ಮೈಸೂರು ಸಾಮೂಹಿಕ ಅತ್ಯಾಚಾರ: ರೇಪಿಸ್ಟ್‌ಗಳು ನೆರೆ ರಾಜ್ಯಕ್ಕೆ ಪರಾರಿ?
* ತನಿಖೆ ಚುರುಕುಗೊಳಿಸಿದ ಪೊಲೀಸರು
* ತಮಿಳ್ನಾಡು, ಕೇರಳಕ್ಕೆ ತಂಡ
* ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಕೃತ್ಯ ಶಂಕೆ
ಮೈಸೂರು(ಆ.28): ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಆರೋಪಿಗಳ ಪತ್ತೆಗಾಗಿ ಹೊರರಾಜ್ಯಗಳಿಗೆ ತೆರಳಿದ್ದಾರೆ. ತನಿಖೆಯ ಭಾಗವಾಗಿ ಪೊಲೀಸರ ತಂಡಗಳು ತಮಿಳುನಾಡು, ಕೇರಳಕ್ಕೆ ತೆರಳಿವೆ ಎಂದು ಮೂಲಗಳು ತಿಳಿಸಿವೆ. ಈ ಕೃತ್ಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ.
"
ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ಅವರಿಗೆ ತನಿಖೆಯ ನೇತೃತ್ವ ವಹಿಸಲಾಗಿದೆ. ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ. ಅತ್ಯಾಚಾರ ನಡೆದ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರ ಬಳಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.
ಮೈಸೂರು ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡ?
ಮತ್ತೊಂದೆಡೆ, ಸ್ಥಳೀಯವಾಗಿಯೂ ಪೊಲೀಸರು ಆರೋಪಿಗಳಿಗೆ ಬೇಟೆ ಆರಂಭಿಸಿದ್ದಾರೆ. ಆ.24ರಂದು ಕೃತ್ಯ ನಡೆದಾಗ ಘಟನಾ ಸ್ಥಳದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳನ್ನು ಟವರ್ ಮೂಲಕ ಶೋಧಿಸಿ, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಇವರಿಂದ ಏನಾದರೂ ಸುಳಿವು ಸಿಗಬಹುದೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ನೀಡಿರುವ ಹೇಳಿಕೆಯ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಆದರೆ, ಈವರೆಗೂ ಸಂತ್ರಸ್ತ ಯುವತಿ ಯಾವುದೇ ಹೇಳಿಕೆಯನ್ನು ಪೊಲೀಸರಿಗೆ ನೀಡಿಲ್ಲ. ಇದು ಪೊಲೀಸರ ತನಿಖೆ ವಿಳಂಬವಾಗಲು, ಆರೋಪಿಗಳ ಪತ್ತೆಗೆ ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೂ ಲಭ್ಯವಿರುವ ಮಾಹಿತಿ ಆಧಾರದ ಮೇಲೆ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.