ಹಾವೇರಿ: ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು

*  ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಗಂಗಾಯಿಕೊಪ್ಪದಲ್ಲಿ ಘಟನೆ
*  ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನ ಮೇಲೆ ಕೇಸ್‌
*  ಹೆಡ್‌ಕಾನ್‌ಸ್ಪೆಬಲ್‌ ಅಮಾನತು
 

Rape Accused Suspicious Death in Haveri grg

ಹಾವೇರಿ/ರಟ್ಟೀಹಳ್ಳಿ(ಅ.03): ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶುಕ್ರವಾರ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಯುವಕ ಶನಿವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ(Dead) ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಟ್ಟೀಹಳ್ಳಿ ತಾಲೂಕಿನ ಗಂಗಾಯಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಇದು ಕೊಲೆ ಎಂದು ಮೃತ ಯುವಕನ ಪಾಲಕರು ಆರೋಪಿಸಿದ್ದು, ಪ್ರಕರಣ ಗಂಭೀರತೆ ಪಡೆದುಕೊಂಡಿದೆ.

ಗಂಗಾಯಿಕೊಪ್ಪದ ರಾಜು ತಿಮ್ಮಪ್ಪ ಪೂಜಾರ (28) ಮೃತ ಯುವಕ. ಇದೇ ಗ್ರಾಮದ 16 ವರ್ಷದ ಬಾಲಕಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಪುಸಲಾಯಿಸಿ ಬೈಕ್‌ನಲ್ಲಿ ಗುಡ್ಡದಮಾದಾಪುರ ಹೊನ್ನಾಳಿ ರಸ್ತೆ ಸಮೀಪ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಶುಕ್ರವಾರ ಈತನ ಮೇಲೆ ಪೋಕ್ಸೋ ಕೇಸ್‌ ದಾಖಲಾಗಿತ್ತು. ತನ್ನ ಮಗ ಕಾಣುತ್ತಿಲ್ಲ ಎಂದು ಮೃತ ಯುವಕನ ತಂದೆ ತಿಮ್ಮಪ್ಪ ಪೂಜಾರ ಶುಕ್ರವಾರವೇ ದೂರು ನೀಡಿದರೂ ರಟ್ಟೀಹಳ್ಳಿ ಪೊಲೀಸರು(Police) ಪ್ರಕರಣ ದಾಖಲಿಸಲಿಲ್ಲ. ಆದರೆ, ಯುವಕನ ಮೃತದೇಹ ಶನಿವಾರ ಬೆಳಗ್ಗೆ ಗುಡ್ಡದಮಾದಾಪುರ ಬಳಿ ರಸ್ತೆ ಪಕ್ಕ ಪತ್ತೆಯಾಗಿದೆ. ಇದು ಈಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ವಿಷಯ ತಿಳಿಯುತ್ತಿದ್ದಂತೆ ಶನಿವಾರ ಬೆಳಗ್ಗೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರೀತಿಸಿದ್ದಕ್ಕೆ ಕೊಲೆ?:

ಇದು ಕೊಲೆ(Murder) ಎಂದು ಮೃತ ಯುವಕನ ಪಾಲಕರು ಆರೋಪಿಸಿದ್ದಾರೆ. ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪಾಲಕರು ಹಾಗೂ ಸಂಬಂಧಿಕರು ಶನಿವಾರ ಸಂಜೆ ಪ್ರತಿಭಟನೆ ನಡೆಸಿದರು. ಇಲ್ಲದಿದ್ದರೆ ಶವವನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟುಹಿಡಿದರು. ಆರೋಪಿಗಳನ್ನು ಬಂಧಿಸುತ್ತೇವೆ ಹಾಗೂ ದೂರು ನೀಡಿದರೂ ಕೇಸ್‌ ದಾಖಲಿಸಿಕೊಳ್ಳದ ರಟ್ಟೀಹಳ್ಳಿ ಠಾಣೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಮೃತ ಯುವಕನ ಶವವನ್ನು ಕುಟುಂಬದವರು ಗ್ರಾಮಕ್ಕೆ ಕೊಂಡೊಯ್ದರು.

