ಬೆಂಗಳೂರು(ಮಾ.12): ತಂದೆ ಮೇಲಿನ ಜಿದ್ದಿಗೆ ಮಗನನ್ನು ಅಟ್ಟಾಡಿಸಿಕೊಂಡು ಐವರು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಹೊಂಬೇಗೌಡನಗರದ ಆಕಾಶ್‌ (18) ಹತ್ಯೆಯಾದ ದುರ್ದೈವಿ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಿದ್ದಾಪುರ ಸಮೀಪದ ಸುಲಭ್‌ ಶೌಚಗೃಹದಲ್ಲಿ ಆಕಾಶ್‌ನನ್ನು ಹತ್ಯೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಕೆಲವರನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ; ದೆವ್ವಕ್ಕೆ ಹೆದರಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದರು!

ತಂದೆ ಸಾವಿಗೆ ಪ್ರತೀಕಾರ:

ಹೊಂಬೇಗೌಡ ನಗರದ ಕೊಳಗೇರಿಯಲ್ಲಿ ಆಕಾಶ್‌ ಕುಟುಂಬ ನೆಲೆಸಿದೆ. ಅದೇ ಪ್ರದೇಶದಲ್ಲೇ ವೇಲುರಾಜು ಪರಿವಾರ ಸಹ ಇದೆ. ಕಳೆದ ಜನವರಿಯಲ್ಲಿ ಎಸ್‌.ಕೆ.ಗಾರ್ಡನ್‌ನಲ್ಲಿ ನಡೆದಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ, ನಟ ದಿ.ಎಂಜಿಆರ್‌ ಜನ್ಮ ದಿನಾಚರಣೆಗೆ ಆಕಾಶ್‌ ತಂದೆ ವೇಲು ಹಾಗೂ ಅವರ ಗೆಳೆಯ ವೇಲುರಾಜ್‌ ತೆರಳಿದ್ದರು. ಆ ವೇಳೆ ಇಬ್ಬರು ಪಾನಮತ್ತರಾಗಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ವೇಲುರಾಜ್‌ ದಿಢೀರ್‌ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಗೆಳೆಯರು ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ತಲುಪುವ ಮುನ್ನವೇ ವೇಲುರಾಜ್‌ ಕೊನೆಯುಸಿರೆಳೆದಿದ್ದರು. ಈ ಸಂಬಂಧ ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಯಿತು. ಆದರೆ ವೇಲುರಾಜ್‌ ಕುಟುಂಬ ಸದಸ್ಯರು, ಈ ಸಾವಿಗೆ ಮೃತರ ಗೆಳೆಯ ವೇಲು ಕಾರಣ ಎಂದು ಭಾವಿಸಿದ್ದರು. ವೇಲುರಾಜ್‌ಗೆ ಮದ್ಯದಲ್ಲಿ ವಿಷಪ್ರಾಶನ ಮಾಡಿಸಿ ಹತ್ಯೆಗೈಯಲಾಗಿದೆ ಎಂದು ಶಂಕಿಸಿದ ಅವರು, ಇದಕ್ಕೆ ಪ್ರತೀಕಾರವಾಗಿ ಮರುದಿನವೇ ವೇಲು ಹತ್ಯೆಗೆ ಹೊಂಚು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಕೊಲೆಗೆ ಗೆಳೆಯನ ಕುಟುಂಬದವರು ಸಜ್ಜಾಗಿರುವ ಬಗ್ಗೆ ಮಾಹಿತಿ ತಿಳಿದ ವೇಲು, ಜೀವಭೀತಿಯಿಂದ ನಗರ ತೊರೆದು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಹೀಗೆ ಎರಡು ತಿಂಗಳಿಂದ ಆತನಿಗಾಗಿ ಹುಡುಕಾಟ ನಡೆಸಿದರೂ ಸಿಗದೆ ಹೋದಾಗ ಬೇಸತ್ತ ವೇಲುರಾಜ್‌ ಕುಟುಂಬದವರು, ತಂದೆಯ ಮೇಲಿನ ದ್ವೇಷವನ್ನು ಮಗನ ಮೇಲೆ ತೀರಿಸಿದ್ದಾರೆ. ಮನೆ ಹತ್ತಿರ ಸುಲಭ್‌ ಶೌಚಾಲಯಕ್ಕೆ ಬುಧವಾರ ರಾತ್ರಿ ಆಕಾಶ್‌ ಬಂದಿದ್ದ. ಆಗ ಆತನನ್ನು ಬೆನ್ನತ್ತಿ ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದಾರೆ. ಪುತ್ರನ ಹತ್ಯೆ ವಿಚಾರ ತಿಳಿದ ಬಳಿಕ ವೇಲು ಮನೆಗೆ ಮರಳಿದ್ದಾರೆ. ಆರೋಪಿಗಳಿಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.