ಭಾರೀ ಚಿನ್ನ, ಹಣದ ದುರಾಸೆಯಿಂದ ನಿವೃತ್ತ ಯೋಧನ ಹತ್ಯೆ, ಹಂತಕರಿಗೆ ಸಿಕ್ಕಿದ್ದು ಪುಡಿಗಾಸು!

* ನಿವೃತ್ತ ಸೈನಿಕನ ಹಂತಕರಿಗೆ ಸಿಕ್ಕಿದ್ದು ಪುಡಿಗಾಸು!

* ಸುರೇಶ್‌ ಬಳಿ ಭಾರಿ ಹಣ, ಚಿನ್ನ ಇದೆ ಎಂದು ದುರಾಸೆಯಿಂದ ಹತ್ಯೆಗೈದ ಶುಶ್ರೂಷಕ

* ಸಿಕ್ಕಿದ್ದು 5 ಸಾವಿರ ಹಣ, ಐ ಫೋನ್‌, ಐವರ ಬಂಧನ

* ಸೇನಾಧಿಕಾರಿಯ ತಾಯಿಗೆ ಕೇರ್‌ ಟೇಕರ್‌ ಆಗಿದ್ದ ಬಾಬು

 

Greed Of Huge Money And Gold Caretaker Kills retired soldier gets nothing than a Phone and 5000 rs pod

ಬೆಂಗಳೂರು(ಏ.16): ಎರಡು ದಿನಗಳ ಹಿಂದೆ ಭಾರಿ ಬಂಗಾರ ಹಾಗೂ ಹಣ ಸಿಗುತ್ತದೆ ಎಂದು ಊಹಿಸಿ ಹಲಸೂರು ಸಮೀಪ ನಿವೃತ್ತ ಸೇನಾಧಿಕಾರಿಯೊಬ್ಬನನ್ನು ಹತ್ಯೆಗೈದಿದ್ದ ಖಾಸಗಿ ಆಸ್ಪತ್ರೆಯ ಶುಶ್ರೂಷಕ ಹಾಗೂ ಆತನ ಸಂಬಂಧಿಕರಿಗೆ ಸಿಕ್ಕಿದ್ದು ಕೇವಲ .5 ಸಾವಿರ ರುಪಾಯಿ ಹಾಗೂ ಐ ಫೋನ್‌ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮಾರತ್ತಹಳ್ಳಿಯ ಬಾಬು, ಆತನ ಸೋದರ ಮುರಳಿ ಹಾಗೂ ಸಂಬಂಧಿಕರಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಜೇಂದ್ರ, ರಾಜೇಂದ್ರ ನಾಯಕ್‌ ಹಾಗೂ ದೇವೇಂದ್ರ ನಾಯಕ್‌ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಹಲಸೂರು ಸಮೀಪದ ಗೌತಮ್‌ ಕಾಲೋನಿಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ನಿವೃತ್ತ ಸೇನಾಧಿಕಾರಿ ಜ್ಯೂಡ್‌ ತೆಡ್ನಾಸ್‌ ಅಲಿಯಾಸ್‌ ಸುರೇಶ್‌ ಅವರನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಅನುಮಾನದ ಮೇರೆಗೆ ಮೃತನ ಪರಿಚಿತ ಮಣಿಪಾಲ್‌ ಆಸ್ಪತ್ರೆ ಶುಶ್ರೂಷಕ ಬಾಬುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ದುರಾಸೆಗೆ ಬಿದ್ದು ಶುಶ್ರೂಷಕ ಸುಶ್ರೂಷಕ:

