Asianet Suvarna News Asianet Suvarna News

‘ಫಾರಿನ್‌ ಡ್ರಗ್ಸ್‌’ ಅಡ್ಡವಾದ ಸಿಲಿಕಾನ್‌ ಸಿಟಿ..!

*  ಕೊರೋನಾ ಕಾಲದಲ್ಲಿ ಬೆಂಗ್ಳೂರಲ್ಲಿ ವ್ಯಾಪಕವಾಗಿ ಹರಡಿದ ವಿದೇಶಿ ಡ್ರಗ್ಸ್‌ ಜಾಲ
*  ಕೋಟ್ಯಂತರ ರು. ಮೌಲ್ಯದ ವಹಿವಾಟು
*  ದುಬಾರಿ ಬೆಲೆಯ ವಿದೇಶಿ ಡ್ರಗ್ಸ್‌ಗೆ ದಾಸರಾಗಿರುವ ಸೆಲೆಬ್ರಿಟಿಗಳ ಮಕ್ಕಳು 
 

More Than 3000 Drugs Cases in Nine Months at Bengaluru grg
Author
Bengaluru, First Published Oct 25, 2021, 6:40 AM IST

ಬೆಂಗಳೂರು(ಅ.25):  ರಾಜಧಾನಿ ಬೆಂಗಳೂರು(Bengaluru) ‘ಫಾರಿನ್‌ ಡ್ರಗ್ಸ್‌(Foreign Drugs)’ ಮಾರಾಟಕ್ಕೆ ಉತ್ತಮ ಮಾರುಕಟ್ಟೆಯಾಗಿದ್ದು, ಕೊರೋನಾ(Corona) ಲಾಕ್‌ಡೌನ್‌(Lockdown) ಸಮಯದಲ್ಲಿ ಈ ಡ್ರಗ್ಸ್‌ ಮಾರುಕಟ್ಟೆ ಜಾಲ ಬಹಳ ವ್ಯಾಪಕವಾಗಿ ಹರಡಿಕೊಂಡು ಕೋಟ್ಯಂತರ ರು. ಮೌಲ್ಯದ ಡ್ರಗ್ಸ್‌ ವ್ಯಾಪಾರ-ವಹಿವಾಟು ನಡೆದಿದೆ.

ಈ ವರ್ಷ ನಗರದಲ್ಲಿ ಪತ್ತೆಯಾದ ಕೆಲ ಡ್ರಗ್ಸ್‌(Drugs) ಪ್ರಕರಣಗಳಲ್ಲಿ ಫಾರಿನ್‌ ಡ್ರಗ್ಸ್‌ ಬಳಕೆ ಹೆಚ್ಚಾಗಿರುವುದು ಕಂಡು ಬಂದಿದೆ. ಅದರಲ್ಲೂ ಈ ಹೈ ಪ್ರೊಫೈಲ್‌ ಜನರೇ ದುಬಾರಿ ಮೌಲ್ಯದ ಫಾರಿನ್‌ ಡ್ರಗ್ಸ್‌ಗೆ ಗ್ರಾಹಕರಾಗಿದ್ದಾರೆ(Customers). ಪಬ್‌(Pub), ರೇವ್‌ ಪಾರ್ಟಿ(Rave Party), ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುವ ದೊಡ್ಡ ಪಾರ್ಟಿಗಳಲ್ಲಿ ಫಾರಿನ್‌ ಡ್ರಗ್ಸ್‌ ಹೆಚ್ಚಾಗಿ ಬಳಕೆಯಾಗುತ್ತಿದೆ. ಅಂದರೆ, ಈ ಪಾರ್ಟಿಗಳಲ್ಲಿ ಭಾಗಿಯಾಗುವ ಶ್ರೀಮಂತರು, ರಾಜಕೀಯ(Politics) ಪ್ರಭಾವಿಗಳು, ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳ ಮಕ್ಕಳು ದುಬಾರಿ ಮೌಲ್ಯದ ಡ್ರಗ್ಸ್‌ನ ಗ್ರಾಹಕರಾಗಿದ್ದಾರೆ. ಹೀಗಾಗಿ ಭಾರತದ ಪ್ರಮುಖ ನಗರಗಳ ಪೈಕಿ ಬೆಂಗಳೂರು ನಗರದ ಫಾರಿನ್‌ ಡ್ರಗ್ಸ್‌ ಗೆ ಉತ್ತಮ ಮಾರುಕಟ್ಟೆಯಾಗಿದೆ.

Swiggy, Dunzo ಸೋಗಲ್ಲಿ ಮನೆ ಬಾಗಿಲಿಗೇ ಡ್ರಗ್ಸ್‌..!

ಕೊರೋನಾ ಪರಿಸ್ಥಿತಿ ನಡುವೆಯೂ ನಗರದಲ್ಲಿ ಡ್ರಗ್ಸ್‌ ಪ್ರಕರಣಗಳು ಹೆಚ್ಚಳವಾಗಿವೆ. 2021ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಬರೋಬ್ಬರಿ 3,257 ನಾರ್ಕೊಟಿಕ್‌ ಡ್ರಗ್ಸ್‌ ಆ್ಯಂಡ್‌ ಸೈಕೋಟ್ರೋಫಿಕ್‌ ಸಬ್ಸ್‌ಟ್ಯಾನ್ಸಸ್‌(ಎನ್‌ಡಿಪಿಎಸ್‌) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ 42.87 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ನಗರ ಪೊಲೀಸರು(Police)  ವಶಪಡಿಸಿಕೊಂಡಿದ್ದಾರೆ.

ಲಾಕ್‌ಡೌನ್‌ನಲ್ಲಿ ಪೆಡ್ಲಿಂಗ್‌ ಹೆಚ್ಚಳ:

ಕೊರೋನಾ ಲಾಕ್‌ಡೌನ್‌ನಿಂದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಕಾಸ್ಟ್‌ ಕಟಿಂಗ್‌ ಹೆಸರಿನಲ್ಲಿ ಹಲವು ಖಾಸಗಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದವು. ಉದ್ಯೋಗ ಕಳೆದುಕೊಂಡ ಹಲವು ಯುವಕರು ಸುಲಭವಾಗಿ ಹಣ ಸಂಪಾದಿಸುವ ಸಲುವಾಗಿ ಈ ಡ್ರಗ್ಸ್‌ ಪೆಡ್ಲಿಂಗ್‌(Drugs Pedling) ಮುಂದಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಕೆಲ ಪ್ರಕರಣಗಳಲ್ಲಿ ಬಿಇ, ಎಂಬಿಎ, ಎಂಟೆಕ್‌ ಸೇರಿದಂತೆ ಪದವಿಧರರು(Graduates) ಡ್ರಗ್ಸ್‌ ಮಾರಾಟದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಲಾಕ್‌ಡೌನ್‌ ಅವಧಿಯಲ್ಲಿ ಡ್ರಗ್ಸ್‌ ಮಾರಾಟ ಜಾಲ ಬಹಳ ವಿಸ್ತರಿಸಿಕೊಂಡಿತ್ತು. ಹೀಗಾಗಿ ಈ ವರ್ಷ ಎನ್‌ಡಿಪಿಎಸ್‌ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಮನೆ ಬಾಗಿಲಿಗೆ ಡ್ರಗ್ಸ್‌ ಪೂರೈಕೆ:

