ಮಿರ್ಜಾಪುರ(ಜೂ.10): ಚಿಕಿತ್ಸೆ ನೀಡಿ ಪ್ರಾಣ ಉಳಿ​ಸ​ಬೇ​ಕಿದ್ದ ವೈದ್ಯರೇ ಯುವ​ತಿ​ಯೊ​ಬ್ಬಳ ಮೇಲೆ ಸಾಮೂ​ಹಿಕ ಅತ್ಯಾ​ಚಾರ ನಡೆಸಿ ಆಕೆಯ ಸಾವಿಗೆ ಕಾರ​ಣ​ವಾ​ಗಿ​ರುವ ಪೈಶಾ​ಚಿಕ ಘಟನೆ ಉತ್ತರ ಪ್ರದೇ​ಶದ ಪ್ರಯಾಗ್‌ ರಾಜ್‌ ಜಿಲ್ಲೆಯ ಎಸ್‌​ಆ​ರ್‌​ಎನ್‌ ಆಸ್ಪ​ತ್ರೆ​ಯಲ್ಲಿ ನಡೆ​ದಿದೆ. ಅತ್ಯಾ​ಚಾ​ರ​ದಿಂದ ನಿತ್ರಾ​ಣ​ಗೊಂಡಿದ್ದ ಯುವತಿ ಚಿಕಿತ್ಸೆ ಫಲಿ​ಸದೇ ಮಂಗ​ಳ​ವಾರ ಸಾವಿ​ಗೀ​ಡಾ​ಗಿ​ದ್ದಾಳೆ.

ಮಿರ್ಜಾ​ಪುರ ಮೂಲದ ಯುವತಿ ಮೇ 29ರಂದು ಕರುಳು ಸಂಬಂಧಿತ ಸಮ​ಸ್ಯೆ​ಯಿಂದಾ​ಗಿ ಆಸ್ಪ​ತ್ರೆಗೆ ದಾಖ​ಲಾ​ಗಿ​ದ್ದಳು. ಜೂ.1ರಂದು ಯುವ​ತಿಯನ್ನು ಶಸ್ತ್ರ ಚಿಕಿ​ತ್ಸೆ​ಗಾಗಿ ಆಪ​ರೇ​ಷನ್‌ ಕೋಣೆಗೆ ಕರೆ​ದೊ​ಯ್ದು ವೈದ್ಯರ ಗುಂಪು ಆಕೆಯ ಮೇಲೆ ಸಾಮೂ​ಹಿಕ ಅತ್ಯಾ​ಚಾರ ಎಸ​ಗಿದೆ ಎಂದು ಆರೋ​ಪಿ​ಸಲಾಗಿದೆ.

ಶಸ್ತ್ರ ಚಿಕಿ​ತ್ಸೆಯ ಬಳಿಕ ತನ್ನ ಮೇಲೆ ಅತ್ಯಾ​ಚಾರ ನಡೆದ ಸಂಗ​ತಿ​ಯನ್ನು ಯುವ​ತಿ ಸಹೋ​ದ​ರನ ಬಳಿ ಹೇಳಿ​ಕೊಂಡಿ​ದ್ದಳು. ಬಳಿಕ ಪೊಲೀ​ಸರು ಬಂದು ಆಕೆಯ ಹೇಳಿಕೆ ದಾಖ​ಲಿ​ಸಿ​ಕೊಂಡಿ​ದ್ದರು. ತದ​ನಂತ​ರ​ದಲ್ಲಿ ಮಹಿಳೆ ಪ್ರಜ್ಞಾ​ಹೀ​ನ​ಳಾ​ಗಿದ್ದು, ಚಿಕಿತ್ಸೆ ಫಲಿ​ಸದೇ ಸಾವಿ​ಗೀ​ಡಾ​ಗಿ​ದ್ದಾಳೆ.