ಬೆಂಗಳೂರು(ಡಿ.25): ಹಣ​ಕಾ​ಸಿನ ವಿಚಾ​ರ​ವಾಗಿ ಮೂರು​ವರೆ ತಿಂಗ​ಳ ಹಿಂದೆ ಹತ್ಯೆ​ಯಾ​ಗಿದ್ದ ಕಾಡು​ಗೋ​ಡಿಯ ಕಾಶಿ​ ವಿ​ಶ್ವ​ನಾಥ್‌ ದೇವಾ​ಲ​ಯದ ಪ್ರಧಾನ ಅರ್ಚ​ಕ​ರಾದ ನೀಲ​ಕಂಠ ದೀಕ್ಷಿತ್‌ ಅವರ ಮೃತ​ದೇ​ಹ​ವನ್ನು ಗುರು​ವಾರ ಹೊರ ತೆಗೆಯಲಾಗಿದೆ.

ಬೆಂಗ​ಳೂರ ಪೂರ್ವ ವಿಭಾಗದ ತಹ​ಸೀ​ಲ್ದಾರ್‌ ಅಜಿತ್‌, ವೈದ್ಯಾ​ಧಿ​ಕಾರಿ ಜಗ​ದೀಶ್‌ ಮತ್ತು ವೈಟ್‌​ಫೀಲ್ಡ್‌ ಉಪ ವಿಭಾ​ಗ​ದ ಎಸಿಪಿ ಹಾಗೂ ಕಾಡು​ಗೋಡಿ ಠಾಣೆ ಇನ್‌​ಸ್ಪೆ​ಕ್ಟರ್‌ ಸಮ್ಮು​ಖ​ದಲ್ಲಿ ಬಿಬಿ​ಎಂಪಿಯ ಕಸ ವಿಂಗ​ಡಣ ಘಟ​ಕದ ನಿರ್ಮಾಣ ಹಂತದ ಕಟ್ಟಡದ ಪಾಯ​ದಲ್ಲಿ ಅರ್ಚಕ ನೀಲ​ಕಂಠ ದೀಕ್ಷಿತ್‌ ಅವರ ಮೃತ ದೇಹ​ವನ್ನು ಹೊರ ತೆಗೆ​ಯ​ಲಾ​ಯಿತು. ಬಳಿಕ ಮಹ​ಜರು ಮಾಡಿ, ಮರ​ಣೋ​ತ್ತರ ಪರೀ​ಕ್ಷೆ​ಗಾಗಿ ವಿಕ್ಟೋ​ರಿಯಾ ಆಸ್ಪ​ತ್ರೆಗೆ ರವಾ​ನಿ​ಸ​ಲಾ​ಗಿದೆ ಎಂದು ಪೊಲೀ​ಸರು ಹೇಳಿದ್ದಾರೆ.

1 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರು ವಿದೇಶಿ ಪೆಡ್ಲರ್‌ಗಳ ಬಂಧನ

ಆರ್ಚಕ ದೀಕ್ಷಿತ್‌ ಅವರು ಪರಿಚಯಸ್ಥ ಹಾರ್ಡ್‌ವೇರ್‌ ಮಂಜುನಾಥ್‌ಗೆ ಎರಡು ವರ್ಷಗಳ ಹಿಂದೆ 10 ಲಕ್ಷ ಸಾಲ ನೀಡಿದ್ದರು. ಮೊದಲಿಗೆ ಮಂಜುನಾಥ್‌, ಸರಿಯಾದ ಸಮಯಕ್ಕೆ ಬಡ್ಡಿಯನ್ನು ನೀಲಕಂಠನಿಗೆ ನೀಡುತ್ತಿದ್ದ. ಕೆಲ ತಿಂಗಳಿಂದ ಬಡ್ಡಿ ನೀಡಲು ಆರೋಪಿ ಸತಾಯಿಸುತ್ತಿದ್ದ. ಸೆ.5ರಂದು ರಾತ್ರಿ ಬಡ್ಡಿ ಕೇಳಲು ದೀಕ್ಷಿತ್‌ ಅವರು ಆರೋಪಿಯ ಹಾರ್ಡ್‌ವೇರ್‌ ಅಂಗಡಿಗೆ ತೆರಳಿದ್ದರು. ಆರೋಪಿ ಗೋಡೌನ್‌ನಲ್ಲಿ ಕೊಡುವುದಾಗಿ ಸ್ವಲ್ಪ ದೂರದಲ್ಲಿಯೇ ಇರುವ ಗೋಡೌನ್‌ಗೆ ಕರೆದೊಯ್ದಿದ್ದ. ಬಳಿಕ ಅಲ್ಲಿಯೇ ಇದ್ದ ವಿಕೆಟ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದ. ದೀಕ್ಷಿತ್‌ ಅವರ ಕೂಗಾಟವನ್ನು ಕೇಳಿ ಸಮೀಪದಲ್ಲಿರುವ ಹಾರ್ಡ್‌​ವೇರ್‌ ಶಾಪ್‌​ನ​ಲ್ಲಿ ಕೆಲಸ ಮಾಡು​ತ್ತಿ​ದ್ದ ಇತರೆ ಆರೋ​ಪಿ​ಗಳು ಸ್ಥಳಕ್ಕೆ ಬಂದಿದ್ದರು. ಆಗ ಅವ​ರಿಗೆ ಹಣದ ಆಮಿ​ಷ​ವೊಡ್ಡಿ ಬಾಯಿ ಮುಚ್ಚಿಸಿದ್ದ. ಮರುದಿನ ಸೆ.6ರಂದು ತಡ​ರಾ​ತ್ರಿ ಮೃತ​ದೇ​ಹ​ವನ್ನು ಕಾರಿ​ನಲ್ಲಿ ಕೊಂಡೊ​ಯ್ದು ಕಾಡು​ಗೋ​ಡಿ​ಯಲ್ಲಿರುವ ತನ್ನ ಶ್ರೀಲಕ್ಷ್ಮಿ ಪ್ಯಾಲೆಸ್‌ ಕಲ್ಯಾಣ ಮಂಟ​ಪದ ಹಿಂಭಾ​ಗದ ಬಿಬಿ​ಎಂಪಿ ಕಸ ವಿಂಗ​ಡಣೆ ಘಟ​ಕದ ಪಾಯ​ದಲ್ಲಿ ಗುಂಡಿ ತೋಡಿ ಹೂತ್ತಿಟ್ಟಿದ್ದ.

ಇತ್ತ ಸೆ.5ರ ರಾತ್ರಿ 7.45ರಲ್ಲಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋದ ನೀಲಕಂಠ ದೀಕ್ಷಿತ್‌ ಅವರು ವಾಪಸ್‌ ಬಂದಿರಲಿಲ್ಲ. ಈ ಸಂಬಂಧ ಆರ್ಚಕನ ಸಹೋದರ ದೂರು ನೀಡಿದ್ದರು. ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟರು ಎಂದು ಪೊಲೀಸರು ಮಾಹಿತಿ ನೀಡಿದರು.