ಅಪ್ರಾಪ್ತೆ ಅತ್ಯಾಚಾರ: 15ಕ್ಕೂ ಹೆಚ್ಚು ಮಂದಿ ಮೇಲೆ ಕೇಸ್| ಪೋಕ್ಸೋ ಕಾಯ್ದೆ ಅಡಿ ದೂರು ದಾಖಲು| 6 ಆರೋಪಿಗಳ ಬಂಧನ| ಬಾಲಕಿ ಮೇಲೆ ಅತ್ಯಾಚಾರಕ್ಕೆ ಸಹಕಾರ ನೀಡಿದ ಆರೋಪ
ಚಿಕ್ಕಮಗಳೂರು(ಫೆ.01): ಜಲ್ಲಿ ಕ್ರಷರ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಿಕ್ಕಮ್ಮನೊಂದಿಗೆ ವಾಸವಾಗಿದ್ದ ಹದಿನೈದರ ಹರೆಯದ ಬಾಲಕಿ ಮೇಲೆ ನಾಲ್ಕು ತಿಂಗಳಿಂದ ನಿಂತರ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 15ಕ್ಕೂ ಹೆಚ್ಚು ಮಂದಿ ಮೇಲೆ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಚಿಕ್ಕಮ್ಮ ಗೀತಾ ಸೇರಿ ಒಟ್ಟು 6 ಮಂದಿಯನ್ನು ಭಾನುವಾರ ಬಂಧಿಸಲಾಗಿದೆ.
ಬಾಲಕಿಯು ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾವಿಯವಳಾಗಿದ್ದು, 7ನೇ ತರಗತಿಯಲ್ಲಿ ಓದುತ್ತಿರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಹೀಗಾಗಿ ಶೃಂಗೇರಿಯ ಜಲ್ಲಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮ್ಮ ಆಕೆಯನ್ನು ಓದಿಸುವುದಾಗಿ ತನ್ನೊಟ್ಟಿಗೆ ಇಟ್ಟುಕೊಂಡಿದ್ದಳು. ಸದ್ಯ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದಳು.
ಸೆಪ್ಟಂಬರ್‌ನಲ್ಲಿ ಚಿಕ್ಕಮ್ಮನಿಗೆ ಆರೋಗ್ಯ ಸರಿ ಇಲ್ಲದಿದ್ದರಿಂದ ಬಾಲಕಿ ಜಲ್ಲಿ ಕ್ರಷರ್‌ನ ಕೆಲಸಕ್ಕೆ ಹೋಗಿದ್ದಳು. ಆ ವೇಳೆ ಚಾಲಕ ಕೆಲಸ ಮಾಡುತ್ತಿದ್ದ ಗಿರೀಶ್ ಪರಿಚಯವಾಗಿದ್ದು, ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರದ ದಿನಗಳಲ್ಲಿ ಗಿರೀಶ್ ತನ್ನ ಸ್ನೇಹಿತ ಅಭಿಗೆ ಈಕೆಯನ್ನು ಪರಿಚಯ ಮಾಡಿದ್ದ. ಆತ ಮತ್ತು ಆತನ ಸ್ನೇಹಿತರೂ ಈಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
30ಕ್ಕೂ ಹೆಚ್ಚು ಮಂದಿಯಿಂದ ಕೃತ್ಯ: ಸದ್ಯ 15ಕ್ಕೂ ಹೆಚ್ಚು ಮಂದಿ ಮೇಲೆ ಅತ್ಯಾಚಾರ ಪ್ರಕರಣ ಹಾಗೂ ಬಾಲಕಿ ಚಿಕ್ಕಮ್ಮ ಸೇರಿ ಇಬ್ಬರ ಮೇಲೆ ಅತ್ಯಾಚಾರಕ್ಕೆ ಸಹಕಾರ ನೀಡಿದ ಪ್ರಕರಣ ದಾಖಲಾಗಿದೆ. ಆದರೆ, ಬಾಲಕಿ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಸುಮಾರು 30 ಮಂದಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಉಳಿದ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಈ ಪ್ರಕರಣ ಶೃಂಗೇರಿ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯ ಗಮನಕ್ಕೆ ಮೊದಲು ಬಂದಿದ್ದು, ತಕ್ಷಣ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಶೃಂಗೇರಿ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಬಾಲಕಿಯನ್ನು ರಕ್ಷಿಸಿ ಚಿಕ್ಕಮಗಳೂರಿನ ಸ್ವಾಧಾರ ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿದೆ.
ಕ್ರಷರ್ ಮಾಲೀಕರ ವಿರುದ್ಧವೂ ಕೇಸ್: ಜಲ್ಲಿ ಕ್ರಷರ್‌ನಲ್ಲಿ ಬಾಲಕಿಯಿಂದ ಕೆಲಸ ಮಾಡಿಸಿದ ಕಾರಣಕ್ಕಾಗಿ ಕ್ರಷರ್ ಮಾಲೀಕರ ವಿರುದ್ಧ ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 1, 2021, 7:17 AM IST