ಈ ಹಿಂದೆ ಗ್ರಾಹಕರಿಗೆ ಡ್ರಗ್ಸ್‌ ಸಿಗುವುದು ಬಹಳ ಕಷ್ಟವಾಗಿತ್ತು. ಇತ್ತೀಚೆಗೆ ಮನೆ ಬಾಗಿಲಿಗೆ ಡ್ರಗ್ಸ್‌ ಪೂರೈಸುವ ವ್ಯವಸ್ಥೆ ಪ್ರಾರಂಭವಾಗಿದೆ. ಮನೆಗೆ ಊಟ ತಲುಪಿಸುವ ಸ್ವಿಗ್ಗಿ(Swiggy), ಝೋಮ್ಯಾಟೋ(Zomatto) ಸೇರಿದಂತೆ ಇತರೆ ಕಂಪನಿಗಳ ಪ್ರತಿನಿಧಿಗಳ ಸೋಗಿನಲ್ಲಿ ಗ್ರಾಹಕರಿಗೆ ಡ್ರಗ್ಸ್‌ ತಲುಪಿಸಲಾಗುತ್ತಿದೆ.

ಮಲ್ಲೇಶ್ವರ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಬಳಿ ಇತ್ತು 17 ಕೋಟಿ ರೂ. ಅಂಬರ್‌ ಗ್ರೀಸ್ !

ಸ್ಥಳೀಯರು ಮಾತ್ರವಲ್ಲದೆ, ವಿದೇಶಿಗರು ಹಾಗೂ ನೆರೆಯ ಮಣಿಪುರ, ಬಿಹಾರ, ಒಡಿಶಾ ಸೇರಿದಂತೆ ಇತರೆ ರಾಜ್ಯಗಳ ಜನರು ನಗರದಲ್ಲಿ ಡ್ರಗ್‌ ಪೆಡ್ಲಿಂಗ್‌ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ 9 ತಿಂಗಳಲ್ಲಿ 4,079 ಭಾರತೀಯರು ಹಾಗೂ 131 ವಿದೇಶಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸರಿಗೆ ಟಾರ್ಗೆಟ್‌:

ಲಾಕ್‌ಡೌನ್‌ ಅವಧಿಯಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ಜಾಲ ವ್ಯಾಪಕವಾಗಿ ವಿಸ್ತರಿಸಿದಂತೆ ನಗರ ಪೊಲೀಸರು ಈ ಪೆಡ್ಲರ್‌ಗಳ ಹೆಡೆಮುರಿ ಕಟ್ಟಲು ಮುಂದಾಗಿದ್ದರು. ನಗರ ಪೊಲೀಸ್‌ ಆಯುಕ್ತರು ಸಿಸಿಬಿ ಜತೆಗೆ ಪೊಲೀಸ್‌ ಠಾಣೆಗಳ ಮಟ್ಟದಲ್ಲಿ ವಿಶೇಷ ಕಾರ್ಯಾಚರಣೆ ಮಾಡಿ ಡ್ರಗ್ಸ್‌ ಪೆಡ್ಲಿಂಗ್‌ ಜಾಲ ಭೇದಿಸಲು ಖಡಕ್‌ ಸೂಚನೆ ನೀಡಿದ್ದರು. ಎನ್‌ಡಿಪಿಎಸ್‌ ಪ್ರಕರಣ ದಾಖಲಿಸಲು ಗುರಿ ನಿಗದಿಪಡಿಸಿದ್ದರು. ಅದರಂತೆ ಪೊಲೀಸರು ಹಗಲಿರುಳು ಶ್ರಮಿಸಿ ಡ್ರಗ್‌ ಪೆಡ್ಲರ್‌ಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದರು. ಹೀಗಾಗಿ ಈ ವರ್ಷ ಎನ್‌ಡಿಪಿಎಸ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಧಿಕಾರಿ ತಿಳಿಸಿದರು.

