ಉತ್ತರಕನ್ನಡ: ಶೀಲ ಶಂಕಿಸಿ ಗಂಡನ ಮನೆಯವರಿಂದಲೇ ಮಹಿಳೆಯ ಹತ್ಯೆ: ಕೊಲೆಗಡುಕರನ್ನ ಜೈಲಿಗಟ್ಟಿದ ಪೊಲೀಸರು..!

ಬಾಳಿ ಬದುಕಬೇಕಿದ್ದ ತನಿಜಾಳನ್ನು ಸಂಶಯದ ಪಿಶಾಚಿಗಳಾಗಿದ್ದ ಆಕೆಯ ಗಂಡನ ಅಣ್ಣ ಹಾಗೂ ಕುಟುಂಬದ ಸದಸ್ಯರು ಕೊಂದು ಮುಗಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.
 

Five Arrested For Women Murder Case at Kumta in Uttara Kannada grg

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಜೂ.23): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೃತದೇಹ ದೊರಕಿತ್ತು.‌ ನೋಡಲು ಕೊಲೆಯೆಂದು ತಿಳಿದು ಬಂದಿದ್ರೂ, ಮಹಿಳೆ ಯಾರು..? ಯಾಕಾಗಿ ಕೊಲೆಯಾಗಿದ್ದಾಳೆ..? ಎಂಬುದೇ ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಕೊನೆಗೂ ಈ ಯಕ್ಷಪಶ್ನೆಯನ್ನು ಬಿಡಿಸಿರುವ ಪೊಲೀಸರು ಕೊಲೆ‌ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅಷ್ಟಕ್ಕೂ ಆ ಕೊಲೆ ನಡೆದದ್ದಾದ್ರೂ ಯಾಕೆ ಅಂತೀರಾ...ಈ ಸ್ಟೋರಿ ನೋಡಿ..

ಶೀಲದ ಸಂಶಯಕ್ಕೆ ಗಂಡನ ಮನೆಯವರಿಂದ್ಲೇ ಬಲಿಯಾದ್ಲು ಮಹಿಳೆ

ಹೌದು, ತನ್ನ ತಮ್ಮನ ಹೆಂಡತಿಯ ಶೀಲದ ಬಗ್ಗೆ ಸಂಶಯಗೊಂಡು ಸಂಬಂಧಿಕರೊಂದಿಗೆ ಸೇರಿ ನಿದ್ರೆ ಮಾತ್ರೆ ಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇದೇ ತಿಂಗಳು 17 ನೇ ತಾರೀಕಿನಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಮಹಿಳೆಯೊಬ್ಬಳ ಶವ ದೊರೆಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಕುಮಟಾ ಪೊಲೀಸರಿಗೆ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದ್ರೂ, ಚಾಪೆ ಕೆಳಗಿ ಅವಿತಿದ್ದ ಆರೋಪಿಗಳನ್ನು ಪೊಲೀಸರು ರಂಗೋಲಿ ಅಡಿಯಲ್ಲಿ ಹೊಕ್ಕಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಮೂಲದ ಶಿಗ್ಗಾವಿಯ ಯಲ್ಲಮ್ಮ ಯಾನೆ  ತನುಜಾ ಲೋಹಿತ್ ದೊಡ್ಡಮನಿ  (26) ಹತ್ಯೆಯಾದ ಮಹಿಳೆ. ತನುಜಾಳ ಜೊತೆ ಈಕೆಯ ಗಂಡನ ಅಣ್ಣ ಹಾಗೂ ಸಂಬಂಧಿಕರು ಈಕೆಯ ಶೀಲ ಶಂಕಿಸಿ ಈ ಹಿಂದೆ ಜಗಳವಾಡಿದ್ದರು. ಅಲ್ಲದೇ, ತನುಜಾ ನಡತೆಯಿಂದ ಅವರ ಮನೆತನದ ಘನತೆ ಗೌರವ ಹಾಳಾಗುತ್ತಿದೆ ಎಂದು ಭಾವಿಸಿದ ಗಂಡನ ಅಣ್ಣ ಹಾಗೂ ಸಂಬಂಧಿಕರು 16-06-2023 ರಂದು ರಾತ್ರಿ ಕೋಳಿ ಊಟ ಮಾಡಿಸಿ, ತನುಜಾಳಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದರು. ಅವಳು ನಿದ್ರೆಗೆ ಜಾರಿದ ನಂತರ ಕುತ್ತಿಗೆಗೆ ಚೂಡಿದಾರದ ವೇಲ್‌ನಿಂದ ಬಿಗಿದು ಸಾಯಿಸಿ, ಪುರಾವೆ ನಾಶಪಡಿಸುವ ಉದ್ದೇಶದಿಂದ ವಾಹನದಲ್ಲಿ ಹಾಕಿಕೊಂಡು ಬಂದಿದ್ದರು. ಮಧ್ಯರಾತ್ರಿ ವೇಳೆ ಉತ್ತರಕನ್ನಡ ಜಿಲ್ಲೆಯ ಕುಮಟಾ- ಶಿರಸಿ ರಸ್ತೆಯ ದೇವಿಮನೆ ಘಟ್ಟದ ರಸ್ತೆಯ ಪಕ್ಕದ ತಗ್ಗಿನಲ್ಲಿ ಯಲ್ಲಮ್ಮ ಯಾನೆ ತನುಜಾಳ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು ಅಂತ ಉತ್ತರಕನ್ನಡ‌ ಜಿಲ್ಲೆ ಎಸ್ಪಿ ವಿಷ್ಣುವರ್ಧನ ತಿಳಿಸಿದ್ದಾರೆ. 

