ಬೆಂಗಳೂರು, (ಮಾ.12): ಕೊಲೆ ಬೆದರಿಕೆ, ಸಾರ್ವಜನಿಕ ಆಸ್ತಿ ನಷ್ಟ , ಪಿಸ್ತೂಲು ತೋರಿಸಿ ಸುಲಿಗೆ ಹಾಗೂ ಮೊಬೈಲ್ ದರೋಡೆ ಪ್ರಕರಣಗಳ ಸಂಬಂಧ ರೌಡಿ ಸ್ಲಂ ಭರತನ 6 ಮಂದಿ ಸಹಚರರನ್ನು ಉತ್ತರ ವಿಭಾಗದ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಶ್ರೀನಿವಾಸ್,ಪ್ರವಿಣ್, ಮರಿಯಪ್ಪ,ಸೋಮ, ಚಾಣಿ ಅಲಿಯಾಸ್ ಅನಿಲ್, ನಂದೀಶ್ ಬಂಧಿತರು. 

ಜ.19ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ರಾಜಗೋಪಾಲನಗರ ವ್ಯಾಪ್ತಿಯ ಶ್ರೀನಿವಾಸ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿದ ಸಂಬಂಧ ಹಾಗೂ ಇದೇ ವ್ಯಾಪ್ತಿಯಲ್ಲಿ ಕೊಲೆ ಬೆದರಿಕೆ, ಸಾರ್ವಜನಿಕ ಆಸ್ತಿ ನಷ್ಟ ಉಂಟು ಮಾಡಿರುವ ಪ್ರಕರಣ ದಾಖಲಾಗಿತ್ತು.  

ಅದೊಂದು ಕಾರಣಕ್ಕೆ IPS  ಅಧಿಕಾರಿಗಳನ್ನೇ ಹತ್ಯೆ ಮಾಡಲು ಮುಂದಾಗಿದ್ದ ರೌಡಿಗಳು!

ಪೀಣ್ಯ ವ್ಯಾಪ್ತಿಯ ತಿಪ್ಪೇನಹಳ್ಳಿಯಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆ ಸಮೀಪದ ಹೊಂಬೇಗೌಡ ರಸ್ತೆ ಬಳಿ ಜ.21ರಂದು ರಾತ್ರಿ 12 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದ ಗಿರೀಶ್ ಎಂಬುವರಿಗೆ ಪಿಸ್ತೂಲು ತೋರಿಸಿ ಎದುರಿಸಿ ಹಣ ಹಾಗೂ ಮೂರು ಮೊಬೈಲ್ ಕಿತ್ತುಕೊಂಡು ಹೋಗಿದ್ದರು. 

ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಡಕಾಯಿತಿ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಎಲ್ಲಾ ಪ್ರಕರಣ ಆಧಾರದ ಮೇಲೆ ರಾಜಗೋಪಾಲನಗರ, ಸೋಲದೇವನಹ್ಳಿ ಮತ್ತು ಪೀಣ್ಯ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿಗಳು ಸಂಘಟಿತ ಗುಂಪು ಕಟ್ಟಿಕೊಂಡು ರಿಯಲ್ ಎಸ್ಟೆಂಟ್ ದಂಧೆ, ಅಪಹರಣ, ಕೊಲೆ, ಸುಲಿಗೆ, ದರೋಡೆ ಪ್ರರಣಗಳಲ್ಲಿ ತೊಡಗಿಕೊಂಡಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಸೋಲದೇವನಹಳ್ಳಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣ, ಶ್ರೀನಿವಾಸ್ ಮೇಲೆ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಪ್ರಕರಣ ಸೇರಿದಂತೆ 10 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು.

ಸ್ಲಂ ಭರತನ ಎಸ್ಕೇಪ್ ಮಾಡಿಸಿದ್ದು ಇದೇ ಆರೋಪಿಗಳು
ತಲೆ ಮರೆಸಿಕೊಂಡು ಉತ್ತರ ಪ್ರದೇಶದಲ್ಲಿದ್ದ ಸ್ಲಂ ಭರತನನ್ನ ಇತ್ತೀಚೆಗೆ ಬೆಂಗಳೂರಿಗೆ ಕರೆದುಕೊಂಡು ಬರುವಾಗ, ಈಗ ಬಂಧಿತ ಆರೋಪಿಗಳು ಪೊಲೀಸ್ರ ಮೇಲೆ ಫೈರಿಂಗ್ ನಡೆಸಿದ್ರು. ಬಳಿಕ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸ್ಲಂ ಭರತನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಕೆಡವಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸ್ಲಂ ಭರತ ಸಾವನ್ನಪ್ಪಿದ್ದ.