ಡ್ರಗ್ಸ್‌ ಪ್ರಕರಣಗಳ ಮಾಹಿತಿ

ವರ್ಷ ದಾಖಲಾದ ಕೇಸ್‌ ಜಪ್ತಿ ಮಾಡಿದ ಡ್ರಗ್ಸ್‌ ಮೌಲ್ಯ(ಕೋಟಿ ರು.ಗಳಲ್ಲಿ)

2018 285 4.16
2019 768 3.46
2020 2,766 21.38
2021 3,257 42.87

ರೈಲಲ್ಲಿ ಸಿಕ್ತು 3.20 ಕೋಟಿ ಮೌಲ್ಯದ ಡ್ರಗ್ಸ್‌..!

ಏನೇನು ಜಪ್ತಿ?

ಕಳೆದ ಜನವರಿಂದ ಸೆಪ್ಟೆಂಬರ್‌ ವರೆಗೆ ನಗರ ಪೊಲೀಸರು 3,141 ಕೆ.ಜಿ.ಗಾಂಜಾ, 7,541 ಎಕ್ಸ್‌ಟೆಸಿ ಪಿಲ್‌, 11,204 ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಜಪ್ತಿ ಮಾಡಿದ್ದಾರೆ. ಹಿಂದಿನ ಮೂರು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎನ್‌ಡಿಪಿಎಸ್‌ ಪ್ರಕರಣಗಳ ಸಂಖ್ಯೆ ಹಾಗೂ ಜಪ್ತಿ ಮಾಡಿದ ವಿವಿಧ ರೀತಿಯ ಡ್ರಗ್ಸ್‌ ಪ್ರಮಾಣವೂ ಹೆಚ್ಚಳವಾಗಿದೆ.

ಲೋಕಲ್‌ ಗಾಂಜಾದಿಂದ ವಿದೇಶಿ ಡ್ರಗ್ಸ್‌ ತನಕ ಪ್ರತಿಯೊಂದೂ ಲಭ್ಯ

ನಗರದಲ್ಲಿ ಲೋಕಲ್‌ ಗಾಂಜಾದಿಂದ ಆರಂಭವಾಗಿ ವಿದೇಶಗಳಲ್ಲಿ ಹೆಚ್ಚು ಬಳಸುವ ದುಬಾರಿ ಮೌಲ್ಯದ ಸಿಂಥೆಟಿಕ್‌ ಡ್ರಗ್ಸ್‌ ವರೆಗೂ ಲಭ್ಯವಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಕೊಳಗೇರಿ ಯುವಕರು, ಕಾರ್ಮಿಕರು ಕಡಿಮೆ ದರಕ್ಕೆ ಸಿಗುವ ಗಾಂಜಾ ಸೇವಿಸುತ್ತಾರೆ. ಆದರೆ, ಹೈ ಪ್ರೊಫೈಲ್‌ ಜನರು ಸಿಂಥೆಟಿಕ್‌ ಡ್ರಗ್ಸ್‌ನ ಗ್ರಾಹಕರಾಗಿದ್ದಾರೆ. ಅಂದರೆ, ಎಂಡಿಎಂ, ಬ್ರೌನ್‌ ಶುಗರ್‌, ಎಕ್ಸ್‌ಟೆಸಿ ಪಿಲ್ಸ್‌, ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಇತ್ಯಾದಿ ದುಬಾರಿ ಡ್ರಗ್ಸ್‌ಗಳನ್ನು ಸೇವಿಸುತ್ತಾರೆ. ನೆರೆಯ ಆಂಧ್ರಪ್ರದೇಶದ ವಿಶಾಪಟ್ಟಣ ಕಡೆಯಿಂದ ನಗರಕ್ಕೆ ಹೆಚ್ಚಾಗಿ ಗಾಂಜಾ ಬರುತ್ತಿದೆ. ಫಿಲಿಫೈನ್ಸ್‌, ಆಫ್ರಿಕಾ ಇತರೆ ದೇಶಗಳಿಂದ ಈ ಸಿಂಥೆಟಿಕ್‌ ಡ್ರಗ್ಸ್‌ ನಗರಕ್ಕೆ ಬರುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
 

Follow Us:
Download App:
  • android
  • ios