ಬೆಂಗಳೂರು(ಏ.16): ತಾನು ರಿಯಲ್‌ ಎಸ್ಟೇಟ್‌ ಉದ್ಯಮಿ ಎಂದು ಫೇಸ್‌ಬುಕ್‌ನಲ್ಲಿ ಮಹಿಳೆಯರಿಗೆ ಗಾಳ ಹಾಕಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸುತ್ತಿದ್ದ ರೌಡಿಯೊಬ್ಬ ನಂದಿನಿ ಲೇಔಟ್‌ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ತುಮಕೂರು ಜಿಲ್ಲೆಯ ಮಧುಗಿರಿ ನಿವಾಸಿ ಎಂ.ಅಭಿಷೇಕ್‌ಗೌಡ ಅಲಿಯಾಸ್‌ ಧನುಷ್‌ ಬಂಧಿತನಾಗಿದ್ದು, ಆರೋಪಿಯಿಂದ .10.88 ಲಕ್ಷ ಮೌಲ್ಯದ 272 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಂದಿನಿ ಲೇಔಟ್‌ ಸಮೀಪದ ನೆಲೆಸಿರುವ 17 ವರ್ಷದ ಬಾಲಕಿಗೆ ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ವಂಚನೆ ಜಾಲ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೇಪಿಸ್ಟ್‌ ರೌಡಿ:

ಅಪರಾಧ ಹಿನ್ನೆಲೆಯ ಅಭಿಷೇಕ್‌ ವಿರುದ್ಧ ಮಧುಗಿರಿ ಠಾಣೆಯಲ್ಲಿ 2014ರಲ್ಲಿ ಕೊಲೆ ಪ್ರಕರಣದ ಸಂಬಂಧ ರೌಡಿಪಟ್ಟಿತೆರೆಯಲಾಗಿತ್ತು. ಕುಡಿತ, ಜೂಜಾಟದ ಚಟ ಹತ್ತಿಸಿಕೊಂಡಿದ್ದ ಆತ, ಕೆಲಸವಿಲ್ಲದೆ ಅಲೆಯುತ್ತಿದ್ದ. ಫೇಸ್‌ಬುಕ್‌ನಲ್ಲಿ ಮಹಿಳೆಯರನ್ನು ಸ್ನೇಹದ ಬಲೆಗೆ ಬೀಳಿಸಿಕೊಂಡು ವಂಚಿಸುವುದೇ ಆತನ ಖಯಾಲಿ ಆಗಿತ್ತು. ಇದಕ್ಕಾಗಿ ಫೇಸ್‌ಬುಕ್‌ನಲ್ಲಿ ಅಭಿಷೇಕ್‌ಗೌಡ ಎಂಬ ಹೆಸರಿನಲ್ಲಿ ಆರೋಪಿ ನಕಲಿ ಖಾತೆ ತೆರೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಮೇಲೆ ರೌಡಿಶೀಟರ್‌ ಅತ್ಯಾಚಾರ

2314 ಸ್ನೇಹಿತೆಯರು, 50 ಮಂದಿ ಆಪ್ತರು!

ಫೇಸ್‌ಬುಕ್‌ನಲ್ಲಿ ತಾನು ಲ್ಯಾಂಡ್‌ಲಾರ್ಡ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದ. ತಾನಾಗಿ ಮಹಿಳೆಯರಿಗೆ ಫ್ರೆಂಡ್‌ ರಿಕ್ವಸ್ಟ್‌ ಕಳುಹಿಸಿ ಸ್ನೇಹ ಮಾಡಿಕೊಳ್ಳುತ್ತಿದ್ದ ಆರೋಪಿ, ಬಳಿಕ ಅವರನ್ನು ನಾಜೂಕಿನ ಮಾತುಗಳು ಮೂಲಕ ಮೋಡಿ ಮಾಡುತ್ತಿದ್ದ. ಆರೋಪಿ ಖಾತೆಯಲ್ಲಿ 2314 ಸ್ನೇಹಿತೆಯರಿದ್ದು, ಅವರೊಂದಿಗೆ ಮೇಸೆಂಜರ್‌ನಲ್ಲಿ ಆತ ಚಾಟಿಂಗ್‌ ಮಾಡಿದ್ದ. ಈ ಪೈಕಿ 50 ಮಹಿಳೆಯರ ಮೊಬೈಲ್‌ ನಂಬರ್‌ ಪಡೆದ ಅಭಿಷೇಕ್‌, ಬಳಿಕ ಅವರೊಂದಿಗೆ ಮಾತುಕತೆ ಶುರು ಮಾಡಿದ್ದ. ಕೊನೆಗೆ ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೇ ಸಂತ್ರಸ್ತೆಯರಿಂದ ಚಿನ್ನಾಭರಣವನ್ನು ಸಹ ದೋಚಿದ್ದ. ಆದರೆ ಮರ್ಯಾದೆಗೆ ಅಂಜಿ ಯಾರೊಬ್ಬರು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಶೇ. 83ರಷ್ಟು ಇಳಿದ ರೇಪ್ ಕೇಸ್!

17 ವರ್ಷದ ಬಾಲಕಿಗೆ ಪ್ರೀತಿ ನೆಪದಲ್ಲಿ ದೋಖಾ ಮಾಡಿದ ಆರೋಪಿ, ಆಕೆಯಿಂದಲೂ ಚಿನ್ನಾಭರಣ ದೋಚಿದ್ದ. ಈ ಬಗ್ಗೆ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ. ತನಿಖೆ ಮುಂದುವರೆದಿದ್ದು, ಉಳಿದವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.