ಬೆಂಗಳೂರು(ಆ.07):  ಅಕ್ರಮದ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರ ಪತ್ನಿಯ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜೆ.ಪಿ.ನಗರ ಸಮೀಪ ನಡೆದಿದೆ.

ಸಿಲ್ವರ್‌ ಓಕ್‌ ಸ್ಟ್ರೀಟ್‌ ನಿವಾಸಿ ನಝೀನಾ (46) ಮೃತ ದುರ್ದೈವಿ. ಪ್ರಕರಣ ಸಂಬಂಧ ಮೃತಳ ಪತಿ ಖಲೀಂ ಷರೀಫ್‌ನ್ನು ಬಂಧಿಸಲಾಗಿದೆ. ಕೌಟುಂಬಿಕ ವಿಚಾರವಾಗಿ ಷರೀಫ್‌ ದಂಪತಿ ಮಧ್ಯೆ ಬುಧವಾರ ಗಲಾಟೆ ನಡೆದಿದ್ದು ಕೋಪಗೊಂಡ ಆತ, ತನ್ನ ಪತ್ನಿ ಕುತ್ತಿಗೆ ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.

ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

ತಲಾಖ್‌ ಪಡೆದು ಕೊಲೆ

ಎರಡು ದಶಕಗಳ ಹಿಂದೆ ಖಲೀಂ ಹಾಗೂ ನಝೀನಾ ವಿವಾಹವಾಗಿದ್ದು, ದಂಪತಿಗೆ ಐವರು ಮಕ್ಕಳಿದ್ದಾರೆ. ಇತ್ತೀಚಿಗೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿದ್ದ ಖಲೀಂ, ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕಳೆದ ತಿಂಗಳ ಮನೆ ಬಿಟ್ಟು ಹೋಗಿ ನಝೀನಾ ಮರಳಿದ್ದಳು. ಬಳಿಕ ಇಬ್ಬರ ಮಧ್ಯೆ ವಿರಸ ಮತ್ತಷ್ಟು ಹೆಚ್ಚಾಯಿತು. ಇದರಿಂದ ಬೇಸತ್ತು ಇಬ್ಬರು ಒಮ್ಮತದಿಂದ ಪ್ರತ್ಯೇಕವಾಗಲು ನಿರ್ಧರಿಸಿದ್ದರು. ಅಂತೆಯೇ ಬನ್ನೇರುಘಟ್ಟ ರಸ್ತೆಯ ಪ್ರಾರ್ಥನಾ ಮಂದಿರಕ್ಕೆ ಬುಧವಾರ ಬೆಳಗ್ಗೆ ತೆರಳಿ ದಂಪತಿ ತಲಾಖ್‌ ಪಡೆದು ಮನೆಗೆ ಮರಳಿದ್ದಾರೆ. ಮಧ್ಯಾಹ್ನ ಮನೆಯಲ್ಲಿ ಪುನಃ ಕೌಟುಂಬಿಕ ವಿಚಾರ ಪ್ರಸ್ತಾಪಿಸಿ ಗಲಾಟೆ ಶುರುವಾಗಿದೆ.
ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಖಲೀಂ, ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಕೂಡಲೇ ಚೀರಾಟ ಸದ್ದು ಕೇಳಿ ಜಮಾಯಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.