ಜೆರಾಕ್ಸ್‌ಗೆ ಬಂದ ವಿದ್ಯಾರ್ಥಿನಿಯರ ಮೇಲೆ ಸೈಬರ್ ಕೆಫೆಯಲ್ಲಿ ಎರಗಿದ ಕಾಮಾಂಧರು

ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮೃತ ಯುವಕನ ತಂದೆ ತಿಮ್ಮಪ್ಪ ಪೂಜಾರ, ಪ್ರೀತಿ ಮಾಡಿದ್ದಕ್ಕೆ ನನ್ನ ಮಗನನ್ನು ಕೊಲೆ ಮಾಡಲಾಗಿದೆ. ನಮ್ಮ ಮಗ ಮತ್ತು ಯುವತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಶುಕ್ರವಾರ ಇಬ್ಬರೂ ಎಲ್ಲಿಗೋ ಹೋಗಿ ಬರುತ್ತಿರುವುದನ್ನು ಕುಟುಂಬದವರು ನೋಡಿದ್ದಾರೆ. ಆಗ ಗುಡ್ಡದಮಾದಾಪುರ ಬಳಿ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನನ್ನ ಮಗನ ಮೇಲೆ ಅತ್ಯಾಚಾರ ಆರೋಪ ಮಾಡಿ ಕೇಸ್‌ ದಾಖಲಿಸಿದ್ದಾರೆ. ಆದರೆ, ನಾನು ನನ್ನ ಮಗ ಕಾಣುತ್ತಿಲ್ಲ ಎಂದು ದೂರು ನೀಡಿದರೂ ಪೊಲೀಸರು ಸ್ವೀಕರಿಸಲಿಲ್ಲ. ಪ್ರೀತಿಗೆ ಜಾತಿ ಅಡ್ಡ ಬಂದಿದ್ದೇ ಇಷ್ಟಕ್ಕೆಲ್ಲ ಕಾರಣ. ನನ್ನ ಮಗನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ದೂರು ಸ್ವೀಕರಿಸದ ರಟ್ಟೀಹಳ್ಳಿ ಪೊಲೀಸರ ಮೇಲೆಯೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹೆಡ್‌ಕಾನ್‌ಸ್ಪೆಬಲ್‌ ಅಮಾನತು

ಗಂಗಾಯಿಕೊಪ್ಪ ಗ್ರಾಮದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕ ರಾಜು ಪೂಜಾರ ಎಂಬಾತನ ಮೇಲೆ ಕೇಸ್‌ ದಾಖಲಾಗಿತ್ತು. ಶನಿವಾರ ಆತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಮೃತ ಯುವಕನ ಕುಟುಂಬದವರು ನೀಡಿದ ದೂರನ್ನು ಸ್ವೀಕರಿಸದ ಆರೋಪದಲ್ಲಿ ರಟ್ಟೀಹಳ್ಳಿ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಡಿ.ಎಫ್‌. ಹೊಸಮನಿ ಎಂಬವರನ್ನು ಅಮಾನತುಗೊಳಿಸಲಾಗಿದೆ. ಮೃತ ಯುವಕನ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೆಲವರ ಮೇಲೆ ಅಟ್ರಾಸಿಟಿ ಕೇಸ್‌ ದಾಖಲಿಸಿದ್ದೇವೆ. ಮೃತದೇಹದ ಪಂಚನಾಮೆ ಮಾಡಿ ವಾರಸುದಾರರಿಗೆ ನೀಡಲಾಗಿದೆ. ನಿಷ್ಪಕ್ಷಪಾತ ತನಿಖೆ ಮಾಡುತ್ತೇವೆ. ಯುವಕನ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹನುಮಂತರಾಯ ಹೇಳಿದರು.
 

Latest Videos
Follow Us:
Download App:
  • android
  • ios