Asianet Suvarna News Asianet Suvarna News

ಬಿಗ್‌ಬಾಸ್‌ ಸ್ಪರ್ಧಿ, ನಿರ್ಮಾಪಕ ಡ್ರಗ್ಸ್‌ ಸೇವನೆ ವರದಿ ನೆಗೆಟಿವ್‌

ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತ ಮಾಹಿತಿ| ಕನ್ನಡ ಬಿಗ್‌ಬಾಸ್‌ ಸ್ಪರ್ಧಿ ಚಂದ್ರ ಮಸ್ತಾನ್‌ ಹಾಗೂ ಚಲನಚಿತ್ರ ನಿರ್ಮಾಪಕ ಶಂಕರೇಗೌಡ ಅವರ ವೈದ್ಯಕೀಯ ವರದಿ| ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು| ವೈದ್ಯಕೀಯ ವರದಿ ಬೆನ್ನಲ್ಲೇ ಮುಂದಿನ ಕ್ರಮದ ಕುರಿತು ಸಲಹೆ ಕೋರಿದ ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳು| 

Kannada Bigboss Contestant Producer Drugs Consumption Report Negative grg
Author
Bengaluru, First Published Mar 19, 2021, 8:16 AM IST

ಬೆಂಗಳೂರು(ಮಾ.19):  ಮಾದಕ ವಸ್ತು ಮಾರಾಟ ಜಾಲದ ಸುಳಿಗೆ ಸಿಲುಕಿರುವ ಕನ್ನಡ ಬಿಗ್‌ಬಾಸ್‌ ಸ್ಪರ್ಧಿ ಚಂದ್ರ ಮಸ್ತಾನ್‌ ಹಾಗೂ ಚಲನಚಿತ್ರ ನಿರ್ಮಾಪಕ ಶಂಕರೇಗೌಡ ಅವರ ವೈದ್ಯಕೀಯ ವರದಿಯಲ್ಲಿ ಡ್ರಗ್ಸ್‌ ಸೇವನೆ ದೃಢಪಟ್ಟಿಲ್ಲ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳ ಜತೆ ಸಂಪರ್ಕ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನೂ ಗೋವಿಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸಂಜಯನಗರದಲ್ಲಿರುವ ಈ ಇಬ್ಬರ ಮನೆಗಳ ಮೇಲೆ ಪೊಲೀಸರ ದಾಳಿ ಸಹ ನಡೆದಿತ್ತು.

ಡ್ರಗ್ಸ್‌ ಸೇವನೆ ಬಗ್ಗೆ ಖಚಿತಪಡಿಸಿಕೊಳ್ಳಲು ಮಾ.5ರಂದು ಮಸ್ತಾನ್‌ ಹಾಗೂ ಮಾ.9ರಂದು ಶಂಕರೇಗೌಡ ಅವರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಪೊಲೀಸರು ರಕ್ತ ಮತ್ತು ಮೂತ್ರ ಪರೀಕ್ಷೆಗೊಳಪಡಿಸಿದ್ದರು. ಆದರೆ ಈ ಇಬ್ಬರ ವೈದ್ಯಕೀಯ ವರದಿ ನೆಗೆಟಿವ್‌ ಬಂದಿದ್ದು, ಅವರಿಗೆ ಸ್ವಲ್ಪ ನಿರಾಳತೆ ಮೂಡಿಸಿದೆ. ಈ ವೈದ್ಯಕೀಯ ವರದಿ ಬೆನ್ನಲ್ಲೇ ಮುಂದಿನ ಕ್ರಮದ ಕುರಿತು ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಲಹೆ ಕೋರಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಪಾರ್ಟ್-2, ಈ ಸೆಲೆಬ್ರಿಟಿಗಳಿಗೂ ಕಂಟಕ?

ಮಾ.4ರಂದು ನಾಗವಾರ ಜಂಕ್ಷನ್‌ ಸಮೀಪ ಡ್ರಗ್ಸ್‌ ಮಾರಾಟಕ್ಕೆ ಯತ್ನಿಸಿದ್ದಾಗ ಮೂವರು ವಿದೇಶಿ ಪೆಡ್ಲರ್‌ಗಳು ಗೋವಿಂದಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಪೆಡ್ಲರ್‌ ವಿಚಾರಣೆ ವೇಳೆ ಚಂದ್ರ ಮಾಸ್ತನ್‌ನ ಹೆಸರು ಬೆಳಕಿಗೆ ಬಂದಿತ್ತು. ಈ ಮಾಹಿತಿ ಮೇರೆಗೆ ಮಾ.5ರಂದು ಸಂಜಯ ನಗರದಲ್ಲಿ ಇರುವ ಮಾಸ್ತನ್‌ ಮನೆ ಮೇಲೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಬಳಿಕ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಚಲನಚಿತ್ರ ನಿರ್ಮಾಪಕ ಶಂಕರೇಗೌಡ ಹಾಗೂ ತೆಲಗು ನಟ ತಾನೀಶ್‌ ಸೇರಿದಂತೆ ಹಲವು ಹೆಸರು ಬಹಿರಂಗವಾಗಿದ್ದವು. ಅಂತೆಯೇ ಶಂಕರೇಗೌಡನನ್ನು ವಶಕ್ಕೆ ಪಡೆದು ಪೊಲೀಸರು, ಮಾ.9ರಂದು ಅವರಿಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದರು.
ನಗರದ ಪಬ್‌, ರೆಸಾರ್ಟ್‌ ಹಾಗೂ ಹೋಟೆಲ್‌ ಸೇರಿದಂತೆ ಇತರೆ ಮಾಸ್ತನ್‌ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಶಂಕರೇಗೌಡ, ನಟ ತಾನೀಶ್‌ ಸೇರಿದಂತೆ ಹಲವು ಮಂದಿ ಹಾಜರಾಗಿರುವುದಕ್ಕೆ ತನಿಖೆಯಲ್ಲಿ ಪುರಾವೆ ಸಿಕ್ಕಿವೆ. ಆದರೆ ಡ್ರಗ್ಸ್‌ ಸೇವನೆ ಬಗ್ಗೆ ಖಚಿತವಾಗಿಲ್ಲ. ಹೀಗಾಗಿ ಬೇರೆ ಆಯಾಮದಲ್ಲೂ ಅವರನ್ನು ತನಿಖೆಗೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Follow Us:
Download App:
  • android
  • ios