ಹುಬ್ಬಳ್ಳಿ(ನ.13): ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪದೇ ಪದೆ ಪರಾರಿಯಾಗುತ್ತಿದ್ದ ಅತ್ಯಾಚಾರ ಪ್ರಕರಣದ ವಿಚಾರಣಾಧೀನ ಕೈದಿಯನ್ನು ಬಂಧಿಸುವಲ್ಲಿ ಇಲ್ಲಿಯ ಕೇಶ್ವಾಪೂರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಬಸವರಾಜ ಕುರಡಗಿಮಠ ಎಂಬಾತನೇ ಬಂಧಿತ ವಿಚಾರಣಾಧೀನ ಕೈದಿ. 2014ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಲುಕಿ ಜೈಲು ಪಾಲಾಗಿದ್ದ. ಈ ವೇಳೆ ಚಿಕಿತ್ಸೆ ಪಡೆಯಲು ಕಿಮ್ಸ್‌ಗೆ ದಾಖಲಾಗಿದ್ದ ಈತ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಆದರೆ, ಈ ವೇಳೆ ವಿದ್ಯಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ಈ ಘಟನೆಯ ನಂತರ ಮತ್ತೆ ಜೈಲಿನಲ್ಲಿದ್ದ ಬಸವರಾಜ, ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆಯಲ್ಲೂ ಪೊಲೀಸರನ್ನು ಯಾಮಾರಿಸಿ ಮತ್ತೆ ತಪ್ಪಿಸಿಕೊಂಡು ಪರಾರಿಯಾಗಿದ್ದನು. ನಂತರ ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದರು.

ಎಟಿಎಂ ಸರ್ವಿಸ್‌ ನೆಪದಲ್ಲಿ 50 ಲಕ್ಷ ಲೂಟಿ..!

ಕಳೆದ ಒಂದೂವರೆ ವರ್ಷದಿಂದ ಪೊಲೀಸರ ಕಣ್ತಪ್ಪಿಸಿ ತಿರುಗುತ್ತಿದ್ದ ಈತನನ್ನು ಕೇಶ್ವಾಪೂರ ಠಾಣೆ ಪಿಐ ಸುರೇಶ ಕುಂಬಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಈತನನ್ನು ಬಂಧಿಸಿದ್ದಾರೆ. ಈತ ಹೆಜ್ಜೆ ಗುರುತು ಪತ್ತೆ ಹಚ್ಚಿಕೊಂಡು ಈ ತಂಡ ಮಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಹುಡುಕಿದೆ. ಕೊನೆಗೆ ಮೈಸೂರಿನಲ್ಲಿ ಈತನನ್ನು ಬಂಧಿಸಿ ಮತ್ತೆ ಜೈಲಿಗೆ ಅಟ್ಟುವಲ್ಲಿ ಈ ತಂಡ ಯಶಸ್ವಿಯಾಗಿದೆ.

8 ಜನ ಪೊಲೀಸ್‌ ಸಿಬ್ಬಂದಿ ಅಮಾನತ್ತು:

ಈತ ಪೊಲೀಸರ ಕಣ್ತಪ್ಪಿಸಿ ಪದೇ ಪದೆ ಪರಾರಿಯಾದ ಕಾರಣದಿಂದ ಬರೋಬ್ಬರಿ 8 ಜನ ಪೊಲೀಸ್‌ ಸಿಬ್ಬಂದಿ ಅಮಾನತ್ತುಗೊಂಡಿದ್ದರು. ಹುಬ್ಬಳ್ಳಿ ಕಿಮ್ಸ್‌ನಲ್ಲಿ ಪರಾರಿಯಾದ ವೇಳೆ ನಾಲ್ವರು ಪೊಲೀಸರನ್ನು ಅಮಾನತ್ತುಗೊಳಿಸಲಾಗಿತ್ತು. ಅದರಂತೆ ಬೆಂಗಳೂರಿನಲ್ಲಿ ಪರಾರಿಯಾದಾಗ ನಾಲ್ವರು ಪೊಲೀಸ್‌ ಸಿಬ್ಬಂದಿ ಅಮಾನತ್ತುಗೊಂಡಿದ್ದರು.