ಬೆಂಗಳೂರು(ಅ.19):  ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ನಡೆದಿದ್ದ ರೌಡಿ ಕಿಶೋರ್‌ ಶೆಟ್ಟಿ ಕೊಲೆ ಪ್ರತೀಕಾರಕ್ಕೆ ಲೇಡಿಸ್‌ ಬಾರ್‌ ಮಾಲೀಕ ಮನೀಶ್‌ ಶೆಟ್ಟಿಯನ್ನು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

ಅ.15ರಂದು ಬ್ರಿಗೇಡ್‌ ರಸ್ತೆಯಲ್ಲಿ ಲೇಡಿಸ್‌ ಬಾರ್‌ ಮಾಲೀಕ ಮನೀಶ್‌ ಶೆಟ್ಟಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಎರಡು ತಿಂಗಳ ಹಿಂದೆ ಉಡುಪಿ ಹಿರಿಯಡ್ಕ ಸಮೀಪ ನಡೆದಿದ್ದ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಮತ್ತು ರೌಡಿ ಕಿಶೋರ್‌ ಶೆಟ್ಟಿಹತ್ಯೆಗೆ ಪ್ರತೀಕಾರವಾಗಿ ಮನೀಶ್‌ ಶೆಟ್ಟಿಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ರವಿ ಪೂಜಾರಿ ಸಹಚರ ಮನೀಶ್‌ ಶೆಟ್ಟಿ ಹತ್ಯೆ ಹಿಂದೆ ಕರಾವಳಿಯ ಭೂಗತ ಲೋಕ..!

ಕಿಶೋರ್‌ ಶೆಟ್ಟಿ ಹತ್ಯೆ ಕೇಸಿನಲ್ಲಿ ಮನೀಶ್‌ನನ್ನು ಆರೋಪಿಯನ್ನಾಗಿ ಮಾಡಿಲ್ಲ. ಆದರೆ, ಕಿಶೋರ್‌ ಶೆಟ್ಟಿ ಹತ್ಯೆಗೆ ಈತ ಹಣಕಾಸಿನ ನೆರವು ನೀಡಿದ್ದ ಕಾರಣಕ್ಕೆ ಆರೋಪಿಗಳು ಕೃತ್ಯ ಎಸಗಿರುವುದು ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಈ ಕೊಲೆ ಹಿಂದೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೈವಾಡ ಇರುವುದು ಸಹ ಗೊತ್ತಾಗಿದೆ. ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತದೆ. ಈ ಕೇಸಿನಲ್ಲಿ ಮತ್ತಷ್ಟು ಮಂದಿ ಕೈವಾಡ ಇರುವುದು ಗೊತ್ತಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.