ಫಾರೆಸ್ಟ್‌ ರೇಂಜರ್‌ ದರ್ಶನಾ ಪವಾರ್‌ ಮರ್ಡರ್‌ ಕೇಸ್‌, ಗೆಳತಿಯನ್ನು ಕೊಂದು ಬೆಟ್ಟದಿಂದ ದೂಡಿದ್ದ ಬಾಯ್‌ಫ್ರೆಂಡ್‌!

ಅಂದಹಾಗೆ, ಈ ಪ್ರಕರಣ ಸಂಬಂಧಿಸಿ ಶಿಗ್ಗಾವಿ ಮೂಲದ ಮಹೇಶ ದೊಡ್ಡಮನಿ(36), ಕಾವ್ಯ ಅಮಿತ್ ಗೋಖಲೆ (20), ನೀಲಕ್ಕ ಚಂದ್ರಪ್ಪ( 50), ಗೌರಮ್ಮ ಮಲ್ಲೇಶ (40), ಮುಂಡಗೋಡಿನ ಅಮಿತ್‌ ಗೋಖಲೆ(26) ಬಂಧಿತ ಆರೋಪಿಗಳು. ತನಿಖಾಧಿಕಾರಿ ತಿಮ್ಮಪ್ಪ ನಾಯ್ಕ ರವರ ನೇತೃತ್ವದಲ್ಲಿ ಪಿಎಸ್‌ಐ ಈ.ಸಿ ಸಂಪತ್ , ಪಿಎಸ್‌ಐ ನವೀನ ನಾಯ್ಕ ಹಾಗೂ ಸಿಹೆಚ್.ಸಿ ದಯಾನಂದ ನಾಯ್ಕ, ಸಿಹೆಚ್‌ಸಿ ಲೋಕೇಶ ಅರಿಶಿಣಗುಪ್ಪಿ, ಸಿಪಿಸಿ ಗುರು ನಾಯಕ ಸಿಪಿಸಿ ಪ್ರದೀಪ್ ನಾಯಕ ಅವರನ್ನೊಳಗೊಂಡ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಬಾಳಿ ಬದುಕಬೇಕಿದ್ದ ತನಿಜಾಳನ್ನು ಸಂಶಯದ ಪಿಶಾಚಿಗಳಾಗಿದ್ದ ಆಕೆಯ ಗಂಡನ ಅಣ್ಣ ಹಾಗೂ ಕುಟುಂಬದ ಸದಸ್ಯರು ಕೊಂದು ಮುಗಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.

ಒಟ್ಟಿನಲ್ಲಿ ತಮ್ಮನ ಪತ್ನಿಯ ಶೀಲ ಶಂಕಿಸಿ ಕುಟುಂಬಸ್ಥರ ಜತೆಗೂಡಿ ಅಣ್ಣ ಕೊಲೆ ಮಾಡಿ ದಟ್ಟ ಕಾಡಿನಲ್ಲಿ ಶವ ಎಸೆದು ಪರಾರಿಯಾಗಿದ್ದರು. ಆದರೆ, ಕಾನೂನು ಕೈ ಬಹಳಷ್ಟು ಉದ್ದ ಅನ್ನೋವಂತೆ ಕೊಲೆ ಮಾಡಿ ತಾವು ಸೇಫ್ ಅಂದ್ಕೊಂಡಿದ್ದ ಈ ದುಷ್ಕರ್ಮಿಗಳನ್ನು ಜೈಲಿಗಟ್ಟಲು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಒಂದು ಜೀವವನ್ನು ಕೊನೆಗೊಳಿಸಿ ಜೀವನ ಹಾಳು ಮಾಡಿದ ಕೊಲೆ ಆರೋಪಿಗಳು ಇದೀಗ ಕಂಬಿ ಎಣಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios