಕಾರು ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಆಟೋ ರಿಕ್ಷಾಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಒಡಿಶಾದಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋರಾಪುಟ್(ಜ.27) ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಆಗಮಿಸಿದ ಎಸ್‌ಯುವಿ ವಾಹನ ಓವರ್ ಟೇಕ್ ಮಾಡುವ ಭರದಲ್ಲಿ ಎರಡು ಬೈಕ್ ಹಾಗೂ ಆಟೋ ರಿಕ್ಷಾಗೆ ಡಿಕ್ಕಿಯಾಗಿದೆ. ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ನಡದೆ ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹೀದ್ ಲಕ್ಷ್ಮಣ್ ನಾಯಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ.
ಮೈಜುಮ್ಮೆನಿಸುವ ಅಪಘಾತದ ಸಿಸಿಟಿವಿ ದೃಶ್ಯ ಇದೀಗ ಬಹಿರಂಗವಾಗಿದೆ. ಈ ರಸ್ತೆಯಲ್ಲಿ ರಿಕ್ಷಾ, ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳು ಸಂಚರಿಸುತ್ತಿತ್ತು. ಆದರೆ ಬಿಳಿ ಬಣ್ಣದ ಎಸ್‌ಯುವಿ ವಾಹನ ಅತೀ ವೇಗವಾಗಿ ಆಗಮಿಸಿತ್ತು. ಮುಂಭಾಗದಲ್ಲಿ ತೆರಳುತ್ತಿದ್ದ ಅಟೋ ರಿಕ್ಷಾವನ್ನು ಓವರ್ ಟೇಕ್ ಮಾಡಲು ಎಸ್‌ಯುವಿ ಚಾಲಕ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದ. ಇದರ ಪರಿಣಾಮ, ಎದುರಿನಿಂದ ಬರುತ್ತಿದ್ದ ಟ್ರಾಕ್ಟರ್‌ನ್ನು ದಾಟಿ ಬಂದಿದ್ದ ಬೈಕ್ ಸವಾರನಿಗೆ ಎಸ್‌ಯುವಿ ಕಾರು ಮೊದಲು ಡಿಕ್ಕಿಯಾಗಿದೆ.
ಬಾಗಲಕೋಟೆಯಲ್ಲಿ ಭೀಕರ ಅಪಘಾತ: ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ದುರ್ಮರಣ
ಇದರ ಬೆನ್ನಲ್ಲೇ ಮುಂಭಾಗದಲ್ಲಿ ತನ್ನ ಪಾಡಿಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಕಾರು, ಎದುರಿನಿಂದ ಬಂದ ಬೈಕ್‌ಗೂ ಡಿಕ್ಕಿಯಾಗಿದೆ. ಆಟೋ ಪಲ್ಟಿಯಾಗಿ ರಸ್ತೆಯಲ್ಲೇ ನಜ್ಜುಗುಜ್ಜಾಗಿದೆ. ಈ ಆಟೋದಲ್ಲಿದ್ದ 15 ಪ್ರಯಾಣಿಕರ ಪೈಕಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು 2ನೇ ಬೈಕ್‌ನಲ್ಲಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ನಾಲ್ವರು ಪರಿಸ್ಥಿತಿ ಚಿಂತಾಜನಕವಾಗಿದೆ.
ಈ ಅಪಘಾತದ ದೃಶ್ಯಗಳು ರಸ್ತೆ ಬದಿಯಲ್ಲಿದ್ದ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇತ್ತ ಘಟನೆ ಬೆನ್ನಲ್ಲೇ ಜನ ಸೇರಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮಡಿದವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ.
ಬೈಕ್‌ಗೆ ಡಿಕ್ಕಿ ಹೊಡೆದು ಸ್ಪೋರ್ಟ್ಸ್ ಕಾರು ಪರಾರಿ: 20 ಅಡಿ ಎತ್ತರಕ್ಕೆ ಹಾರಿ ಬಿದ್ದ ಬೌನ್ಸರ್ ತಾರಕ್ ರಾಮ್ ಸಾವು
ಭೀಕರ ಅಪಘಾತಕ್ಕೆ ಎಸ್‌ಯುವಿ ಕಾರಿನ ವೇಗ ಹಾಗೂ ಓವರ್‌ಟೇಕ್ ಕಾರಣ ಎಂದು ಪ್ರಾಥಮಿಕ ಪೊಲೀಸ್ ವರದಿಗಳು ಹೇಳುತ್ತಿದೆ. ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಮಾಯಕ ಜೀವಗಳು ಬಲಿಯಾಗಿದೆ. ಇತ್ತ ಆಟೋ ರಿಕ್ಷಾದಲ್ಲಿ 15 ಮಂದಿ ಪ್ರಯಾಣಿಸುತ್ತಿರುವ ಮಾಹಿತಿ ಕಲೆ ಹಾಕಿರುವ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಟೋದಲ್ಲಿ ಜನರನ್ನು ಕೂರಿಸಿ ಪ್ರಯಾಣಿಸುತ್ತಿದ್ದ ಆಟೋದ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
