ಬೆಂಗಳೂರು[ಫೆ.05]: ರೌಡಿಶೀಟರ್‌ವೊಬ್ಬ ಪತ್ನಿ ಮೇಲಿನ ಕೋಪಕ್ಕೆ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವ ವಿಡಿಯೋ ವೈರಲ್‌ ಆಗಿದೆ.

ರೌಡಿಶೀಟರ್‌ ಕುಮಾರೇಶ್‌ ಎಂಬಾತ ಕೃತ್ಯ ಎಸಗಿದ್ದು, ಈತನ ಪತ್ನಿ ಸಹಾಯ ಕೇಳಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ವನಿತಾ ಸಹಾಯವಾಣಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕುಮಾರೇಶ್‌ ಪ್ರೀತಿಸಿ ವಿವಾಹವಾಗಿದ್ದ. ವಿವಾಹವಾದ ಬಳಿಕ ಆತ ರೌಡಿಶೀಟರ್‌, ದರೋಡೆಕೋರ ಎಂಬುದು ಪತ್ನಿಗೆ ಗೊತ್ತಾಗಿತ್ತು. ದಂಪತಿಗೆ ಗಂಡು ಮಗು ಆಗಿತ್ತು. ಆದರೂ ಮಹಿಳೆ ಹೇಗೋ ಆತನೊಂದಿಗೆ ಸಂಸಾರ ಮಾಡಿಕೊಂಡಿದ್ದರು. ಕಿರುಕುಳ ಹೆಚ್ಚಾದಾಗ ಆತನಿಂದ ದೂರವಾಗಿ ಪ್ರತ್ಯೇಕವಾಗಿ ನೆಲೆಸಿದ್ದರು.

ಪತ್ನಿ ತನ್ನನ್ನು ದೂರ ಮಾಡಿದ್ದಾಳೆ ಎಂಬ ಕೋಪಕ್ಕೆ ಆರೋಪಿ ಸುಮಾರು ನಾಲ್ಕೂವರೆ ವರ್ಷದ ತನ್ನ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ, ಕುಡಿದ ಮತ್ತಿನಲ್ಲಿ ಮಗು ಮಾತನಾಡುವುದನ್ನು ವಿಡಿಯೋ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆರೋಪಿಯ ಕಿರುಕುಳದಿಂದ ನೊಂದ ಮಹಿಳೆ ವನಿತಾ ಸಹಾಯವಾಣಿಯನ್ನು ಸಂಪರ್ಕಿಸಿದ್ದರು. ಮಹಿಳೆಯ ಕೌನ್ಸೆಲಿಂಗ್‌ ಮಾಡಿದಾಗ ಕುಮಾರೇಶ್‌ ರೌಡಿಶೀಟರ್‌ ಆಗಿದ್ದು, ಆತನೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಲ್ಲದೆ, ತನ್ನ ಮೂಗನ್ನು ಸ್ಕೂ್ರ ಡ್ರೈವರ್‌ನಿಂದ ಚುಚ್ಚಿ ಗಾಯಗೊಳಿಸಿರುವುದನ್ನು ಗಮನಕ್ಕೆ ತಂದಿದ್ದು, ಮಗುವಿನ ವಿಚಾರದಲ್ಲಿ ನಡೆದುಕೊಂಡ ವಿಕೃತಿ ಬಗ್ಗೆ ಬಾಯ್ಬಿಟ್ಟಿದ್ದರು. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ವನಿತಾ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.