ಬೆಂಗಳೂರು(ಆ.10): ಪಾರ್ಟಿ ಮಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಹತ್ಯೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಸಿಂಗಸಂದ್ರದ ನಿವಾಸಿ ಯೋಗೇಶ್‌ (28) ಕೊಲೆಯಾದ ದುರ್ದೈವಿ. 

ಕೊಲೆ ಆರೋಪಿ ಮಹೇಶ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಪಾರ್ಟಿಯಲ್ಲಿ ಜತೆಗಿದ್ದ ನಂಜಪ್ಪ, ಮಣಿ ಹಾಗೂ ಹರೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್‌ ನಂದೀಶ್‌ ತಿಳಿಸಿದ್ದಾರೆ

ಯೋಗೇಶ್‌ ತಂದೆಯೊಂದಿಗೆ ನೀರಿನ ಕ್ಯಾನ್‌ ಪೂರೈಕೆ ಮಾಡುವ ವ್ಯವಹಾರ ನೋಡಿಕೊಳ್ಳುತ್ತಿದ್ದ. ಕಾರು ಚಾಲಕನಾಗಿರುವ ಮಹೇಶ್‌ ಮತ್ತು ಯೋಗೇಶ್‌ ಸ್ನೇಹಿತರಾಗಿದ್ದರು. ಶನಿವಾರ ಪರಿಚಯಸ್ಥರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಯೋಗೇಶ್‌, ಮಹೇಶ್‌, ಹರೀಶ್‌, ಮಣಿ ಹಾಗೂ ನಂಜಪ್ಪ ತೆರಳಿದ್ದರು. ಅಂತ್ಯಕ್ರಿಯೆ ತಡವಾಗುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಎಸಿಎಸ್‌ ಲೇಔಟ್‌ ಬಳಿ ಇರುವ ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು.

ಹಳೇ ದ್ವೇಷ: ಕೊಲೆ ಆರೋಪಿ ಬರ್ಬರ ಹತ್ಯೆ

ಮದ್ಯ ಖಾಲಿಯಾದ ಹಿನ್ನೆಲೆಯಲ್ಲಿ ಯೋಗೇಶ್‌ ಸ್ನೇಹಿತ ಮಹೇಶ್‌ಗೆ ಹಣ ಕೊಟ್ಟು ಮದ್ಯ ತರುವಂತೆ ಸೂಚಿಸಿದ್ದ. ಮದ್ಯ ತರಲು ಹೋದವನು ಒಂದೂವರೆ ಗಂಟೆಯಾದರೂ ಬಂದಿರಲಿಲ್ಲ. ಮಹೇಶ್‌ನಿಗೆ ಕರೆ ಮಾಡಿದಾಗ ಕಬಾಬ್‌ ತೆಗೆದುಕೊಂಡು ಬರುತ್ತಿರುವುದಾಗಿ ಯೋಗೇಶ್‌ಗೆ ಹೇಳಿದ್ದ. ಮದ್ಯ ಸೇವನೆ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಹೇಶ್‌ ಏಕಾಏಕಿ ಹರಿತವಾದ ಆಯುಧದಿಂದ ಯೋಗೇಶ್‌ನ ತಲೆ ಹಾಗೂ ಮುಖಕ್ಕೆ ಹೊಡೆದಿದ್ದಾನೆ. ಈ ವೇಳೆ ಹರೀಶ್‌ ತಡೆಯಲು ಮುಂದಾಗಿದ್ದು, ಆತನ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಯೋಗೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಯೋಗೇಶ್‌ ಮತ್ತು ಮಹೇಶ್‌ ಆಗ್ಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ದ್ವೇಷಕ್ಕೆ ಮಹೇಶ್‌ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಆರೋಪಿ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್‌ ಮಾಹಿತಿ ನೀಡಿದರು.