ಬೆಂಗಳೂರು(ಫೆ.03): ಪೋಕ್ಸೋ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಆರೋಪಿ ರಸ್ತೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಮುಖಕ್ಕೆ ಗುದ್ದಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

19 ವರ್ಷದ ವಿದ್ಯಾರ್ಥಿನಿಯ ತಾಯಿ ಕೊಟ್ಟ ದೂರಿನ ಮೇರೆಗೆ ಪುಟ್ಟೇನಹಳ್ಳಿ ನಿವಾಸಿ ಅಕ್ಬರ್‌ಪಾಷ (24) ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಕ್ಬರ್‌ ಪಾಷ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದು, ತನ್ನ ನೆರೆಮನೆ ನಿವಾಸಿ 17 ವರ್ಷದ ಬಾಲಕಿಯನ್ನು ಪ್ರೀತಿಸಿ, ಬಳಿಕ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿ, ಕಳೆದ ವರ್ಷ ಮೇ ತಿಂಗಳಿನಲ್ಲಿ ಜೈಲಿಗಟ್ಟಿದ್ದರು. ಬಿಡುಗಡೆಯಾದ ಬಳಿಕ ಸಂಬಂಧಿಕರ ಜತೆ ಕಳೆದ ನವೆಂಬರ್‌ 11ರಂದು ಸಂತ್ರಸ್ತೆ ಮನೆಗೆ ತೆರಳಿದ್ದ ಅಕ್ಬರ್‌, ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದ. ಬಳಿಕ ಸಂತ್ರಸ್ತೆಯ ತಾಯಿ ಮತ್ತು ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿ ಬಂದಿದ್ದ. ಈ ಪ್ರಕರಣದಲ್ಲಿ ಮತ್ತೊಮ್ಮೆ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇಷ್ಟಾದರೂ ಸುಮ್ಮನಾಗದ ಅಕ್ಬರ್‌ ಯುವತಿ ಹಾಗೂ ಆಕೆಯ ಕುಟುಂಬದ ಮೇಲೆ ಹೆಚ್ಚು ಆಕ್ರೋಶಗೊಂಡಿದ್ದ. ಈ ಪ್ರಕರಣದಲ್ಲಿ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಜ.30ರಂದು ತರಗತಿ ಮುಗಿಸಿಕೊಂಡು ಬಿ.ಜಿ.ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಳು. ಯುವತಿಯನ್ನು ಹಿಂಬಾಲಿಸಿ ಬಂದ ಆರೋಪಿ ದ್ವಿಚಕ್ರ ವಾಹನ ಅಡ್ಡಗಟ್ಟಿ ಏಕಾಏಕಿ ಯುವತಿ ಮುಖಕ್ಕೆ ಗುದ್ದಿದ್ದ. ಇದರಿಂದ ಯುವತಿ ಮುಖದಲ್ಲಿ ರಕ್ತ ಬಂದಿದ್ದು, ಬಳಿಕ ಆಕೆಯ ಕೂದಲು ಹಿಡಿದು ಎಚ್ಚರಿಕೆ ನೀಡಿ ಪರಾರಿಯಾಗಿದ್ದಾನೆ.

ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು. ಆರೋಪಿ ವಿರುದ್ಧ ಯಾವುದೇ ರೌಡಿ ಚಟುವಟಿಕೆ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.