ಬೆಂಗಳೂರು(ಮಾ.25): ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ಯೊಬ್ಬರ ಮನೆಗೆ ನುಗ್ಗಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಇಟ್ಟಮಡು ಸಮೀಪದ ಬಾಲಾಜಿ ನಗರದಲ್ಲಿ ನಡೆದಿದೆ.

ಬಾಲಾಜಿನಗರದ ನಿವಾಸಿ ಮಂಜುನಾಥ್‌ ಅಲಿಯಾಸ್‌ ದಡಿಯಾ ಮಂಜ (37) ಕೊಲೆಯಾದ ದುರ್ದೈವಿ. ಮನೆಯಲ್ಲಿ ಮಂಗಳವಾರ ರಾತ್ರಿ ಮಲಗಿದ್ದಾಗ ಮಂಜನ ಮೇಲೆ ದಾಳಿ ನಡೆಸಿ ದುಷ್ಕರ್ಮಿಗಳು ಕೊಂದು ಪರಾರಿಯಾಗಿದ್ದಾರೆ. ಪಕ್ಕದ ಕೋಣೆಯಲ್ಲಿ ಮಲಗಿದ್ದ ಮೃತನ ತಂದೆ ಎಚ್ಚರವಾದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು;  ಗಂಡನ ಕೊಲೆಗೆ ಪತ್ನಿ-ಪುತ್ರನೇ ಸುಪಾರಿ ಕೊಟ್ಟರು..

ರಿಯಲ್‌ ಎಸ್ಟೇಟ್‌ ಸೇರಿದಂತೆ ಇತರೆ ಹಣಕಾಸು ವ್ಯವಹಾರದಲ್ಲಿ ತೊಡಗಿದ್ದ ಮಂಜ, ತನ್ನ ತಂದೆ ಜತೆ ವಾಸವಾಗಿದ್ದ. ಮನೆಯಲ್ಲಿ ತಂದೆ ಮಗ ನಿದ್ರೆಗೆ ಜಾರಿದ್ದರು. ಆಗ ಮಧ್ಯರಾತ್ರಿ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿರುವ ದುಷ್ಕರ್ಮಿಗಳು, ಮಂಜನ ಕತ್ತು ಕುಯ್ದು ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದಾರೆ. ಕೆಲ ಹೊತ್ತಿನ ಬಳಿಕ ಪಕ್ಕದ ಕೋಣೆಯಲ್ಲಿ ಮಲಗಿದ್ದ ಆತನ ತಂದೆ ನಿದ್ರೆಯಿಂದ ಎಚ್ಚರವಾಗಿ ಹೊರ ಬಂದಿದ್ದಾರೆ. ಆಗ ಮುಂಬಾಗಿಲು ಮುರಿದಿರುವುದನ್ನು ನೋಡಿ ಆತಂಕಗೊಂಡ ಅವರು, ಪುತ್ರನಿಗೆ ಹೇಳಲು ಕೋಣೆಗೆ ಹೋದಾಗ ರಕ್ತದ ಮಡುವಿನಲ್ಲಿ ಮಗನ ಕಂಡು ಆಘಾತಗೊಂಡಿದ್ದಾರೆ. ಆಗ ಅವರ ಚೀರಾಟ ಕೇಳಿ ನೆರೆಹೊರೆಯವರು ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹತ್ಯೆಗೆ ನಿಖರ ಕಾರಣ ಸ್ಪಷ್ಟವಾಗಿಲ್ಲ. ಪೊಲೀಸ್‌ ಮಾಹಿತಿದಾರನಾಗಿಯೂ ಗುರುತಿಸಿಕೊಂಡಿದ್ದ ಮಂಜ, ಸ್ಥಳೀಯವಾಗಿ ನಡೆಯುವ ಅಕ್ರಮ ಚಟುವಟಕೆಗಳ ಕುರಿತು ಪೊಲೀಸರಿಗೆ ಗೌಪ್ಯ ಮಾಹಿತಿ ಕೊಡುತ್ತಿದ್ದ. ಈ ಹಿನ್ನೆಲೆಯಲ್ಲಿ ಏನಾದರೂ ಕೊಲೆಯಾಗಿದೆಯೇ ಎಂಬ ಬಗ್ಗೆ ಕೂಡಾ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.