ಆಂಧ್ರಪ್ರದೇಶದ ಬಾಬು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಮಣಿಪಾಲ್‌ ಆಸ್ಪತ್ರೆಯಲ್ಲಿ ಶ್ರುಶೂಷಕನಾಗಿದ್ದ ಆತನಿಗೆ ಸುರೇಶ್‌ ಪರಿಚಿತರಾಗಿದ್ದರು. ತಮ್ಮ ತಾಯಿ ನೋಡಿಕೊಳ್ಳುವ ಸಲುವಾಗಿ ಆತನನ್ನು ಕೇರ್‌ ಟೇಕರ್‌ ನರ್ಸ್‌ ಆಗಿ ಅವರು ನೇಮಿಸಿಕೊಂಡಿದ್ದರು. ಹಲವು ದಿನಗಳ ಹಿಂದೆಯೇ ಅನಾರೋಗ್ಯದಿಂದ ಅವರ ತಾಯಿ ಮೃತಪಟ್ಟಿದ್ದರು. ಆದರೂ ಕೂಡಾ ಬಾಬು ಜತೆ ಸ್ನೇಹವನ್ನು ಸುರೇಶ್‌ ಮುಂದುವರೆಸಿದ್ದರು. ಈ ಗೆಳೆತನದಲ್ಲೇ ತಮ್ಮ ಹಣಕಾಸು ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದರು. ಇತ್ತೀಚೆಗೆ ಹೊಸದಾಗಿ ಆಸ್ತಿ ಖರೀದಿಸುವುದಾಗಿ ಬಾಬು ಬಳಿ ಸುರೇಶ್‌ ಹೇಳಿಕೊಂಡಿದ್ದರು. ಆಗ ಹಣದಾಸೆಗೆ ಬಿದ್ದ ಬಾಬು, ಸುರೇಶ್‌ ಮನೆಯಲ್ಲಿ ಭಾರಿ ಹಣವಿದೆ. ಏಕಾಂಗಿಯಾಗಿ ನೆಲೆಸಿರುವ ಅವರನ್ನು ಬೆದರಿಸಿ ನಗ-ನಾಣ್ಯ ದೋಚಲು ಯೋಜಿಸಿದ. ಇದಕ್ಕೆ ಆತನಿಗೆ ಸೋದರ ಮುರಳಿ ಹಾಗೂ ಸಂಬಂಧಿಕರ ಸಾಥ್‌ ಸಿಕ್ಕಿದೆ.

ಈ ಸೋದರ ಸಂಬಂಧಿಗಳು ಸೇರಿ ಸುರೇಶ್‌ ಮನೆಯಲ್ಲಿ ಮಂಗಳವಾರ ರಾತ್ರಿ ದರೋಡೆಗೆ ಸಂಚು ರೂಪಿಸಿದ್ದರು. ಅಂತೆಯೇ ರಾತ್ರಿ ಸ್ನೇಹದ ಸೋಗಿನಲ್ಲಿ ಸುರೇಶ್‌ ಮನೆಗೆ ಬಾಬು ತೆರಳಿದ್ದಾನೆ. ಆಗ ತಮ್ಮ ಹತ್ಯೆ ಸಂಚು ಅರಿಯದೆ ಬಾಗಿಲು ತೆರೆದು ಗೆಳೆಯನನ್ನು ಮನೆಯೊಳಗೆ ಸುರೇಶ್‌ ಬಿಟ್ಟು ಕೊಂಡಿದ್ದಾರೆ. ಮನೆಯೊಳಗೆ ಪ್ರವೇಶಿಸಿದ ಬಳಿಕ ಬಾಬು, ಸುರೇಶ್‌ಗೆ ಹಣ ಹಾಗೂ ಆಭರಣ ಕೊಡುವಂತೆ ಧಮ್ಕಿ ಹಾಕಿದ್ದಾನೆ. ಈ ಬೆದರಿಕೆಯಿಂದ ಭೀತಿಗೊಂಡ ಅವರು, ತನ್ನ ಬಳಿ ಹಣ ಅಥವಾ ಚಿನ್ನ ಇಲ್ಲ ಎಂದಿದ್ದಾರೆ. ಆಗ ಅವರಿಗೆ ಖಾರದಪುಡಿ ಎರಚಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಬಳಿಕ ಮನೆಯಲ್ಲಿ ಹುಡುಕಾಡಿದರೂ ತಾವು ನಿರೀಕ್ಷಿಸಿದ ಅಪಾರ ಪ್ರಮಾಣದ ಚಿನ್ನ ಹಾಗೂ ಹಣ ಸಿಗದೆ ಬಾಬು ಹಾಗೂ ಆತನ ಸಂಬಂಧಿಕರು ನಿರಾಸೆಗೊಂಡಿದ್ದಾರೆ. ಕೊನೆಗೆ .5 ಸಾವಿರ ಹಾಗೂ ಐಪೋನ್‌ ದೋಚಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಹತ್ಯೆ ಬಳಿಕ ಮೃತನ ಸಂಬಂಧಿಕರು ಹಾಗೂ ಸ್ನೇಹಿತರ ಬಗ್ಗೆ ವಿಚಾರಿಸಿದಾಗ ಬಾಬು ಮೇಲೆ ಅನುಮಾನ ಬಂದಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ತೀವ್ರವಾಗಿ ಪ್ರಶ್ನಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios