Murder in Vijayapura: ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು...ಬೈಕ್ ನಲ್ಲಿ ತೆರಳುತ್ತಿದ್ದವನ ಹತ್ಯೆ!
*ಪ್ರೀತಿಸಿ ಮದುವೆಯಾಗಿದ್ದ ಎಸ್‌ಐ ಪುತ್ರನ ಭೀಕರ ಹತ್ಯೆ
* ಯುವಕನ ಬೈಕ್‌ಗೆ ವಾಹನ ಡಿಕ್ಕಿ ಹೊಡೆಸಿ, ಮಾರಕಾಸ್ತ್ರದಿಂದ ಹಲ್ಲೆ
* ವಿಜಯಪುರದಲ್ಲಿ ನಡೆದ ಅಪಘಾತ ಹಿಂದಿನ ರಹಸ್ಯ ಬಯಲು
* 6 ತಿಂಗಳ ಹಿಂದೆ ಮಾಜಿ ಕಾರ್ಪೊರೇಟರ್ ಪುತ್ರಿಯನ್ನು ಮದುವೆ ಆಗಿದ್ದ ಎಸ್‌ಐ ಪುತ್ರ
ವಿಜಯಪುರ(ಫೆ.16) ಆರು ತಿಂಗಳ ಹಿಂದೆ ವಿರೋಧದ ನಡುವೆಯೂ ವಿಜಯಪುರದ (Vijayapura) ಮಾಜಿ ಕಾರ್ಪೊರೇಟರ್‌ವೊಬ್ಬರ ಪುತ್ರಿಯನ್ನು (Love)ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್‌ಪೆಕ್ಟರ್‌ವೊಬ್ಬರ ಪುತ್ರ ಪ್ರೇಮಿಗಳ ದಿನದಂದೇ ಬರ್ಬರವಾಗಿ (Murder) ಹತ್ಯೆಗೀಡಾಗಿದ್ದಾನೆ. ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ವಾಹನದಿಂದ ಡಿಕ್ಕಿಹೊಡಿಸಿ, ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆರು ತಿಂಗಳ ಹಿಂದೆ ಪ್ರೇಮಿಗಳು ಮಾಡಿದ್ದ ವಿಡಿಯೋ ಆಧಾರದ ಮೇಲೆ ಈ ಕೃತ್ಯದ ಹಿಂದೆ ಇದೀಗ ಯುವತಿಯ ತಂದೆಯ ಕೈವಾಡದ ಶಂಕೆ ಮೂಡಿದೆ.
ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆರ್.ಬಿ ಕೂಡಗಿ ಅವರ ಪುತ್ರ ಮುಸ್ತಕಿನ್ ಕೂಡಗಿ (28) ಹತ್ಯೆಗೀಡಾದ ಯುವಕ. ಈತ ಪ್ರೀತಿಸಿ ಮದುವೆಯಾಗಿದ್ದ ಯುವತಿ ಐದು ತಿಂಗಳ ಗರ್ಭಿಣಿಯಾಗಿದ್ದು, ಮುಸ್ತಕಿನ್ ಹತ್ಯೆಯಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.
ಆಗಿದ್ದೇನು?: ತನ್ನದೇ ಧರ್ಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಆರು ತಿಂಗಳು ಮನೆಯಿಂದ ದೂರವಿದ್ದ ಮುಸ್ತಕಿನ್ ಎರಡು ದಿನಗಳ ಹಿಂದಷ್ಟೇ ಮನೆಗೆ ಹಿಂತಿರುಗಿದ್ದ. ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ತನ್ನ ಹೊಸ ಮನೆಗೆ ತೆರಳುತ್ತಿದ್ದಾಗ ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಹೊಂಚು ಹಾಕಿ ಕೂತಿದ್ದ ದುಷ್ಕರ್ಮಿಗಳು ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದೇ ಭಾವಿಸಿದ್ದ ಪೊಲೀಸರಿಗೆ ನಂತರ ಕೊಲೆ ಎಂಬುದು ಖಚಿತವಾಗಿದೆ. ಈ ಸಂಬಂಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿಗಳ ಬಂಧನಕ್ಕಾಗಿ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ 3 ತನಿಖಾ ತಂಡಗಳನ್ನು ರಚಿಸಿದ್ದಾರೆ.
Illicit Relationship : ಯೋಗ ಕ್ಲಾಸ್‌ನಲ್ಲಿ ಲವ್ವಿ-ಡವ್ವಿ, ಪತಿಯನ್ನೇ ಸುಪಾರಿ ಕೊಟ್ಟು ಮುಗಿಸಿದ ಹಾಸನದ ಹಂತಕಿ!
ಮಾವನ ಮೇಲೆಯೇ ಅನುಮಾನ: ಮುಸ್ತಕಿನ್ ಹಾಗೂ ವಿಜಯಪುರ ಮಹಾನಗರಪಾಲಿಕೆ ಮಾಜಿ ಸದಸ್ಯ ರೌಫ್‌ಶೇಖ್ ಅವರ ಪುತ್ರಿ ಅತೀಕಾ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಅತೀಕಾ ಕುಟುಂಬದವರಿಂದ ತೀವ್ರ ವಿರೋಧ ಇತ್ತು. ಈ ಹಿನ್ನೆಲೆಯಲ್ಲಿ 6 ತಿಂಗಳ ಹಿಂದಷ್ಟೇ ಬೇರೆಡೆ ತೆರಳಿ ಈ ಜೋಡಿ ಮದುವೆಯಾಗಿತ್ತು. ಮಹಾರಾಷ್ಟ್ರದ ಮೀರಜ್‌ನ ದಡ್ಡಿ ಎಂಬಲ್ಲಿ ನೆಲೆಸಿದ್ದ ಜೋಡಿ ಭಾನುವಾರ ಊರಿಗೆ ವಾಪಸಾಗಿತ್ತು.
ಮುಸ್ತಕಿನ್ ಹಾಗೂ ಅತೀಕಾ ಪ್ರೀತಿಗೆ ಮೊದಲಿಂದಲೂ ರೌಫಶೇಖ್ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಬೆದರಿಕೆಯನ್ನೂ ಹಾಕಿದ್ದರು. ಹೀಗಾಗಿ ತಮಗೆ ಜೀವ ಭಯ ಇರುವ ಕುರಿತು ಮುಸ್ತಕಿನ್ ಮತ್ತು ಅತೀಕಾ ವಿಡಿಯೋ ಮಾಡಿ ಹೇಳಿಕೆ ನೀಡಿದ್ದರು. ಆ ವಿಡಿಯೋದಲ್ಲಿ ತನ್ನ ತಂದೆಯಿಂದಲೇ ಜೀವಭಯ ಇದೆ, ನನ್ನನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತು ಹಾಕಲು ಯೋಜಿಸಿದ್ದಾರೆ, ಗೂಂಡಾಗಳಿಂದ ಗಂಡನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ ಎಂದು ಅತೀಕಾ ಆರೋಪಿಸಿದ್ದಳು.
ಮುಸ್ತಕಿನ್ ಕೂಡಗಿ ಹತ್ಯೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತು. ಇದು ಅಪಘಾತವಲ್ಲ. ಕೊಲೆ ಪ್ರಕರಣ ಎಂಬುದು ಈಗಾಗಲೇ ಭೇದಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಎಚ್.ಡಿ.ಆನಂದ ಕುಮಾರ ತಿಳಿಸಿದ್ದಾರೆ.