ಕೊಲ್ಲಂ[ನ.30]: ರಸ್ತೆಯಲ್ಲಿ ತೆರಳುವಾಗ ಯುವಕನೊಬ್ಬ ತಪಾಸಣೆಗಾಗಿ ಬೈಕ್ ನಿಲ್ಲಿಸಿಲ್ಲವೆಂದು ಪೊಲೀಸ್ ಸಿಬ್ಬಂದಿ ತನ್ನ ಕೈಯ್ಯಲ್ಲಿದ್ದ ಲಾಠಿಯನ್ನೇ ಸವಾರನ ಮೇಲೆ ಎಸೆದಿರುವ ಘಟನೆಕೇರಳದಲ್ಲಿ ನಡೆದಿದೆ. ಪೊಲೀಸಪ್ಪ ಲಾಠಿ ಎಸೆದ ಪರಿಣಾಮ ಬೈಕ್ ಓಡಿಸುತ್ತಿದ್ದ 19ರ ಬಾಲಕ ನಿಯಂತ್ರಣ ಕಳೆದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೊಲ್ಲಂನ ಕಾಡಕ್ಕಲ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಸಿದ್ದಿಕ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿದ್ದಿಕ್ ಬೈಕ್ ಚಲಾಯಿಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಪೊಲೀಸರು ತಪಾಸಣೆಗೆಂದು ಬೈಕ್ ನಿಲ್ಲಿಸುವಂತೆ ಸೂಚಿಸಿದಾಗ ಮುಖ್ಯ ರಸ್ತೆಯಲ್ಲಿದ್ದ ಚೆಕ್ ಪೋಸ್ಟ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 

ಆದರೆ  ಪೊಲೀಸ್ ಸಿಬ್ಬಂದಿ ಚಂದ್ರ ಮೋಹನ್ ಹೆಸರಿನ ತನ್ನ ಸೂಚನೆ ನಿರ್ಲಕ್ಷಿಸಿ ಹೋದ ಸಿದ್ಧಿಕ್ ಮೇಲೆ ಕೋಪಗೊಂಡಿದ್ದು, ತಮ್ಮ ಕೈಯ್ಯಲ್ಲಿದ್ದ ಲಾಠಿಯನ್ನು ಆತನೆಡೆ ಎಸೆದಿದ್ದಾರೆ. ಇದನ್ನು ಗಮನಿಸಿದ ಸಿದ್ದಿಕ್ ಲಾಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಭರದಲ್ಲಿ, ನಿಯಂತ್ರಣ ಕಳೆದುಕೊಂಡು ಎದುರಿಂದ ಬರುತ್ತಿದ್ದ ಕಾರಿಗೆ ಬೈಕ್ ಗುದ್ದಿದ್ದಾರೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ತಿರುವನಂತಪುರಂ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಕೊಲ್ಲಂ ಗ್ರಾಮೀಣ ಪ್ರದೇಶದ SP ಹರಿಶಂಕರ್ 'ಪೊಲೀಸ್ ಸಿಬ್ಬಂದಿ ಚಂದ್ರ ಮೋಹನ್ ಲಾಠಿ ಎಸೆದಿರುವುದು ಖಚಿತವಾಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಿದ್ದೇವೆ ಹಾಗೂ ತನಿಖೆಗೆ ಆದೇಶಿಸಿದ್ದೇವೆ' ಎಂದಿದ್ದಾರೆ.