ಶಿವಮೊಗ್ಗ: ಕಮಲಮ್ಮ ಹತ್ಯೆ ಪ್ರಕರಣ, ಕಾರು ಚಾಲಕ ಸೇರಿ 7 ಜನರ ಬಂಧನ
ನಗರದಲ್ಲಿ ನಡೆದಿದ್ದ ಎಂಜಿನಿಯರ್ ಮಲ್ಲಿಕಾರ್ಜುನ ಪತ್ನಿ ಕಮಲಮ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜಿನಿಯರ್ ಕಾರು ಚಾಲಕ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಲಾಗಿದೆ
ಶಿವಮೊಗ್ಗ (ಜು.1) : ನಗರದಲ್ಲಿ ನಡೆದಿದ್ದ ಎಂಜಿನಿಯರ್ ಮಲ್ಲಿಕಾರ್ಜುನ ಪತ್ನಿ ಕಮಲಮ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜಿನಿಯರ್ ಕಾರು ಚಾಲಕ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ದೋಚಿದ್ದ .33.74 ನಗದು ಹಣ, ಒಂದು ಕಾರು, ಎರಡು ಬೈಕ್ ಹಾಗೂ 7 ಮೊಬೈಲ್ ಸೇರಿದಂತೆ 41,14,800 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಜಿನಿಯರ್ ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಹುಣಸೋಡು ತಾಂಡಾದ ಹನುಮಂತ ನಾಯ್ಕ (22) ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಲ್ಲಿಜಕಾರ್ಜುನ ಅವರು ತಮ್ಮ ಮಗನ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಕಟ್ಟುವ ಸಲುವಾಗಿ .35 ಲಕ್ಷ ಹಣವನ್ನು ಅವರ ಸ್ನೇಹಿತರ ಬಳಿ ಕೈ ಸಾಲ ಪಡೆದು ಮನೆಯಲ್ಲಿ ತಂದಿಟ್ಟಿದ್ದರು. ಈ ಎಲ್ಲ ಹಣವನ್ನು ಚಾಲಕ ಹನುಮಂತ ನಾಯ್ಕ ಮೂಲಕವೇ ತರಿಸಿ ಮನೆಯಲ್ಲಿಟ್ಟಿದ್ದರು. ಹೀಗಾಗಿ, ಈ ಹಣ ಲಪಟಾಯಿಸುವ ಉದ್ದೇಶದಿಂದ ಹನುಮಂತ ನಾಯ್ಕ ಸ್ನೇಹಿತರೊಂದಿಗೆ ಸೇರಿ ಕುತಂತ್ರ ರೂಪಿಸಿದ್ದನು ಎಂದು ಮಾಹಿತಿ ನೀಡಿದರು.
ಒಂಟಿ ಮಹಿಳೆ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ತಾಯಿ ಮನನೊಂದು ಆತ್ಮಹತ್ಯೆಗೆ ಯತ್ನ
ಈ ಕೃತ್ಯದಲ್ಲಿ ಹನುಮಂತ ನಾಯ್‌್ಕನೊಂದಿಗೆ ಶಾಮೀಲಾಗಿದ್ದ ಆತನ ಸ್ನೇಹಿತರಾದ ಗುಂಡಪ್ಪ ಶೆಡ್‌ನ ವಿ.ಪ್ರದೀಪ್ ಯಾನೆ ಮೊದಲಿಯಾರ್ (21), ಅನುಪಿನಕಟ್ಟೆತಾಂಡಾದ ಅಪ್ಪುನಾಯ್ಕ ಸಿ. ಯಾನೆ ಅಪ್ಪು (21), ಗುಂಡಪ್ಪ ಶೆಡ್‌ನ ವಿ.ಸತೀಶ್ (26), ಅನುಪಿನಕಟ್ಟೆತಾಂಡಾದ ವೈ.ರಾಜು ಯಾನೆ ತೀತಾ (24) ಎಂಬವರನ್ನು ಬಂಧಿಸಲಾಗಿದೆ. ಅಲ್ಲದೇ, ಈ ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬ 7ನೇ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳೆಲ್ಲರೂ ಕೂಲಿ ಹಾಗೂ ಗಾರೆ ಕೆಲಸ ಮಾಡುವವರಾಗಿದ್ದಾರೆ. ಇವರೆಲ್ಲರೂ ಟೀ, ಮದ್ಯದಂಗಡಿಗಳನ್ನು ಅಡ್ಡೆಯಾಗಿ ಮಾಡಿಕೊಂಡಿದ್ದರು. ಇವರ ಪರಿಚಯ ಮಾಡಿಕೊಂಡ ಡ್ರೈವರ್ ಹನುಮಂತ ನಾಯ್ಕ… ಮನೆಯಲ್ಲಿ ಹಣ ಇರುವುದು ಖಚಿತ, ಇದನ್ನು ದೋಚಬೇಕು ಎಂದು ಪ್ಲಾನ್ ಮಾಡಿದ್ದರು. ಹನುಮಂತ ನಾಯ್ಕ… ಒಂದು ವರ್ಷದಿಂದ ಎಂಜಿನಿಯರ್ ಮಲ್ಲಿಕಾರ್ಜುನಪ್ಪ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಅವರು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಹಾಗಾಗಿ ಇವರ ಕುಟುಂಬಕ್ಕೆ ಹತ್ತಿರವಾಗಿದ್ದು, ಅವರ ವಿವರಗಳನ್ನು ತಿಳಿದುಕೊಂಡಿದ್ದ ಮತ್ತು ಹಣವನ್ನು ದೋಚಲು ಮುಂಚೆಯೇ ಉಪಾಯ ಮಾಡಿದ್ದ ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಗೋವಾಕ್ಕೆ ತೆರಳಿದ ಸಂದರ್ಭ ನೋಡಿಕೊಂಡು ಹನುಮಂತ ನಾಯ್ಕ ಜೂ.16ರಂದು ರಾತ್ರಿ ಅವರ ಮನೆಗೆ ಹೋಗಿ ತನ್ನ ಸೋದರನಿಗೆ ಅಪಘಾತವಾಗಿದ್ದು, ಆತನ ಚಿಕಿತ್ಸೆಗೆ 2 ಸಾವಿರ ಹಣ ಬೇಕೆಂದು ಕಮಲಮ್ಮನವರ ಬಳಿ ಹಣ ಕೇಳಿದ್ದ. ಆ ಸಂದಭದಲ್ಲಿ ಹಣ ನೀಡದೆ ಮಾರನೇ ದಿನ ಬರುವಂತೆ ಹೇಳಿದ್ದರು. ಮರುದಿನ ಹನುಮಂತ ನಾಯ್‌್ಕ ತನ್ನ ಸ್ನೇಹಿತರಾದ ವಿ.ಪ್ರದೀಶ್, ಅಪ್ಪು ನಾಯ್ಕರೊಂದಿಗೆ ಮನೆಯ ಬಳಿ ಹೋಗಿ ಚಿಕಿತ್ಸೆಗೆ ಹಣ ಕೇಳಿದ್ದಾನೆ. ಆಗ ಕಮಲಮ್ಮ ಹಣ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಕುಡಿಯಲು ನೀರು ಕೇಳಿ, ನೀರು ಕೊಡಲು ಕಮಲಮ್ಮ ಒಳಗೆ ಹೋಗಲು ತಿರುಗುತ್ತಿದ್ದಂತೆ ಅಪ್ಪು ನಾಯ್ಕ ಹಿಂದೆಯೇ ಒಳಗೆ ಹೋಗಿ ಬಾಯಿ ಒತ್ತಿ ಹಿಡಿಯಲು ಮುಂದಾದಾಗ ಕಮಲಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆಗ ಕಬ್ಬಿಣದ ಚೂಪಾದ ರಾಡಿನಿಂದ ಕುತ್ತಿಗೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಹಣ ತೆಗೆದುಕೊಂಡು ಎಲ್ಲರೂ ಪರಾರಿಯಾಗಿದ್ದರು ಎಂದು ಮಾಹಿತಿ ನೀಡಿದರು.
ಘಟನೆ ಬಳಿಕ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದರು. ಅವರು ದೋಚಿದ್ದ ಹಣದಲ್ಲಿ ಹೋಟೆಲ್‌ನಲ್ಲಿ ಉಳಿದು, ಹೊಸ ಮೊಬೈಲ್‌ಗಳನ್ನು ಖರೀದಿ ಮಾಡಿದ್ದರು. ತುಂಗಾನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಮಹಿಳೆ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ; ನಗದು ಹಣ ದೋಚಿದ ದುಷ್ಕರ್ಮಿಗಳು
ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್, ಪಿಎಸ್‌ಐ ಕುಮಾರ್, ರಘುವೀರ್, ಸಿಬ್ಬಂದಿ ಕಿರಣ್, ರಾಜು, ಅರುಣ್‌ಕುಮಾರ್, ಅಶೋಕ್, ಮೋಹನ್, ಕೇಶವ್‌ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್ ನಾಯ್ಕ ಮತ್ತಿತರರು ಇದ್ದರು.